ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂತ್ರಜ್ಞಾನವೇ ನಿಯಂತ್ರಿಸುವ ಸ್ಥಿತಿ ನಿರ್ಮಾಣ’

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾಗರ: ತಂತ್ರಜ್ಞಾನವನ್ನು ನಾವು ನಿಯಂತ್ರಿಸುವ ಬದಲು ತಂತ್ರಜ್ಞಾನವೇ ನಮ್ಮನ್ನು ನಿಯಂತ್ರಿಸುತ್ತಿರುವ ಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಲೇಖಕ ಸುಂದರ್‌ ಸರುಕ್ಕೈ ಹೇಳಿದರು.

ಸಮೀಪದ ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಗುರುವಾರ ನಡೆದ ‘ತಂತ್ರಜ್ಞಾನ ಮತ್ತು ಶಿಕ್ಷಣ’ ವಿಷಯದ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹೊಸ ಆಕರ್ಷಣೆಗಳೊಂದಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಾ ತಂತ್ರಜ್ಞಾನ ಹೇಗೆ ತನ್ನ ಪ್ರಭಾವಳಿಯನ್ನು ವಿಸ್ತರಿಸಿಕೊಳ್ಳುತ್ತ ನಮ್ಮನ್ನು ನಿಯಂತ್ರಿಸುತ್ತಿದೆ ಎಂಬ ವಿಷಯವನ್ನು ನಾವು ಗಂಭೀರವಾಗಿ ಆಲೋಚಿಸಬೇಕಾಗಿದೆ’ ಎಂದರು.

‘ಮನುಷ್ಯರ ನಡುವೆ ಪರಸ್ಪರ ಆರೋಗ್ಯಕರ ಹಾಗೂ ಅರ್ಥಪೂರ್ಣ ಸಂವಾದ ಸಾಧ್ಯವಾಗದ ಸ್ಥಿತಿಯನ್ನು ತಂತ್ರಜ್ಞಾನ ನಿರ್ಮಿಸಿದೆ. ನಮ್ಮ ನಡುವಿನ ಸಂವಹನದ ಸ್ವರೂಪವನ್ನೆ ಅದು ಸಂಪೂರ್ಣವಾಗಿ ಬದಲಿಸಿದೆ. ಒಂದು ಕಲೆಯ ಜೊತೆ ನಾವು ಹೇಗೆ ಅನುಸಂಧಾನ ನಡೆಸುತ್ತೇವೆಯೋ, ಅದೇ ರೀತಿಯಲ್ಲಿ ತಂತ್ರಜ್ಞಾನದ ಉತ್ಪನ್ನಗಳ ಬಳಕೆಯ ಬಗ್ಗೆಯೂ ಅನುಸಂಧಾನ ನಡೆಸಿದರೆ ಮಾತ್ರ ಅವುಗಳಿಂದ ಉಂಟಾಗಬಹುದಾದ ತೊಂದರೆಗಳಿಂದ ಬಿಡಿಸಿಕೊಳ್ಳಲು ಸಾಧ್ಯ’ ಎಂದು ಸರುಕ್ಕೈ ಅಭಿಪ್ರಾಯಪಟ್ಟರು.

‘ತಂತ್ರಜ್ಞಾನದ ಬಳಕೆ ಅನಿವಾರ್ಯ ಎಂಬ ಸಮರ್ಥನೆ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ತಂತ್ರಜ್ಞಾನದ ಹಿಂದೆ ಲಾಭ ಗಳಿಕೆಯ ಅಂಶವೇ ಪ್ರಧಾನವಾಗಿದೆ ಮತ್ತು ಸಾಮಾಜಿಕ ಜವಾಬ್ದಾರಿ ಎನ್ನುವುದು ಕೇವಲ ತೋರುಗಾಣಿಕೆ ಎಂಬುದನ್ನು ನಾವು ಮರೆಯಬಾರದು’ ಎಂದು ಎಚ್ಚರಿಸಿದರು.

ಸಂಶೋಧನಾ ವಿದ್ಯಾರ್ಥಿಗಳಾದ ಸೃಜನಾ ಕಾಯ್ಕಿಣಿ ಹಾಗೂ ವರುಣ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಂಜೆ ವಿದ್ವಾನ್‌ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿಂದ ‘ಲಯ ಲಾವಣ್ಯ’ ತಾಳವಾದ್ಯ ಕಾರ್ಯಕ್ರಮ ನಡೆಯಿತು. ನಂತರ ಶೇಷಗಿರಿ ಕಲಾ ತಂಡದಿಂದ ಗಣೇಶ ಮುಂಡಾಡಿ ಅವರ ನಿರ್ದೇಶನದಲ್ಲಿ ‘ವಾಲಿ ವಧೆ’ ನಾಟಕ ಪ್ರದರ್ಶನಗೊಂಡಿತು.

ಗೀಳಾದ ತಂತ್ರಜ್ಞಾನ

ಹಿಂದಿನ ತಲೆಮಾರಿಗೆ ತಂತ್ರಜ್ಞಾನವನ್ನು ಯಾವ ಮಟ್ಟದಲ್ಲಿ ಮತ್ತು ಯಾವ ಪ್ರಮಾಣದಲ್ಲಿ ಬಳಸಬೇಕು ಎನ್ನುವ ವಿವೇಚನೆ ಹಾಗೂ ‘ಜವಾಬ್ದಾರಿ’ ಇತ್ತು. ಆದರೆ ಯುವ ತಲೆಮಾರಿಗೆ ತಂತ್ರಜ್ಞಾನದ ಬಳಕೆ ಅವಶ್ಯಕತೆಗಿಂತ ಒಂದು ‘ಗೀಳು’ ಆಗಿ ಪರಿಣಮಿಸುತ್ತಿರುವುದರಿಂದಲೆ ಸೆಲ್ಫಿ ಸಾವು ಸಂಭವಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ ಎಂದು ಸುಂದರ್‌ ಸರುಕ್ಕೈ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT