6

ಸರ್ಜಾಪುರ ರಸ್ತೆ: ವಸತಿ ಹೂಡಿಕೆಗೆ ನೆಚ್ಚಿನ ತಾಣ

Published:
Updated:
ಸರ್ಜಾಪುರ ರಸ್ತೆ: ವಸತಿ ಹೂಡಿಕೆಗೆ ನೆಚ್ಚಿನ ತಾಣ

–ಫರ್ಖಾನ್ ಮೊಹರ್‌ಕನ್

ಹೆಸರಾಂತ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ತಾಣ ಎನಿಸಿರುವ ಬೆಂಗಳೂರಿನ ಸರ್ಜಾಪುರ ರಸ್ತೆಯು ದೇಶದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ವಸತಿ ಪ್ರದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದೆ.

ಪೂರ್ವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ಇರುವ ಸರ್ಜಾಪುರ ರಸ್ತೆ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಆಸ್ತಿ ಮೌಲ್ಯವು ಶೇ 32.56ರಷ್ಟು ಏರಿಕೆಯಾಗಿದೆ. 2017ರ ಜುಲೈ ವೇಳೆಗೆ ಪ್ರತಿ ಚದರ ಅಡಿ ಜಾಗದ ಬೆಲೆ 5,700 ರೂಪಾಯಿ ಇತ್ತು. 2012ರಲ್ಲಿ 4,300 ರೂಪಾಯಿ ಇತ್ತು.

ರಿಯಲ್ ಎಸ್ಟೇಟ್ ಸಲಹಾ ಕಂಪೆನಿ ‘ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್’ ಪ್ರಕಾರ ಅತಿಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿರುವ 10 ನಗರಗಳ ವಸತಿ ಪ್ರದೇಶಗಳ ಪಟ್ಟಿಯಲ್ಲಿ ಕನಕಪುರ ರಸ್ತೆ ಹಾಗೂ ವರ್ತೂರು ಸ್ಥಾನ ಕಳೆದುಕೊಂಡಿವೆ. ಕನಕಪುರ ರಸ್ತೆ ಹಾಗೂ ವರ್ತೂರಿನ ವಸತಿ ಪ್ರದೇಶದಲ್ಲಿ ಆಸ್ತಿ ಮೌಲ್ಯವು ಕ್ರಮವಾಗಿ ಶೇ 28.21 ಹಾಗೂ ಶೇ 22.86 ರಷ್ಟು ಏರಿಕೆಯಾಗಿದೆ.

ಮತ್ತೊಂದು ರಿಯಲ್ ಎಸ್ಟೇಟ್ ಸಲಹಾ ಕಂಪೆನಿ ಜಾನ್ಸ್ ಲಾಂಗ್ ಲಾಸಲ್ಲೆ (ಜೆಎಲ್‍ಎಲ್) ಪ್ರಕಾರ, ಸರ್ಜಾಪುರ ರಸ್ತೆಯಲ್ಲಿ 24 ಲಕ್ಷ ಚದರ ಅಡಿ ಕಚೇರಿ ಜಾಗವಿದ್ದು (ಆಫೀಸ್ ಸ್ಪೇಸ್), ಇಲ್ಲಿ 24 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಹೊರವರ್ತುಲ ರಸ್ತೆಯ ಆಚೆ ಹಾಗೂ ಈಚೆಗೆ ಲೆಕ್ಕ ಹಾಕಿದರೆ ಕಚೇರಿ ಸ್ಥಳದ ವಿಸ್ತೀರ್ಣ 27 ಲಕ್ಷ ಚದರ ಅಡಿಗೆ ಹಿಗ್ಗುತ್ತದೆ.

2011-13ರ ಅವಧಿಯಲ್ಲಿ ಈ ಪ್ರದೇಶವು ಅತಿಹೆಚ್ಚು ನಿರ್ಮಾಣ ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಸರ್ಜಾಪುರ ಹೊರವರ್ತುಲ ರಸ್ತೆಯಿಂದ ಸರ್ಜಾಪುರ ಗ್ರಾಮದವರೆಗಿನ 16.5 ಕಿ.ಮೀ ದೂರದ ಮಾರ್ಗದುದ್ದಕ್ಕೂ ಸುಮಾರು 13,210 ಕಟ್ಟಡಗಳ ಕಾಮಗಾರಿ ಆರಂಭವಾಗಿತ್ತು.

2016ವೊಂದರಲ್ಲೇ 1800 ಕಟ್ಟಡಗಳ ನಿರ್ಮಾಣ ಆರಂಭವಾಗಿದೆ ಎನ್ನುತ್ತದೆ ನೈಟ್ ಫ್ರಾಂಕ್ ಒದಗಿಸಿರುವ ಮಾಹಿತಿ. 2010ರಿಂದೀಚೆಗೆ ಸರ್ಜಾಪುರ ರಸ್ತೆ, ಹೊರವರ್ತುಲ ರಸ್ತೆಯ ಪೂರ್ವ ದಿಕ್ಕು ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯ ಆಚೀಚಿನ ಜಾಗವನ್ನು ಸುಮಾರು 52 ಬೃಹತ್ ಕಂಪೆನಿಗಳು ಭೋಗ್ಯಕ್ಕೆ ಪಡೆದಿವೆ.

ಇದೇ ವರ್ಷ ಮೈಕ್ರೊಸಾಫ್ಟ್ ಕಂಪೆನಿಯೊಂದೇ ಕಚೇರಿಗಾಗಿ ಸರ್ಜಾಪುರ ರಸ್ತೆಯ ಪ್ರೆಸ್ಟೀಜ್ ಫೆರ್ನ್ ಗ್ಯಾಲಕ್ಸಿಯ 5,88,784 ಚದರ ಅಡಿ ಜಾಗವನ್ನು ಬಳಸಿಕೊಂಡಿತು. ಮಾಹಿತಿ ತಂತ್ರಜ್ಞಾನದ ವಿಶೇಷ ಆರ್ಥಿಕ ವಲಯ ನಿರ್ಮಾಣಕ್ಕೆಂದು ಬೆಂಗಳೂರಿನ ದೈತ್ಯ ಐಟಿ ಕಂಪೆನಿ ಇನ್ಫೊಸಿಸ್, ಇದೇ ಜಾಗದಲ್ಲಿ 202 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ 2016ರಿಂದ ಈ ಜಾಗದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ.

ಜಾಗತಿಕ ಮಟ್ಟದ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಜಾಪುರ ರಸ್ತೆಯ 50 ಎಕರೆ ಜಾಗವನ್ನು ಖರೀದಿಸುವುದಾಗಿ ಅಜೀಂಪ್ರೇಂಜಿ ಪ್ರತಿಷ್ಠಾನವು 2013ರಲ್ಲಿ ಪ್ರಕಟಿಸಿತ್ತು.

ಸರ್ಜಾಪುರ ರಸ್ತೆ ಹಾಗೂ ವರ್ತೂರಿನ ಜನವಸತಿ ಪ್ರದೇಶಗಳು ಕಚೇರಿಗಳು ಹೆಚ್ಚಾಗಿರುವ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್‍ಫೀಲ್ಡ್ ಸಮೀಪದಲ್ಲಿವೆ. ಹೊರವರ್ತುಲ ರಸ್ತೆಯ ಭಾಗವಾಗಿರುವ ಈ ಎರಡೂ ಪ್ರದೇಶಗಳು ಈ ಮಾರ್ಗದಲ್ಲಿ ಸಾಗುವ ಐಟಿ ಕಾರಿಡಾರ್‌ನ ಬೆಳವಣಿಗೆಯ ಲಾಭ ಪಡೆಯುತ್ತಿವೆ. ಹೀಗಾಗಿ ಜನವಸತಿ ಕಟ್ಟಡ ಮತ್ತು ನಿವೇಶನಗಳು ಇಲ್ಲಿ ಹೆಚ್ಚಾಗಿ ಬಿಕರಿಯಾಗುತ್ತಿವೆ.

ಬೃಹತ್ ಎಂಎನ್‍ಸಿಗಳಿಗೆ ಸರ್ಜಾಪುರವೇ ನೆಲೆ..

ದೇಶದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಕಚೇರಿಗಳನ್ನು ತೆರೆಯಲು ಬೆಂಗಳೂರಿನ ಸರ್ಜಾಪುರ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಇದೇ ಪ್ರದೇಶದಲ್ಲಿ ಐಟಿ ದೈತ್ಯ ವಿಪ್ರೊ, ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ಇಂಟೆಲ್ ಟೆಕ್ನಾಲಜೀಸ್, ಎಲ್&ಟಿ ಇನ್ಫೊಟೆಕ್, ಒರಾಕಲ್, ಕೆಪಿಎಂಜಿ, ನೆಸ್ ಟೆಕ್ನಾಲಜೀಸ್, ಮೈಕ್ರೊಸಾಫ್ಟ್ ಆದಿಯಾಗಿ ನೂರಾರು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪೆನಿಗಳಿಗೆ ಇದು ನೆಲೆ ಒದಗಿಸಿದೆ.

*

ಸರ್ಜಾಪುರ ರಸ್ತೆ ಹಾಗೂ ವರ್ತೂರಿನ ಬಹುತೇಕ ಜನವಸತಿ ಕಟ್ಟಡಗಳು ಕೈಗೆಟುಕುವ ದರದಲ್ಲಿ ಮುಂದುವರಿದರೆ ಎರಡೂ ಜಾಗಗಳು ಇನ್ನಷ್ಟು ದಿನ ಹೂಡಿಕೆದಾರರು ಹಾಗೂ ನಿವಾಸಿಗಳ ನೆಚ್ಚಿನ ತಾಣಗಳಾಗಿ ಉಳಿಯಲಿವೆ.

-ಅಂಜು ಪುರಿ,

ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್‍ನ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry