ಬುರ್ಖಾ, ಹಿಜಾಬ್ ಮತ್ತು ಕ್ರಿಕೆಟ್ ಪ್ರೀತಿ

ಗುರುವಾರ , ಜೂನ್ 27, 2019
23 °C
ಕ್ರಿಕೆಟ್ ಅಂಗಳದಲ್ಲಿ ಕಾಶ್ಮೀರ ವನಿತೆಯರ ಸಮಾನತೆಯ ಶೋಧ

ಬುರ್ಖಾ, ಹಿಜಾಬ್ ಮತ್ತು ಕ್ರಿಕೆಟ್ ಪ್ರೀತಿ

Published:
Updated:
ಬುರ್ಖಾ, ಹಿಜಾಬ್ ಮತ್ತು ಕ್ರಿಕೆಟ್ ಪ್ರೀತಿ

ಬಾರಾಮುಲ್ಲಾ, ಕಾಶ್ಮೀರ: ಇಲ್ಲಿಯ ಸರ್ಕಾರಿ ಮಹಿಳಾ ಕಾಲೇಜು ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆ ಹುಡುಗಿಯ ತಲೆಗೆ ಹಿಜಾಬ್‌ ಇತ್ತು. ಬುರ್ಖಾ ಧರಿಸಿದ್ದ ಇನ್ನೊಬ್ಬ ಯುವತಿ ಬೌಲಿಂಗ್ ಹಾಕುತ್ತಿದ್ದರು. ಫೀಲ್ಡಿಂಗ್ ಮಾಡುತ್ತಿದ್ದ ಆಟಗಾರ್ತಿಯರೂ ಇಂತಹದ್ದೇ ಪೋಷಾಕುಗಳಲ್ಲಿದ್ದರು.

ಧಾರ್ಮಿಕ ನಿಯಮಗಳ ಚೌಕಟ್ಟಿನಲ್ಲಿದ್ದುಕೊಂಡೇ ಕ್ರಿಕೆಟ್‌ನಲ್ಲೂ ಸಾಧನೆ ಮಾಡುತ್ತಿರುವ ಯುವತಿಯರು ಇವರು. ಉತ್ತರ ಕಾಶ್ಮೀರದ ಬಾರಾಮುಲ್ಲಾ ನಗರದಲ್ಲಿರುವ ಈ ಕಾಲೇಜಿನ ತಂಡದ ಇನ್ಷಾ ಅವರ ನಾಯಕತ್ವದಲ್ಲಿ ಈಚೆಗೆ ಅಂತರ ವಿಶ್ವವಿದ್ಯಾಲಯ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದೆ.

‘ಬೇಕೌಫ್ ಅಜಾದ್ ರೆಹನಾ ಹೈ ಮುಝೆ (ಯಾವುದೇ ಭಯವಿಲ್ಲದ ಸ್ವಾತಂತ್ರ್ಯದಲ್ಲಿ ನಾನು ಇರುತ್ತೇನೆ)’ ಎಂಬ ಸಾಲುಗಳನ್ನು ಇನ್ಷಾ  ಹೇಳುತ್ತಾರೆ.

21 ವರ್ಷದ ಅವರು ಕಾಲೇಜಿನ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾರೆ.  ಈಚೆಗೆ ಅವರು ಕಾಶ್ಮೀರ ಮಹಿಳಾ ತಂಡದಲ್ಲಿಯೂ ಆಡಿದ್ದರು. ಆಗಲೂ ಹಿಜಾಬ್ ಧರಿಸಿಯೇ ಕಣಕ್ಕಿಳಿದಿದ್ದರು.

‘ಇಲ್ಲಿಯವರೆಗಿನ ನಮ್ಮ ಪ್ರಯಾಣ ಕಷ್ಟದ ಹಾದಿಯಲ್ಲಿ ಸಾಗಿಬಂದಿದೆ. ಟ್ರ್ಯಾಕ್ ಸೂಟ್ ಧರಿಸಿ ಬ್ಯಾಟ್‌ ಹಿಡಿದು ಓಡಾಡಿದಾಗ ಹಲವರು ಟೀಕಿಸಿದ್ದರು. ನನ್ನ ತಂದೆಗೂ ದೂರು ನೀಡಿದ್ದರು. ಆದರೆ ಅಪ್ಪ ಟೀಕಾಕಾರರಿಗೆ ಕಿವಿಗೊಡಲಿಲ್ಲ. ನನ್ನನ್ನು ಬೆಂಬಲಿಸಿದರು’ ಎಂದು ಇನ್ಷಾ ಹೇಳುತ್ತಾರೆ. ಅವರ ತಂದೆ ಬಶೀರ್ ಅಹಮದ್ ಮೀರ್ ಅವರು ಹಣ್ಣಿನ ವ್ಯಾಪಾರಿಯಾಗಿದ್ದಾರೆ.

‘ದರ್ಸಗಾ (ಇಸ್ಲಾಮಿಕ್ ಶಿಕ್ಷಣ ಸಂಸ್ಥೆ) ಶಿಕ್ಷಕರ ಆಶಯಗಳಿಗೆ ವಿರುದ್ಧವಾಗಿ ನಾವು ವರ್ತಿಸುವುದಿಲ್ಲ. ನಾವು ಧಾರ್ಮಿಕ ನಿಯಮಗಳನ್ನು ವಿರೋಧಿಸುವುದಿಲ್ಲ. ಹಾಗಂತ ಕ್ರಿಕೆಟ್‌ ಆಡುವುದನ್ನೂ ಬಿಢುವುದಿಲ್ಲ. ಎರಡನ್ನೂ ಉಳಿಸಿಕೊಂಡು ಹೋಗುತ್ತಿದ್ದೇವೆ. ಅದಕ್ಕಾಗಿ  ನಮ್ಮ ಕುಟುಂಬ ಮತ್ತು ಕಾಲೇಜು ಆಡಳಿತ ಬೆಂಬಲ ನೀಡುತ್ತಿದೆ’ ಎಂದು  ತಂಡದ ಆಟಗಾರ್ತಿ ರಬಿಯಾ ಹೇಳುತ್ತಾರೆ.

ಆಲ್‌ರೌಂಡ್ ಆಟಗಾರ್ತಿಯಾಗಿರುವ ರಬಿಯಾ ಅವರ ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ.

‘ಇನ್ಷಾ ಅವರ ಆಟವನ್ನು ನೋಡಿ ಬೆರಗಾಗಿದ್ದೆ. ಅದಕ್ಕಾಗಿ ಬೆಂಬಲ ನೀಡಲು ನಿರ್ಧರಿಸಿದೆ. ಕಾಲೇಜಿನ ಪ್ರಾಚಾರ್ಯರು ಬೆಂಬಲಿಸಿದರು. ದೈಹಿಕ ಶಿಕ್ಷಕರಾದ ಗುರುದೀಪ್ ಸಿಂಗ್ ಮತ್ತು ಶೌಕತ್ ಅಹಮದ್ ಅವರು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು. ಇನ್ಷಾ ರಾಜ್ಯ ತಂಡದಲ್ಲಿ ಕಲಿತು ಬಂದಿದ್ದ ವ್ಯಾಯಾಮ, ಕೌಶಲಗಳನ್ನು ಸಹ ಆಟಗಾರ್ತಿಯರಿಗೆ ಕಲಿಸಿದರು. ಮೂಲಸೌಲಭ್ಯಗಳ ಕೊರತೆಯಲ್ಲಿಯೂ ಹುಡುಗಿಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ’ ಎಂದು ಕಾಲೇಜಿನ ಉರ್ದು ಪ್ರಾಧ್ಯಾಪಕ ರೆಹಮತ್–ಉಲ್ಲಾ–ಮೀರ್ ಹೇಳುತ್ತಾರೆ.

**

ಮಾತನಾಡುವುದು ಜನರ ಕೆಲಸ. ಅದನ್ನು ಅವರು ಮಾಡಿಕೊಳ್ಳಲಿ. ನನ್ನ ಮಗಳು ದೊಡ್ಡ ಆಟಗಾರ್ತಿಯಾಗಿ ಬೆಳೆಯಲಿ ಎಂಬುದಷ್ಟೇ ನನ್ನ ಆಶಯ.

–ಬಶೀರ್ ಅಹಮದ್ ಮೀರ್, ಇನ್ಷಾ ತಂದೆ

**

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ತಂಡದ ಸಾಧನೆಯ ಬಗ್ಗೆ ಅಭಿಯಾನ ಆರಂಭವಾಗಿದೆ. ಅದರಿಂದಾಗಿ ಒಂದಿಷ್ಟು ಸೌಲಭ್ಯಗಳ ನೆರವು ಸಿಗುವ ನಿರೀಕ್ಷೆ ಇದೆ

ರೆಹಮತ್ ಉಲ್ಲಾ ಮೀರ್,  ಉರ್ದು ಪ್ರಾಧ್ಯಾಪಕ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry