ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು ವೆಬ್‌ಸೈಟ್‌ ಹ್ಯಾಕ್ ಮಾಡಿದ ವಿದ್ಯಾರ್ಥಿ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವೆಬ್‌ಸೈಟ್ ಸುರಕ್ಷಿತವಾಗಿಲ್ಲ ಎಂಬುದನ್ನು ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಹ್ಯಾಕ್‌ ಮಾಡುವ ಮೂಲಕ ಸಾಬೀತು ಪಡಿಸಿದ್ದಾನೆ.

ಬೆಂಗಳೂರಿನ ಬೃಂದಾವನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ (ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್) ಅಂತಿಮ ವರ್ಷ ಓದುತ್ತಿರುವ ಎಸ್. ಶ್ರವಣ್‌ಕುಮಾರ್ ವೆಬ್‌ಸೈಟ್ ಹ್ಯಾಕ್ ಮಾಡಿದ ವಿದ್ಯಾರ್ಥಿ. ‘ಇದನ್ನು ಸರಿಪಡಿಸಿ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅಧಿಕಾರಿಗಳಿಗೆ ತಿಳಿಸಿ ಎರಡು ವಾರ ಕಳೆದರೂ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ’ ಎಂದು ಶ್ರವಣ್‌ ಕುಮಾರ್, ‘ಪ್ರಜಾವಾಣಿ’ಗೆ ತಿಳಿಸಿದ್ದಾನೆ.

‘ಬಿ.ಇ ಮೂರನೇ ವರ್ಷದ ಫಲಿತಾಂಶ ಪ್ರಕಟವಾದ ನಂತರ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಲು ವಿಟಿಯು ಫಲಿತಾಂಶಕ್ಕೆ ಸಂಬಂಧಿಸಿದ ಡೊಮೈನ್ ಹ್ಯಾಕ್ ಮಾಡಿ ಅರ್ಜಿ ಸಲ್ಲಿಸಿದೆ. ಶುಲ್ಕ ಪಾವತಿಸದಿದ್ದರೂ ನನ್ನ ಅರ್ಜಿ ಸ್ವೀಕೃತ ಆಯಿತು. ಕೂಡಲೇ ಇದನ್ನು ಕಾಲೇಜಿನ ಪ್ರಾಂಶುಪಾಲರ ಗಮನಕ್ಕೆ ತಂದಿದ್ದೆ. ಅವರು ನಾಗರಬಾವಿಯಲ್ಲಿರುವ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯ ಗಮನಕ್ಕೆ ತಂದರು. ಅಲ್ಲಿಂದ ನನಗೆ ಕರೆ ಬಂದಿತು. ಅಲ್ಲಿಗೆ ಹೋಗಿ ಅವರ ಮುಂದೆಯೇ ವೆಬ್‌ಸೈಟ್ ಹ್ಯಾಕ್ ಮಾಡಿ ತೋರಿಸಿದೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು ಕೂಡಲೇ ವೆಬ್‌ಸೈಟ್ ಭದ್ರತೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಆದರೆ, ವೆಬ್‌ಸೈಟ್ ಸ್ಥಿತಿ ಈಗಲೂ ಹಾಗೆಯೇ ಇದೆ’ ಎಂದು ಶ್ರವಣ್‌ ವಿವರಿಸಿದ್ದಾನೆ.

‘ಮುಖ್ಯ ವೆಬ್‌ಸೈಟ್‌ನಲ್ಲಿ (http://vtu.ac.in) ಫಲಿತಾಂಶ, ಪ್ರಯೋಗಾಲಯದ ಆಂತರಿಕ ಅಂಕಗಳು, ಮರು ಮೌಲ್ಯಮಾಪನಕ್ಕೆ ಸಂಬಂಧಿಸಿದ ಡೊಮೈನ್‌ಗಳಿವೆ. ಇವುಗಳನ್ನು ಸುಲಭವಾಗಿ ಹ್ಯಾಕ್ ಮಾಡಿ ಅಂಕಗಳಲ್ಲಿ ಬದಲಾವಣೆ ಮಾಡಬಹುದಾಗಿದೆ. ಮುಖ್ಯವಾಗಿ ವಿಶ್ವವಿದ್ಯಾಲಯ ಸಂಯೋಜನೆ ನೀಡಿರುವ 220 ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿಯ ವೇತನ, ಆಧಾರ್‌ ಸಂಖ್ಯೆ ಸಹಿತ ಎಲ್ಲ ವೈಯಕ್ತಿಕ ವಿವರಗಳೂ ಸಿಗುತ್ತಿವೆ’ ಎಂದು ವಿದ್ಯಾರ್ಥಿ ತಿಳಿಸಿದ್ದಾನೆ.

‘ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಸಂಬಂಧ ವೃತ್ತಿಪರ ತರಬೇತಿ ಮತ್ತು ಪ್ರಮಾಣ ಪತ್ರವನ್ನೂ ಪಡೆದಿದ್ದೇನೆ. ಇದೇ ರೀತಿ ಅನೇಕ ವೆಬ್‌ಸೈಟ್‌ಗಳ ಸುರಕ್ಷತೆ ಪರಿಶೀಲಿಸಿ ಸಂಬಂಧಿಸಿದ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೇನೆ. ವರ್ಷಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಎಂಜಿನಿಯರ್‌ಗಳಿಗೆ ಪದವಿ ನೀಡುವ ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೆ ಸುರಕ್ಷತೆ ಇಲ್ಲ. ಸಂಬಂಧಿಸಿದವರು ಮಾಹಿತಿ ಕೇಳಿದರೆ ವೆಬ್‌ಸೈಟ್ ಸುರಕ್ಷತೆಗಾಗಿ ಅಗತ್ಯ ಸಲಹೆಗಳನ್ನು ನೀಡಲು ಸಿದ್ಧ’ ಎಂದು ಶ್ರವಣ್ ಹೇಳಿದ್ದಾನೆ.

**

ವಿಟಿಯು ವೆಬ್‌ಸೈಟ್‌ ಮರು ವಿನ್ಯಾಸ ಮಾಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ, ಇದನ್ನು ಹ್ಯಾಕ್‌ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮ ವಹಿಸಲಾಗುವುದು
– ಡಾ.ಎಚ್.ಎನ್. ಜಗನ್ನಾಥ ರೆಡ್ಡಿ, ವಿಟಿಯು ರಿಜಿಸ್ಟ್ರಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT