ಮಂಗಳವಾರ, ಸೆಪ್ಟೆಂಬರ್ 17, 2019
25 °C

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಾಚನಾಲಯ

Published:
Updated:
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಾಚನಾಲಯ

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಗಳಲ್ಲಿ ಹೊಸ ವಾಚನಾಲಯ ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ಪರೀಕ್ಷೆಯ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಗಳಿಗೆ ಮೀಸಲಿಟ್ಟು ‘ಎಸ್‌ಎಸ್‌ಎಲ್‌ಸಿ ವಾಚನಾಲಯ’ ಪ್ರಾರಂಭಿಸುವಂತೆ ಉಪನಿರ್ದೇಶಕ ಎಂ.ಎಸ್. ಪ್ರಸನ್ನ ಕುಮಾರ್ ಸೂಚಿಸಿದ್ದಾರೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳನ್ನು ಒಳಗೊಂಡ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 162 ಪ್ರೌಢಶಾಲೆಗಳು ಇವೆ. ಈ ಶಾಲೆಗಳಲ್ಲಿ ಈಗಾಗಲೇ ಇರುವ ವಾಚನಾಲಯಕ್ಕೆ ಹೊಂದಿಕೊಂಡು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ವಾಚನಾಲಯ ರೂಪುಗೊಳ್ಳುತ್ತಿದೆ.

‘ಎಂಟು ವರ್ಷಗಳ ಹಿಂದೆ ಪ್ರಾರಂಭವಾಗಿರುವ ಶೈಕ್ಷಣಿಕ ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದೆ. ಈಗಾಗಲೇ ಅನುಷ್ಠಾನಗೊಳಿಸಿರುವ ಸಂಕಲ್ಪ ಕ್ರಿಯಾ ಯೋಜನೆ, ರಸಪ್ರಶ್ನೆ, ಅಣಕು ಪರೀಕ್ಷೆ ಮತ್ತು ಮೌಲ್ಯಮಾಪನ, ಸರಣಿ ಪರೀಕ್ಷೆಗಳು, ಪ್ರೇರಣಾ ಶಿಬಿರ, ಸಂದರ್ಶನ ಸಪ್ತಾಹಗಳು ಫಲಿತಾಂಶ ಹೆಚ್ಚಳಕ್ಕೆ ಸಹಕಾರಿಯಾಗಿವೆ. ಇದರ ಜೊತೆ ಈ ಬಾರಿ ಹೊಸ ಪ್ರಯತ್ನವಾಗಿ ವಾಚನಾಲಯ ಪ್ರಾರಂಭಿಸಲಾಗುತ್ತಿದೆ’ ಎಂದು ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಾಚನಾಲಯದಲ್ಲಿ ಏನೇನಿದೆ?: ‘ವಿಷಯವಾರು ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರದಲ್ಲಿ ಹೊರಹೊಮ್ಮಿದ ಅಭಿಪ್ರಾಯ ಆಧರಿಸಿ ವಾಚನಾಲಯದ ರೂಪುರೇಷೆ ಸಿದ್ಧಪಡಿಸಲಾಗಿದೆ. ಪುಸ್ತಕಗಳ ವಿವರ, ವಿಷಯವಾರು ವೇದಿಕೆ ಕ್ರಿಯಾ ಯೋಜನೆ, ಪುಸ್ತಕಗಳ ಪರಿಚಯ ಒಳಗೊಂಡ ಮಾರ್ಗದರ್ಶಿ ಕೈಪಿಡಿಯನ್ನು ಎಲ್ಲ ಪ್ರೌಢಶಾಲೆ ಗಳಿಗೆ ಒದಗಿಸಲಾಗುತ್ತದೆ’ ಎಂದು ಹೇಳಿದರು.

‘ಪ್ರತಿ ಶಾಲೆಯ ವಾಚನಾಲಯದಲ್ಲಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು, ಇಂಗ್ಲಿಷ್ ವ್ಯಾಕರಣ ಪುಸ್ತಕಗಳು, ಆಕ್ಸ್‌ಫರ್ಡ್‌ ಡಿಕ್ಷನರಿ, ಪಠ್ಯದಲ್ಲಿರುವ ಪಾಠಗಳಿಗೆ ಸಂಬಂಧಿಸಿದ ಆಕರ ಪುಸ್ತಕಗಳು, ಎನ್‌.ಸಿ.ಇ.ಆರ್‌.ಟಿ ಪುಸ್ತಕಗಳು, ಗಣಿತ ಮಾರ್ಗದರ್ಶಿ, ದಶ ದೀವಿಗೆ ಮಾದರಿ ಪಾಠಗಳು, ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಮಾದರಿ ಪ್ರಶ್ನೆ ಪತ್ರಿಕೆಗಳು, ಹಿಂದಿನ ವರ್ಷಗಳ ಪೂರ್ವಸಿದ್ಧತೆ ಪರೀಕ್ಷೆಯ ಪ್ರಶ್ನೆ ಮತ್ತು ಉತ್ತರ ಪತ್ರಿಕೆ, ಸರಣಿ ಪರೀಕ್ಷೆಗಳ ಉತ್ತರ ಪತ್ರಿಕೆ, ಆಯ್ದ ಹಿರಿಯ ವಿದ್ಯಾರ್ಥಿಗಳು ಮಾಡಿಕೊಂಡ ಟಿಪ್ಪಣಿಗಳು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಝರಾಕ್ಸ್ ಪ್ರತಿ, ಇ– ಲರ್ನಿಂಗ್‌ಗೆ ಸಹಕಾರಿಯಾಗುವ ವೆಬ್‌ಸೈಟ್‌ ವಿವರಗಳು ಇರುತ್ತವೆ’ ಎಂದು ವಿವರಿಸಿದರು.

‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಅನುದಾನದಲ್ಲಿ ಪುಸ್ತಕ ಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆಯ ಹಳೆಯ ವಿದ್ಯಾರ್ಥಿಳಿಂದ ದೇಣಿಗೆ ಪಡೆದು ವಾಚನಲಯವನ್ನು ಸುಸಜ್ಜಿತಗೊಳಿಸಬಹುದು ಎಂದು ಸಲಹೆ ನೀಡಲಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇಲ್ಲಿಸಮಗ್ರ ಮಾಹಿತಿ ದೊರೆಯಬೇಕು. ಗರಿಷ್ಠ ಅಂಕ ಗಳಿಸುವ ವಿದ್ಯಾರ್ಥಿಯಿಂದ ಪಾಸಿಂಗ್ ಮಾರ್ಕ್ಸ್‌ ಪಡೆಯುವ ವಿದ್ಯಾರ್ಥಿಗಳವರೆಗೂ ಇದು ಉಪಯೋಗವಾಗಬೇಕು ಎಂಬುದು ನಮ್ಮಆಶಯ’ ಎಂದು ಪ್ರಸನ್ನಕುಮಾರ್ ತಿಳಿಸಿದರು.

 

ಆರ್ಥಿಕ ಮುಗ್ಗಟ್ಟಿನಿಂದಾಗಿ ಕೂಲಿಕಾರರ ಮಕ್ಕಳು ಪರೀಕ್ಷೆ ಸಿದ್ಧತಾ ಪರಿಕರಗಳಿಂದ ವಂಚಿತರಾಗುವ ಸಂದರ್ಭಗಳಿರುತ್ತವೆ. ಶಾಲೆಗಳಲ್ಲಿಯೇ ವಾಚನಾಲಯ ಪ್ರಾರಂಭಿಸುವುದರಿಂದ ಎಲ್ಲ ಮಕ್ಕಳಿಗೂ ಅನುಕೂಲ

ಎಂ.ಎಸ್. ಪ್ರಸನ್ನಕುಮಾರ್,

ಡಿಡಿಪಿಐ, ಶಿರಸಿ ಶೈಕ್ಷಣಿಕ ಜಿಲ್ಲೆ

Post Comments (+)