ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲೆನಾಡಿನ ಬದುಕು ಅನಾವರಣ’

‘ಮಂಗನಬ್ಯಾಟೆ’ಯ ವೈಚಾರಿಕತೆಯ ಅಂಶ ಕುರಿತು ಉಪನ್ಯಾಸ
Last Updated 3 ಅಕ್ಟೋಬರ್ 2017, 7:00 IST
ಅಕ್ಷರ ಗಾತ್ರ

ಶೃಂಗೇರಿ: ‘ಮಂಗನಬ್ಯಾಟೆ’ ಕೃತಿಯು ಒಬ್ಬ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರಕ್ಕೆ ಮಾರ್ಮಿಕವಾಗಿ ಬೀಸಿದ ಚಾಟಿ ಏಟಾಗಿದೆ. ಕಾದಂಬರಿಯ ಪ್ರಮುಖ ಪಾತ್ರಧಾರಿ ‘ಸಿದ್ಧ’ನ ಜೀವನದ ವೈಯಕ್ತಿಕ ಸಮಸ್ಯೆಗಳು, ಆತ ಕಾನೂನಾತ್ಮಕವಾಗಿ ಎದುರಿಸುವ ಸಂಕಷ್ಟಗಳು ಇಡೀ ಮಲೆನಾಡಿಗರ ಬದುಕನ್ನು ಪ್ರತಿನಿಧಿಸುವ ಸಂಕೇತವಾಗಿದೆ ಎಂದು ಕಡೂರು ಶಾಸಕರಾದ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು.

ಶೃಂಗೇರಿ ತಾಲ್ಲೂಕಿನ ಕನ್ನಡಭವನದಲ್ಲಿ ತಾಲ್ಲೂಕು ಸಾಹಿತ್ಯಾಸಕ್ತರ ವೇದಿಕೆ ಭಾನುವಾರ ಹಮ್ಮಿಕೊಂಡ ಕಲ್ಕುಳಿ ವಿಠಲ ಹೆಗಡೆ ರಚಿಸಿದ ಕೃತಿ ‘ಮಂಗನಬ್ಯಾಟೆ’ಯ ವೈಚಾರಿಕತೆಯ ಅಂಶಗಳನ್ನು ಕುರಿತು ಉಪನ್ಯಾಸ ನೀಡಿದರು.

ಸಾಮಾನ್ಯರಿಗೆ ಸ್ಪಂದಿಸದ ಸರ್ಕಾರದ ವ್ಯವಸ್ಥೆ, ಮಠ-ಮಾನ್ಯಗಳಿಗೆ ಚಿಕ್ಕತೊಂದರೆಯಾದಾಗ ಅದಕ್ಕಾಗಿಯೇ ಒಂದು ಶಾಸನವನ್ನೇ ಶಾಸನಸಭೆಯಲ್ಲಿ ರೂಪಿಸುವುದನ್ನು ಕಂಡಾಗ ರಾಜಕಾರಣಿಗಳು ದುಷ್ಟರಾಗಿ ಕಾಣುತ್ತಾರೆ ಎಂದು ಅಭಿಪ್ರಾಯಪಟ್ಟರು.

ಮಂಗನಬ್ಯಾಟೆ ಒಂದು ಸರಳರೇಖೆಯಲ್ಲಿ ಸಿಗುವ ಕೃತಿಯಲ್ಲ. ಇದು ಶಿವತೋಟ್ಯಾಚಾರ್ಯರು ರಚಿಸಿದ ‘ವಡ್ಡಾರಾಧನೆ’ಯನ್ನು ನೆನಪಿಸುತ್ತದೆ. ಕಥೆಯೊಳಗೊಂದು ಕಥೆಯನ್ನು ಹೆಣೆಯುತ್ತಾ ಆಸಕ್ತಿ ಮೂಡಿಸುತ್ತಾ ಸಾಗುತ್ತದೆ. ಶಿವರಾಮ ಕಾರಂತರ ‘ಅಳಿದ ಮೇಲೆ’ ಕಾದಂಬರಿಯಂತೆ ಪ್ರಧಾನ ಆಶಯಗಳನ್ನು ಇಟ್ಟುಕೊಂಡು ಬರೆದ ಕೃತಿ ಇದ್ದಾಗಿದೆ ಎಂದರು.

ಕಲ್ಕುಳಿ ವಿಠಲ ಹೆಗಡೆ ಅವರು ತಮ್ಮ ಜೀವನದ ಹೋರಾಟದ ಮಜಲುಗಳನ್ನು ಕೃತಿಯಲ್ಲಿ ಮೂಡಿಸುವಾಗ ಸಾಹಿತ್ಯವನ್ನು ಸಮರ್ಥವಾಗಿ ದುಡಿಸಿದ್ದಾರೆ.ಮಲೆನಾಡಿನ ಅಳಿದು ಹೋಗಬಹುದಾದ ಹಲವಾರು ಜೀವಸಂಕುಲ, ಸಂಸ್ಕೃತಿ, ಆಚಾರ, ರೀತಿ, ರಿವಾಜುಗಳು, ಅನಾಚಾರ, ಮೌಢ್ಯಗಳೆಲ್ಲವೂ ಬಟ್ಟಬಯಲು ಮಾಡುತ್ತಾ ಸಾಗುತ್ತಾರೆ. ಕೃತಿಯ ಮೌಲ್ಯವನ್ನು ಓದುಗರ ಚಿಂತನೆಗೆ ಒರೆ ಹಚ್ಚಿಬಿಟ್ಟಿದ್ದಾರೆ ಎಂದರು.

ಮಲೆನಾಡಿನಲ್ಲಿ ತೀಕ್ಷ್ಣವಾದ ವೈಚಾರಿಕೆಯನ್ನು ಮೂಡಿಸುವ ಪ್ರಯತ್ನದಲ್ಲಿ ಈ ಕೃತಿ ಸಫಲವಾಗಿದ್ದು ಮಲೆನಾಡಿನಲ್ಲಿ ಮನುಷ್ಯ ಪರಂಪರೆಯನ್ನು ಉಳಿಸುವತ್ತ ಚಿಂತನೆ ಮಾಡದೆ ಸಿದ್ಧನು ಬೆಳೆಸಿದ ಬೆಳೆಗಳನ್ನು ಸರ್ವನಾಶ ಮಾಡಿದ ಮಂಗಗಳ ಕೃತ್ಯಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗದಿರುವುದನ್ನು ಉಲ್ಲೇಖಿಸಿದ ಲೇಖಕರು, ಶ್ರೀಮಂತರಿಗಿಂತ ಜನಸಾಮಾನ್ಯರಿಗೆ ಸ್ಪಂದಿಸುವುದು ಶಾಸನದ ಕರ್ತವ್ಯ. ಆದರೆ, ಅದನ್ನು ರಾಜಕಾರಣಿಗಳು ಮರೆತುಬಿಟ್ಟಿದ್ದಾರೆ. ಸಂಶೋಧನೆಗೆ ಆರ್ಹವಾಗಿರುವ ಈ ಕೃತಿ ಮಲೆನಾಡಿನ ವಿಸ್ಮಯಗಳನ್ನು ಮೂಡಿಸುವಲ್ಲಿ ಯಶಸ್ಸು ಕಂಡಿದೆ. ಆದರೆ, ಜಿಲ್ಲೆಯಲ್ಲಿ ಪ್ರಸ್ತುತ ಸಾಹಿತ್ಯದ ಸಂಘಟನೆಯ ದಾರಿದ್ರ್ಯ ಎದ್ದು ಕಾಣುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಡಾ.ರಾಮಚಂದ್ರರಾವ್ ಮಾತನಾಡಿ, ‘ಮಲೆನಾಡನ್ನು ಶಾಶ್ವತವಾಗಿ ಕೃತಿಯಲ್ಲಿ ದಾಖಲೀಕರಣಗೊಳಿಸಲಾಗಿದೆ. ಇದು ಅನ್ಯಭಾಷೆಯಲ್ಲಿ ಪ್ರಕಟಗೊಂಡಾಗ ವಿಶ್ವದಲ್ಲಿ ಮಲೆನಾಡಿನ ಸಂಸ್ಕೃತಿಯನ್ನು ತೆರೆದಿಡಬಹುದಾಗಿದೆ’ ಎಂದರು.

ಲೇಖಕ ಕಲ್ಕುಳ್ಳಿ ವಿಠಲಹೆಗಡೆ, ಪ್ರದೀಪ್ ಯಡದಾಳು, ಅಧ್ಯಾಪಕ ಮಂಜುನಾಥಗೌಡ, ಉಪನ್ಯಾಸಕ ಎಚ್.ಎ.ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT