ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಷಾ ಗಿಮಿಕ್‌ ನಡೆಯಲ್ಲ: ಸಿದ್ದರಾಮಯ್ಯ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಮಾಡುವ ಮಾತು ಹಾಗೂ ಅಮಿತ್‌ ಷಾ ಅವರ ಗಿಮಿಕ್ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಮಂಗಳವಾರ ಹೇಳಿದರು.

‘ಕಾಂಗ್ರೆಸ್‌ ಸರ್ಕಾರದ ಬಗೆಗೆ ರಾಜ್ಯದ ಜನರು ಒಲವು ಇಟ್ಟುಕೊಂಡಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಜನರನ್ನು ತಲುಪಿವೆ. ಮತದಾರರು ಮತ್ತೆ ನಮ್ಮ ಮೇಲೆ ವಿಶ್ವಾಸ ಇಡುತ್ತಾರೆ ಎಂಬ ಬಲವಾದ ನಂಬಿಕೆ ಇದೆ. ಷಾ ಅವರು ಮಂಗಳೂರಿಗೆ, ಮೈಸೂರಿಗೆ ಬರುವುದರಿಂದ ಮತದಾರರ ಮನಸು ಬದಲಾಗದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಜನರನ್ನು ಬಹುದಿನ ಭಾವನಾತ್ಮಕವಾಗಿ ಹಿಡಿದಿಡಲು ಸಾಧ್ಯವಿಲ್ಲ. ಮೋದಿ ಅವರ ಬಗೆಗೆ ಇದ್ದ ಭ್ರಮೆ ಕೂಡ ಮಾಯವಾಗುತ್ತಿದೆ. ಆರ್ಥಿಕ ಸ್ಥಿತಿಗತಿ ಅಧೋಗತಿಗೆ ಇಳಿದಿರುವ ಕುರಿತು ಬಿಜೆಪಿ ಮುಖಂಡರಾದ ಯಶವಂತ ಸಿನ್ಹಾ, ಮೋದಿ ಕಾರ್ಯವೈಖರಿಯ ಬಗ್ಗೆ ಸುಬ್ರಮಣಿಯನ್ ಸ್ವಾಮಿ, ಎಲ್‌.ಕೆ.ಅಡ್ವಾಣಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಗೆ ಹೋದ ಬಳಿಕ ಎಸ್‌.ಎಂ.ಕೃಷ್ಣ ಅವರಿಗೆ ಸತ್ಯದ ಅರಿವಾಗಿದೆ. ಮೋದಿ ಎಷ್ಟೇ ಮನ್‌ ಕಿ ಬಾತ್‌ ಆಡಿದರೂ ಪ್ರಯೋಜನವಾಗದು. ಜನತೆ ಬದಲಾವಣೆ ಬಯಸುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಹರಿಹರ ಕ್ಷೇತ್ರದಿಂದ ಸ್ಪರ್ಧಿಸುವಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಆಹ್ವಾನ ನೀಡಿದ್ದಾರೆ. ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್‌ ಸೂಚಿಸಿದರೆ ಅದನ್ನೂ ಪಾಲಿಸುತ್ತೇನೆ’ ಎಂದರು.

‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ನಡೆಯುತ್ತಿರುವ ಚಳವಳಿ ಕಾಂಗ್ರೆಸ್‌ ಪ್ರಾಯೋಜಿತ ಎಂಬುದು ಸತ್ಯಕ್ಕೆ ದೂರವಾದದು. ಚಳವಳಿಗಾರರು, ವಿಚಾರವಾದಿಗಳು, ಸಾಮಾಜಿಕ ಕಾರ್ಯಕರ್ತರು ಸರ್ಕಾರದ ಮಾತನ್ನು ಕೇಳುವುದಿಲ್ಲ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ಒಂದಷ್ಟು ಪ್ರಗತಿ ಆಗಿರುವುದು ನಿಜ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಮಾನ್ಯತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ದೆಹಲಿಗೆ ಭೇಟಿ ನೀಡಿದಾಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೆಕರ್ ಬಳಿಯೂ ಚರ್ಚಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT