ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಮುಂದುವರಿದ ಗೊಂದಲ

ಹಾರ್ಡ್‌ವೇರ್‌, ಬಣ್ಣ, ಅಟೊಮೊಬೈಲ್‌ ವಹಿವಾಟು ಕುಂಠಿತ
Last Updated 2 ಅಕ್ಟೋಬರ್ 2017, 19:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ನಂತರ ಮಾರುಕಟ್ಟೆಯಲ್ಲಿ ವಹಿವಾಟು ಮಂದಗತಿಯಲ್ಲಿ ನಡೆದಿದೆ.

ಹಾರ್ಡ್‌ವೇರ್‌, ಎಲೆಕ್ಟ್ರಿಕಲ್‌, ಪೇಂಟ್‌, ಆಟೊಮೊಬೈಲ್‌, ಕ್ರೀಡಾ ಸಾಮಗ್ರಿ ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಶೇ 30 ರಿಂದ 50 ರಷ್ಟು ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

‘ಆಟೊಮೊಬೈಲ್‌ ವಸ್ತುಗಳ ಮೇಲೆ ಶೇ 28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದು ಹೆಚ್ಚಿನ ಹೊರೆಯಾಗಿಲ್ಲ. ಇದರೊಂದಿಗೆ  ಸೇವಾ ತೆರಿಗೆ ರೂಪದಲ್ಲಿ ಶೇ 18 ರಷ್ಟು ಹಾಕುತ್ತಿರುವುದು ಗ್ರಾಹಕರಿಗೆ ಹೊರೆಯಾಗಿದೆ. ಹೀಗಾಗಿ ವಹಿವಾಟು ಕಡಿಮೆಯಾಗಿದೆ. ತೆರಿಗೆಯನ್ನು ಶೇ 15ಕ್ಕೆ ಇಳಿಸಬೇಕು’ ಎನ್ನುತ್ತಾರೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಜಂಟಿ ಕಾರ್ಯದರ್ಶಿ ವಿನಯ ಜವಳಿ.

‘ಈಗಲೂ ಸರ್ವರ್‌ ಸಮಸ್ಯೆ ಇದೆ. ಜತೆಗೆ ಜಿಎಸ್‌ಟಿಗೂ ಮುನ್ನ ಸಂಗ್ರಹಿಸಿಟ್ಟಿದ್ದ ವಸ್ತುಗಳ ಮೇಲಿನ ತೆರಿಗೆ ವಿಧಿಸುವುದು ಸೇರಿದಂತೆ ವಿವಿಧ ಗೊಂದಲಗಳು ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ. ಈ ಕಾರಣಕ್ಕೆ ಕೆಲವರು ಇನ್ನೂ ಜಿಎಸ್‌ಟಿ ಪ್ರಕಾರ ತೆರಿಗೆ ಪಾವತಿಸಿಲ್ಲ’ ಎಂದರು.

‘ಪೇಂಟ್‌ಗೆ ಈ ಮೊದಲು ಶೇ 14.5 ರಷ್ಟು ವ್ಯಾಟ್‌, ಶೇ 12 ರಷ್ಟು ಎಕ್ಸೈಜ್‌ ಡ್ಯುಟಿ ಇತ್ತು. ಈಗ ಒಟ್ಟಾರೆಯಾಗಿ ಶೇ 28 ರಷ್ಟಾಗಿದೆ. ಜಿಎಸ್‌ಟಿ ಜಾರಿ ನಂತರ ಶೇ 1.5 ರಷ್ಟು ಹೆಚ್ಚಾಗಿದೆ. ಈ ಮೊದಲು ಬೇರೆ ರಾಜ್ಯಗಳಿಂದ ತರಿಸುತ್ತಿದ್ದ ಕಚ್ಚಾ ವಸ್ತುಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಈಗ ಇನ್‌ಪುಟ್‌ ಸಬ್ಸಿಡಿಯಾಗಿ ಮರಳಿ ಪಡೆಯಬಹುದಾಗಿದೆ’ ಎಂದು ಹುಬ್ಬಳ್ಳಿಯ ಶ್ರೀಶೈಲ ಪೇಂಟ್ಸ್‌ ಮಾಲೀಕ ಗಿರೀಶ್‌ ನಲವಡೆ ‘ಪ್ರಜಾವಾಣಿ’ಗೆ ಹೇಳಿದರು.

‘ಜಿಎಸ್‌ಟಿಯ ಜತೆಗೆ ಬರ ಹಾಗೂ ನೋಟು ರದ್ದತಿಯ ಕಾರಣದಿಂದ ವ್ಯಾಪಾರ ಕಡಿಮೆಯಾಗಿದೆ. ದೀಪಾವಳಿ ಹಬ್ಬಕ್ಕಾದರೂ ವ್ಯಾಪಾರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದರು.

‘ಕಬ್ಬಿಣ, ಬ್ರೆಥ್‌ ಕಾಂಪೋನೆಂಟ್ಸ್‌ಗೆ ಜಿಎಸ್‌ಟಿಗೂ ಮೊದಲು ಶೇ 14.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಈಗ ಶೇ 18 ರಷ್ಟಾಗಿದೆ. ಕೆಲವರು ಬಿಲ್‌ ಇಲ್ಲದೇ ಸಾಮಗ್ರಿಗಳನ್ನು ನೀಡುವಂತೆ ಕೇಳುತ್ತಿದ್ದಾರೆ. ಹಾಗೆ ನೀಡದ್ದರಿಂದ ವಹಿವಾಟು ಕಡಿಮೆಯಾಗಿದೆ’ ಎನ್ನುತ್ತಾರೆ ಯಾದವಾಡ ಇಂಡಸ್ಟ್ರೀಸ್‌ ಮಾಲೀಕ ರಮೇಶ ಯಾದವಾಡ.

**

ಸ್ಟಾಕ್‌ ಇದ್ದ ಹಳೇ ವಸ್ತುಗಳ ಮೇಲೂ ಕೆಲವರು ಜಿಎಸ್‌ಟಿ ಪ್ರಕಾರ ತೆರಿಗೆ ವಿಧಿಸುತ್ತಿದ್ದಾರೆ. ಹಾಗೇ ಮಾಡದೆ ಹಳೆಯ ದರದಲ್ಲಿಯೇ ಮಾರಾಟ ಮಾಡಬೇಕು. ತೆರಿಗೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ.

–ರಮೇಶ ಪಾಟೀಲ, ಅಧ್ಯಕ್ಷ, ಕೆಸಿಸಿಐ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT