ಚೀನಾ ಓಪನ್‌ ಟೆನಿಸ್‌ ಟೂರ್ನಿ ಮೂರನೇ ಸುತ್ತಿಗೆ ಶರಪೋವಾ

ಭಾನುವಾರ, ಮೇ 26, 2019
27 °C

ಚೀನಾ ಓಪನ್‌ ಟೆನಿಸ್‌ ಟೂರ್ನಿ ಮೂರನೇ ಸುತ್ತಿಗೆ ಶರಪೋವಾ

Published:
Updated:
ಚೀನಾ ಓಪನ್‌ ಟೆನಿಸ್‌ ಟೂರ್ನಿ ಮೂರನೇ ಸುತ್ತಿಗೆ ಶರಪೋವಾ

ಬೀಜಿಂಗ್‌: ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ ಅವರು ಚೀನಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಶರಪೋವಾ 6–4, 4–6, 6–1ರಲ್ಲಿ ರಷ್ಯಾದವರೇ ಆದ ಏಕ್ತರಿನಾ ಮಕರೋವಾ ಅವರನ್ನು ‍ಪರಾಭವಗೊಳಿಸಿದರು.

ಮೊದಲ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಬಳಿಕ ಮರಿಯಾ ಮೋಡಿ ಮಾಡಿದರು. ಶರವೇಗದ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ಸೆಟ್‌ ಗೆದ್ದು ಮುನ್ನಡೆ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲೂ ಇಬ್ಬರೂ ತುರುಸಿನ ಪೈಪೋಟಿ ನಡೆಸಿದರು. ಹೀಗಾಗಿ ಎಂಟನೇ ಗೇಮ್‌ಗಳವರೆಗೂ ಆಟ ರೋಚಕತೆ ಕಾಯ್ದುಕೊಂಡಿತ್ತು. ಆ ನಂತರ ಮಕರೋವಾ ಮಂಕಾದರು. ಶರಪೋವಾ ರ‍್ಯಾಕೆಟ್‌ನಿಂದ ಸಿಡಿ ಯುತ್ತಿದ್ದ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳಿಗೆ ನಿರುತ್ತರರಾದ ಅವರು ಸೆಟ್‌ ಕೈಚೆಲ್ಲಿ ಹಿನ್ನಡೆ ಅನುಭವಿಸಿದರು.

ಆರಂಭಿಕ ಎರಡು ಸೆಟ್‌ಗಳಲ್ಲಿ ಗೆದ್ದು ವಿಶ್ವಾಸದಿಂದ ಪುಟಿಯುತ್ತಿದ್ದ ಮರಿಯಾ, ಮೂರನೇ ಸೆಟ್‌ನಲ್ಲೂ ಅಬ್ಬರಿಸಿದರು. ಮಿಂಚಿನ ಗತಿಯ ಸರ್ವ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಅವರು ಎದುರಾಳಿ ಬಾರಿಸಿದ ಚೆಂಡನ್ನು ಹಿಂತಿರುಗಿಸುವಲ್ಲೂ ಚಾಕಚಕ್ಯತೆ ತೋರಿ ಗೇಮ್‌ ಗೆದ್ದುಕೊಂಡರು.

ಮೊದಲ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡಿದ್ದ ಮಕರೋವಾ ಆ ನಂತರ ಸಾಕಷ್ಟು ಬಳಲಿದಂತೆ ಕಂಡರು. ಹೀಗಾಗಿ ಅವರಿಗೆ ಎಂದಿನ ಲಯದಲ್ಲಿ ಆಡಲು ಆಗಲಿಲ್ಲ. ಇದರ ಪೂರ್ಣ ಲಾಭ ಎತ್ತಿಕೊಂಡ ಶರಪೋವಾ ಏಕಪಕ್ಷೀಯವಾಗಿ ಗೆಲುವಿನ ತೋರಣ ಕಟ್ಟಿದರು.

ಮೂರನೇ ಸುತ್ತಿನಲ್ಲಿ ಶರಪೋವಾ, ರುಮೇನಿಯಾದ ಸಿಮೊನಾ ಹಲೆಪ್‌ ವಿರುದ್ಧ ಆಡುವರು. ಇನ್ನೊಂದು ಪಂದ್ಯ ದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿರುವ ಹಲೆಪ್‌ 6–1, 2–1ರಿಂದ ಮಗ್ದಲಿನಾ ರ‍್ಯಾಬರಿಕೋವಾ ಅವ ರನ್ನು ಮಣಿಸಿದರು. ಮಗ್ದಲೆನಾ, ಗಾಯದಿಂದಾಗಿ ಹಿಂದೆ ಸರಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಸೊರಾನ ಕ್ರಿಸ್ಟಿ 7–6, 6–0ರಲ್ಲಿ ಕ್ರಿಸ್ಟಿನಾ ಮೆಕ್‌ಹಾಲೆ ಎದುರೂ, ಕ್ಯಾರೋಲಿನಾ ಪ್ಲಿಸ್ಕೋವಾ 6–4, 6–4ರಲ್ಲಿ ಆ್ಯಂಡ್ರಿಯಾ ಪೆಟ್‌ಕೊವಿಚ್‌ ಮೇಲೂ, ಡೇರಿಯಾ ಗ್ಯಾವರಿಲೋವಾ 6–3, 2–0ರಲ್ಲಿ ಕೊಕೊ ವೆಂಡೆವೆಘೆ ವಿರುದ್ಧವೂ, ಬಾರ್ಬೊರಾ ಸ್ಟ್ರೈಕೋವಾ 6–4, 6–2ರಲ್ಲಿ ಜೂಲಿಯಾ ಜಾರ್ಜೆಸ್‌ ಮೇಲೂ, ಪೆಟ್ರಾ ಕ್ವಿಟೋವಾ 6–4, 6–4ರಲ್ಲಿ ವರ್ವರಾ ಲೆಪಚೆಂಕೊ ವಿರುದ್ಧವೂ, ಡೇರಿಯಾ ಕಸಾತ್ಕಿನಾ 6–4, 7–5ರಲ್ಲಿ ಲಾರಾ ಅರುಬರೆನಾ ವೆಸಿನೊ ಮೇಲೂ, ಎಲಿನಾ ವೆಸ್ನಿನಾ 6–3, 6–2ರಲ್ಲಿ ಡುವಾನ್‌ ಯಿಂಗ್‌ ತಿಂಗ್‌ ವಿರುದ್ಧವೂ ಗೆದ್ದರು.

ನಡಾಲ್‌ ಶುಭಾರಂಭ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಶುಭಾರಂಭ ಮಾಡಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಡಾಲ್‌, ಮೊದಲ ಸುತ್ತಿನಲ್ಲಿ 4–6, 7–6, 7–5ರಲ್ಲಿ ಫ್ರಾನ್ಸ್‌ನ ಲುಕಾಸ್‌ ಪೌವಿಲ್ಲೆ ಅವರನ್ನು ಸೋಲಿಸಿದರು. ಈ ಪಂದ್ಯದಲ್ಲಿ ನಡಾಲ್‌ ಎರಡು ‘ಮ್ಯಾಚ್‌ ಪಾಯಿಂಟ್‌’ಗಳನ್ನು ಕಾಪಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry