ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸೀರೆ ವಿವಾದ

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಮೇಲೆ ಸಾಗಿದ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ತೊಡಿಸಿದ್ದ ಸೀರೆ ಕುರಿತು ಮೈಸೂರು ಮೇಯರ್‌ ಎಂ.ಜೆ.ರವಿಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಉತ್ಸವಮೂರ್ತಿಗೆ ನಾನು ನೀಡಿದ್ದ ಸೀರೆ ಮೇಲೆ ಮತ್ತೊಂದು ಸೀರೆ ತೊಡಿಸಲಾಗಿತ್ತು’ ಎಂದು ಅವರು ದೂರಿದ್ದಾರೆ.‌‌

‘ಮೈಸೂರು ನಗರದ ಜನರ ಒಳಿತಿಗಾಗಿ ಹಾಗೂ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾಲ್ಕು ಸೀರೆಗಳನ್ನು ಹರಕೆಯಾಗಿ ನೀಡಿದ್ದೆ. ನಾನು ನೀಡಿದ ಒಂದು ಸೀರೆಯನ್ನು ಅರ್ಚಕರು ಉತ್ಸವಮೂರ್ತಿಗೆ ತೊಡಿಸಿದ್ದರು. ಆದರೆ, ಆ ಸೀರೆ ಮೆರವಣಿಗೆ ವೇಳೆ ಕಾಣಲಿಲ್ಲ. ಇದರಿಂದ ಬೇಸರವಾಗಿದೆ’ ಎಂದು ಸೋಮವಾರ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಮನೆಯವರು ತೊಡಿಸಿರಬಹುದು ಎಂದು ಆಗ ಸುಮ್ಮನಾಗಿದ್ದೆ. ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಮೂಡಿಸಿದೆ. ಸೀರೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಮೇಯರ್‌ ನೀಡುವ ಸೀರೆ ಉಡಿಸಬೇಕು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ‌’ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ನೀಡಿದ ಸೀರೆಯನ್ನು ಉತ್ಸವಮೂರ್ತಿಗೆ ತೊಡಿಸಿ ಮೇಯರ್‌ ನೀಡಿದ ಸೀರೆಯನ್ನು ಭುಜದ ಮೇಲೆ ಹಾಕಿದೆವು. ಪಕ್ಕದಲ್ಲಿದ್ದ ಮಹಿಷಾಸುರ ಮರ್ದಿನಿ ವಿಗ್ರಹ ಕಾಣಲಿ ಎಂದು ಅರಮನೆಯಲ್ಲಿ ಒಂದು ಸೀರೆಯನ್ನು ತುಸು ಬದಿಗೆ ಸರಿಸಿದ್ದಾರೆ ಅಷ್ಟೆ’ ಎಂದು ಹೇಳಿದರು.

ವಿಜಯದಶಮಿ ದಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜಂಬೂಸವಾರಿಗೆಂದು ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಅರಮನೆ ಆವರಣಕ್ಕೆ ತರಲಾಗಿತ್ತು.

‘ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಸುವುದನ್ನು ಬಿಟ್ಟು ಎಲ್ಲರೂ ಸೀರೆ ಹಿಂದೆ ಬಿದ್ದಿದ್ದಾರೆ. ಹರಕೆಯಾಗಿ ಯಾವುದೇ ಭಕ್ತರು ಸೀರೆ ನೀಡಿದರೂ ಅದನ್ನು ದೇವಿಗೆ ತೊಡಿಸುತ್ತೇವೆ’ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್‌ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಿ ಹಾಗೂ ಮೇಯರ್‌ ರವಿಕುಮಾರ್‌ ನೀಡಿದ ಸೀರೆಗಳನ್ನು ಉತ್ಸವಮೂರ್ತಿಗೆ ತೊಡಿಸಲಾಗಿತ್ತು

-ಶಶಿಶೇಖರ್‌ ದೀಕ್ಷಿತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT