ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ಮುಕ್ತ ರಾಜ್ಯಕ್ಕೆ ಕ್ರಮ: ಸಚಿವ

ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆಯಲ್ಲಿ ಸಚಿವ ಪ್ರಮೋದ್‌
Last Updated 3 ಅಕ್ಟೋಬರ್ 2017, 11:04 IST
ಅಕ್ಷರ ಗಾತ್ರ

ಉಡುಪಿ: ‘ಮಹಾತ್ಮ ಗಾಂಧೀಜಿ ಅವರು ದೇಶದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಗಾಂಧಿ ಜಯಂತಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ದೇಶಕಂಡ ಮಹಾನ್ ಚೇತನಗಳು. ಅವರಿಂದಾಗಿ ಹಲವಾರು ಪ್ರಮುಖ ಯೋಜನೆಗಳು ಜಾರಿಗೊಂಡಿವೆ’ ಎಂದರು.

‘ದೇಶದ ಕಟ್ಟ ಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು, ಆರ್ಥಿಕ ಶಕ್ತಿ ಸಿಗಬೇಕು ಎಂಬುದು ಗಾಂಧೀಜಿ ಕನಸಾಗಿತ್ತು. ಅವರದ್ದೇ ಆದರ್ಶ ಪಾಲಿಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡಿತು.

ಈಗ ರಾಜ್ಯ ಸರ್ಕಾರ ಸಹ ಮಹಾತ್ಮರ ಕಲ್ಪನೆಯಂತೆ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ‘ಅನ್ನ ಭಾಗ್ಯ’ ಯೋಜನೆ ಜಾರಿಗೊಳಿಸಿದೆ. ರಾಜ್ಯ ಹಸಿವು ಮುಕ್ತವಾಗುತ್ತಿದೆ’ ಎಂದರು.

ಗಾಂಧೀಜಿ ಅವರ ಸಿದ್ಧಾಂತಗಳು ಹಾಗೂ ಶಾಸ್ತ್ರಿ ಅವರ ‘ಜೈ ಜವಾನ್ ಜೈ ಕಿಸಾನ್’ ಘೋಷಣೆಗಳು ಈಗಲೂ ಪ್ರಸ್ತುವಾಗಿವೆ. ಗಾಂಧೀಜಿ ಅವರ ಸರಳ ಜೀವನ ನಡೆಸಿದರು. ಶಾಸ್ತ್ರಿ ಅವರು ಹರಿದ ಧೋತಿಯನ್ನು ಹೊಲಿದುಕೊಂಡು ಧರಿಸುತ್ತಿದ್ದರು. ಆದರೆ ಈಗಿನ ಪ್ರಧಾನಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಿದೇಶಿ ಉಡುಪುಗಳನ್ನು ಧರಿಸುತ್ತಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದಿರುವವರು ಯಾವ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ ಎಂದು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ಟೀಕಿಸಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಪಕ್ಷದ ಮುಖಂಡರಾದ ದಿನೇಶ್ ಪುತ್ರನ್‌, ಕೇಶವ ಕೋಟ್ಯಾನ್‌, ಅಶೋಕ್ ಕುಮಾರ್‌ ಕೊಡವೂರು, ಚಂದ್ರಿಕಾ ಶೆಟ್ಟಿ, ಸುಜಯ ಪೂಜಾರಿ, ಜ್ಯೋತಿ ಹೆಬ್ಬಾರ್‌, ನೀರಜ್ ಪಾಟೀಲ್‌, ಯುವರಾಜ್‌, ಸತೀಶ್ ಕೊಡವೂರು, ಚಂದ್ರಮೋಹನ್, ಧನ್‌ಪಾಲ್ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮಿನ್ ಪಡುಕರೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಭಂಡಾರ್ಕಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT