ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳ ನಿಯಂತ್ರಣ ಮಸೂದೆ: ಸಭಾಧ್ಯಕ್ಷರಿಗೆ ವರದಿ

ಜಂಟಿ ಪರಿಶೀಲನಾ ಸಮಿತಿ ವರದಿಗೆ ಬಿಜೆಪಿ ಅಸಮ್ಮತಿ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಮಸೂದೆ ಪರಿಶೀಲಿಸಲು ರಚಿಸಲಾಗಿದ್ದ ಜಂಟಿ ಪರಿಶೀಲನಾ ಸಮಿತಿಯು ವಿಧಾನಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರಿಗೆ ಮಂಗಳವಾರ ವರದಿ ಸಲ್ಲಿಸಿದೆ.

ಆದರೆ, ‘ಸರ್ಕಾರಿ ಆಸ್ಪತ್ರೆಗಳನ್ನು ಮಸೂದೆ ವ್ಯಾಪ್ತಿಗೆ ತರಬೇಕು, ನಿರ್ಲಕ್ಷ್ಯಕ್ಕೆ ಜೈಲು ಶಿಕ್ಷೆ ವಿಧಿಸುವುದನ್ನು ಕೈಬಿಡಬೇಕು’ ಎಂಬ ಬೇಡಿಕೆ ಸೇರಿ ಕೆಲವು ಪ್ರಮುಖ ಬದಲಾವಣೆಯ ಬೇಡಿಕೆ ಮಂಡಿಸಿರುವ ಸದನ ಸಮಿತಿಯಲ್ಲಿದ್ದ ಬಿಜೆಪಿಯ ನಾಲ್ವರು ಸದಸ್ಯರು, ವರದಿಗೆ ತಮ್ಮ ಸಹಮತ ಇಲ್ಲ ಎಂದು ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಜೂನ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಿತ್ತು. ಸುದೀರ್ಘ ಚರ್ಚೆ ಬಳಿಕ, ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸುವಂತೆ ಉಭಯ ಸದನಗಳಲ್ಲೂ ಬೇಡಿಕೆ ವ್ಯಕ್ತವಾಗಿತ್ತು.ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.

ವರದಿಯಲ್ಲಿ ಏನಿದೆ?

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲ ನೀಡದೇ ರೋಗಿ ಸತ್ತುಹೋದಲ್ಲಿ, ಬಾಕಿ ಹಣ ಪಾವತಿ ಮಾಡುವವರೆಗೂ ಹೆಣ ನೀಡುವುದಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಷರತ್ತು ವಿಧಿಸುವಂತಿಲ್ಲ. ಅಂತಹ ಆಸ್ಪತ್ರೆಗಳ ಆಡಳಿತ ಮಂಡಳಿಯನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಒಂದು ವೇಳೆ ರೋಗಿಯ ಸಂಬಂಧಿಕರು ಬಾಕಿ ಹಣ ಪಾವತಿಸಲು ವಿಫಲರಾದಲ್ಲಿ, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಬಾಕಿ ಹಣ ಪಾವತಿಸಲು ಮಸೂದೆ ಅವಕಾಶ ಕಲ್ಪಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗೆ ನಿರ್ದಿಷ್ಟ ದರ ನಿಗದಿ ಮಾಡಲು ಮಸೂದೆ ಅವಕಾಶ ಒದಗಿಸಲಿದೆ. ಸರ್ಕಾರವು ತಜ್ಞರ ಸಮಿತಿಯ ಶಿಫಾರಸನ್ನು ಆಧರಿಸಿ, ವಿವಿಧ ದರಗಳನ್ನು ನಿಗದಿ ಮಾಡಬಹುದಾಗಿದೆ.

ಸರ್ಕಾರವು ನಿಗದಿಪಡಿಸಿದ ದರವನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಮಸೂದೆ ಹೇಳಿದೆ.

ಸದನದ ಮುಂದೆ ಮಂಡಿಸಿದ ವರದಿಯಲ್ಲಿ ಸರ್ಕಾರಿ ಆಸ್ಪತ್ರೆಗಳ 200 ಮೀಟರ್ ವ್ಯಾಪ್ತಿಯ ಒಳಗೆ ಯಾವುದೇ ಖಾಸಗಿ ವೈದ್ಯಕೀಯ ರೋಗ ಪತ್ತೆ ಪ್ರಯೋಗಾಲಯ ಇರಬಾರದು ಎಂಬ ಷರತ್ತು ಇತ್ತು. ಇದನ್ನು ತೆಗೆದುಹಾಕಿರುವ ಜಂಟಿ ಪರಿಶೀಲನಾ ಸಮಿತಿಯು, ಈಗಾಗಲೇ ಇರುವ ರೋಗ ಪತ್ತೆ ಪ್ರಯೋಗಾಲಯಗಳಿಗೆ ಇದನ್ನು ಅನ್ವಯಿಸುವುದು ಬೇಡ. ಇನ್ನು ಮುಂದೆ ಪ್ರಯೋಗಾಲಯಕ್ಕೆ ಅನುಮತಿ ನೀಡುವಾಗ, ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಶಿಫಾರಸು ಮಾಡಿದೆ.

ರೋಗಿ ಅಥವಾ ಗಾಯಾಳುವಿಗೆ ತುರ್ತಾಗಿ ಜೀವ ರಕ್ಷಕ ಚಿಕಿತ್ಸೆ ಅಗತ್ಯ ಇದ್ದ ಸಂದರ್ಭದಲ್ಲಿ ಆರೋಗ್ಯ ಸೇವೆ ನಿರಾಕರಿಸುವ ವೈದ್ಯರು, ಸಿಬ್ಬಂದಿ, ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆ ಕಲ್ಪಿಸಿದೆ. ಅಲ್ಲದೇ, ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದಾಗಿ ರೋಗಿಯ ಜೀವಕ್ಕೆ ಕುತ್ತು ಬಂದರೆ ಅದಕ್ಕೆ ಹೊಣೆಯಾದವರಿಗೆ ಕಾರಾಗೃಹ ಶಿಕ್ಷೆ ವಿಧಿಸಲು ಮಸೂದೆ ಅವಕಾಶ ನೀಡಿದೆ.

**

ಬಿಜೆಪಿ ತಕರಾರು ಏನು?

‘ಸರ್ಕಾರಿ ಆಸ್ಪತ್ರೆಗಳನ್ನು ಮಸೂದೆ ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆ ಸೇರಿ ಕೆಲವು ಬದಲಾವಣೆ ತರುವಂತೆ ಕೋರಿ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಸಮಿತಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

‘ನಮ್ಮೆಲ್ಲರ ಸಹಮತ ಇಲ್ಲದೇ ಇರುವುದನ್ನು ಪರಿಗಣಿಸಿ ಮಸೂದೆಯಲ್ಲಿ ಸೂಕ್ತ ಬದಲಾವಣೆ ಮಾಡಬೇಕು’ ಎಂದು ಕೋರಿರುವುದಾಗಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

* ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿಸಿ, ರೋಗಿಗಳ ನಿರ್ಲಕ್ಷ್ಯಕ್ಕೆ ವೈದ್ಯರು ಮತ್ತು ಸಿಬ್ಬಂದಿಯನ್ನು ಜವಾಬ್ದಾರರಾಗಿಸುವ ಪ್ರಯತ್ನವಾದರೆ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವುದು ಕಡಿಮೆಯಾಗಲಿದೆ. ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ವಿಕ್ರಂ ಜಿತ್ ಸೇನ್‌ ಸಮಿತಿ ಶಿಫಾರಸು ಕೂಡ ಇದನ್ನೇ ಹೇಳಿತ್ತು.

* ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2010ರಲ್ಲಿ ಜಾರಿಗೆ ತಂದಿರುವ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಬೇಕು.

* ಇರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು(ಆಸ್ಪತ್ರೆಗಳನ್ನು) ಸೇವೆ ಮತ್ತು ಗುಣಮಟ್ಟದ ಆಧಾರದ ಮೇಲೆ ಎ,ಬಿ ಮತ್ತು ಸಿ ಎಂದು ವರ್ಗೀಕರಿಸಬೇಕು. ಅದರ ಆಧಾರದ ಮೇಲೆ ಸರ್ಕಾರ ಮಾರ್ಗಸೂಚಿ ರಚಿಸಬೇಕು.

* ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳಿಗೆ ನಿಗದಿ ಮಾಡುವ ನಿಖರ ವೆಚ್ಚ ಗುರುತಿಸಿ, ಅದರ ಆಧಾರದ ಮೇಲೆ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಬೇಕು.

* ಕಾರಾಗೃಹ ಶಿಕ್ಷೆ ವಿಧಿಸುವ ವಿಷಯವನ್ನು ಕೈಬಿಡಬೇಕು ಹಾಗೂ ದೂರನ್ನು ಆಧರಿಸಿ ನ್ಯಾಯಾಲಯಗಳು ವಿಧಿಸುವ ದಂಡ ಮತ್ತು ಶಿಕ್ಷೆಯೇ ಅಂತಿಮವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT