ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಸ್ನೇಹಿ ಆಡಳಿತ ಜಾರಿಗೆ ತನ್ನಿ’

ರಾಯಚೂರು: ವಿಚಾರ ಸಂಕಿರಣ, ಸರ್ಕಾರಿ ನೌಕರರ ಜಿಲ್ಲಾ ಘಟಕದ ಸಮಾವೇಶ
Last Updated 5 ಅಕ್ಟೋಬರ್ 2017, 9:53 IST
ಅಕ್ಷರ ಗಾತ್ರ

ರಾಯಚೂರು: ‘ನೆಹರೂ ಕಾಲದಿಂದ ಇಂದಿನವರೆಗೂ ಪ್ರಜಾಸ್ನೇಹಿ ಆಡಳಿತದ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ, ಪ್ರಜಾಸ್ನೇಹಿ ಆಡಳಿತ ಆಗಿದೆಯೇ ಎಂಬುದನ್ನು ನೌಕರರು ಚಿಂತನೆ ಮಾಡಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್‌.ಡಿ.ಪ್ರಶಾಂತ ಹೇಳಿದರು.

ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ದಿಂದ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಜಿಲ್ಲಾ ಸಮಾವೇಶದಲ್ಲಿ ಪ್ರಜಾಸ್ನೇಹಿ ಆಡಳಿತದ ಬಗ್ಗೆ ಅವರು ಉಪನ್ಯಾಸ ನೀಡಿದರು.

‘ಪ್ರಜಾಸ್ನೇಹಿ ಆಡಳಿತದ ಉದ್ದೇಶದಿಂದ ಮಾಹಿತಿ ಹಕ್ಕು ಕಾಯಿದೆ ಮತ್ತು ಸಕಾಲ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೂ, ಪ್ರಜಾಸ್ನೇಹಿ ಆಡಳಿತ ಅನುಷ್ಠಾನಕ್ಕೆ ಬಂದಿದೆಯೇ ಎಂಬುದನ್ನು ನೌಕರರು ಪ್ರಶ್ನೆ ಮಾಡಿಕೊಳ್ಳಬೇಕು’ ಎಂದರು.

‘ದೇಶದಲ್ಲಿ ಒಬ್ಬ ವ್ಯಕ್ತಿಗೆ ಒಂದು ಓಟು ಎಂಬ ರಾಜಕೀಯ ಸಮಾನತೆಯಿದೆ. ಆದರೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ದೊರೆತಿಲ್ಲ. ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್‌ ಅವರು  ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಾಧಿಸಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ಬಹಳ ದಿನ ಉಳಿಯುವುದಿಲ್ಲ ಎಂದು ಹೇಳಿದ್ದರು. ಈಗಿನ ಪರಿಸ್ಥಿತಿ ಅವಲೋಕನ ಮಾಡಿದರೆ ಅಂಬೇಡ್ಕರ್‌ ಅವರ ಮಾತು ಸತ್ಯವಾಗಲಿದೆ ಎಂದು ಅನಿಸುತ್ತಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಅಧಿಕಾರದಲ್ಲಿ ಇರುವವರಿಗೆ ಮದ ನೆತ್ತಿಗೇರಿರುತ್ತದೆ. ಪ್ರಜಾ ಸೇವಕರು ಎಂಬುದನ್ನೇ ಮರೆತು ಹೋಗಿರುತ್ತಾರೆ. ಆಡಳಿತ ಪಕ್ಷದವರಿಗೆ ಸಮಸ್ಯೆಗಳು ಕಾಣುವುದಿಲ್ಲ’ ಎಂದು ಹೇಳಿದರು.

‘ಒಬ್ಬ ನೌಕರನ ಕಷ್ಟ ಸರ್ಕಾರಕ್ಕೆ ಹೇಳಿದರೆ ಪರಿಹಾರ ದೊರೆಯುವುದಿಲ್ಲ. ಎಲ್ಲ ನೌಕರರು ಒಗ್ಗಟ್ಟಾಗಿ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಭತ್ಯೆ ನೀಡಲಾಗುತ್ತಿದೆ. ಅದರಂತೆ ಎಲ್ಲ ನೌಕರರು ವಿಶೇಷ ಭತ್ಯೆ ಪಡೆಯಬಹುದು. ನೌಕರರ ಸಮಸ್ಯೆಗಳಿಗೆ ಯಾವತ್ತೂ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ’ ನೀಡಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ‘ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿದರೆ ನೌಕರರಿಗೆ ಒಳ್ಳೆಯ ಹೆಸರು ಬರುತ್ತದೆ.  ನೌಕರರು ಜವಾಬ್ದಾರಿ ಹೊತ್ತುಕೊಂಡು, ಕಾರ್ಯಪ್ರವೃತ್ತಿ ಬದಲಿಸಿಕೊಂಡು ಕೆಲಸಮಾಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಮ ಡಿ.ಶಂಕರ ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವ ನೌಕರರ ಮೇಲಿನ ಹಲ್ಲೆ, ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸ್ಪಂದಿಸಿ, ಸಂದರ್ಭಕ್ಕೆ ಅಗತ್ಯವಾದ ಕ್ರಮವನ್ನು ಜರುಗಿಸುವ ಮೂಲಕ ರಕ್ಷಣೆ ಒದಗಿಸಲಿದೆ ಎಂದು ಹೇಳಿದರು.

ತಮಗೆ ವಹಿಸಿರುವ ಆಯಾ ದಿನದ ಕೆಲಸವನ್ನು ನೌಕರರು ಪ್ರಾಮಾಣಿಕವಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿದರೆ ಸಾಕು ಐದಾರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಗಣನೀಯವಾದ ಬದಲಾವಣೆ ಕಾಣಬಹುದು ಎಂದರು.

ನೌಕರರ ವೇತನಗಳು ಮತ್ತು ಸವಾಲುಗಳು ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಭತ್ಯೆ ಏಕೆ ವಿಷಯದ ಕುರಿತು ಉಪನ್ಯಾಸ ನಡೆಯಿತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ರಮೇಶ, ತಿಮ್ಮಯ್ಯ, ಮಾರುತೇಶ, ಯೋಗಾನಂದ, ವೆಂಕಟರಾಜು, ರಾಮಯ್ಯ, ಶ್ರೀನಿವಾಸ, ಬಾಲಸ್ವಾಮಿ ಕೊಡ್ಲಿ, ಪದ್ಮವರ್ಧನ ವಕೀಲ ಇದ್ದರು.

ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಮಹೆಬೂಬ ಪಾಷ ಮೂಲಿಮನಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT