ಕಾರ್ಮಿಕರ ಉದರ ಪೋಷಿಸುವ ದಟ್ಟಗಳ್ಳಿ

ಗುರುವಾರ , ಜೂನ್ 27, 2019
26 °C

ಕಾರ್ಮಿಕರ ಉದರ ಪೋಷಿಸುವ ದಟ್ಟಗಳ್ಳಿ

Published:
Updated:
ಕಾರ್ಮಿಕರ ಉದರ ಪೋಷಿಸುವ ದಟ್ಟಗಳ್ಳಿ

ಮೈಸೂರಿನ ದಟ್ಟಗಳ್ಳಿ ಎಂದರೆ ಸಿರಿವಂತರಿಗೆ ಬಂಡವಾಳ ಹೂಡಿಕೆಯ ತಾಣವಾಗಿದ್ದರೆ, ಕಾರ್ಮಿಕರಿಗೆ ಹೊಟ್ಟೆ ತುಂಬಿಸುವ ಹಳ್ಳಿಯಾಗಿದೆ. ಹಳ್ಳಿ ಹಾಗೂ ಅದರ ಸುತ್ತ ಇದ್ದ ಹೊಲಗಳು ತನ್ನ ಸ್ವರೂಪವನ್ನು ಕಳೆದುಕೊಂಡು ನಿವೇಶನಗಳಾಗಿವೆ.

ಹಲವೆಡೆ ಈಗಾಗಲೇ ವಿಸ್ತಾರವಾದ ಮನೆಗಳೂ ತಲೆ ಎತ್ತಿವೆ. ಬಹಳಷ್ಟು ಕಡೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇನ್ನೂ ಮತ್ತಷ್ಟು ಕಡೆ ನಿವೇಶನಗಳು ತನ್ನ ಹಿಂದಿನ ಹೊಲದ ಹಸಿರನ್ನು ಕಳೆದುಕೊಂಡು ಮಲಗಿವೆ. ಭವಿಷ್ಯದಲ್ಲಿ ಇಲ್ಲೂ ನಿರ್ಮಾಣ ಚಟುವಟಿಕೆಗಳು ಗರಿಗೆದರಿ ಸಾವಿರಾರು ಮಂದಿಗೆ ಉದ್ಯೋಗ ನೀಡುವ ನಿರೀಕ್ಷೆಯನ್ನೂ ಹುಟ್ಟು ಹಾಕಿದೆ.

ಸುಮಾರು 15– 20 ವರ್ಷಗಳಿಂದೀಚೆಗೆ ಮೈಸೂರಿನ ನಕ್ಷೆಯೇ ಬದಲಾಗಿದೆ. ಅರಮನೆಯಿಂದ ಸುಮಾರು 3–4 ಕಿ.ಮೀ. ಹರಡಿಕೊಂಡಿದ್ದ ಈ ನಗರಿ ಇಂದು 15–20 ಕಿ.ಮೀವರೆಗೆ ಚಾಚಿಕೊಂಡಿದೆ. ಹೆಂಚಿನ ಮನೆಗಳ ಜಾಗದಲ್ಲಿ ತಾರಸಿ ಕಟ್ಟಡಗಳು ತಲೆ ಎತ್ತಿವೆ. ಗೂಡಂಗಡಿಗಳನ್ನು ಮಾಲ್ ಸಂಸ್ಕೃತಿ ಗುಡಿಸಿ ಹಾಕತೊಡಗಿದೆ. ಶೆಟ್ಟರ ಅಂಗಡಿಗಳು ನಾಪತ್ತೆಯಾಗುತ್ತಿವೆ. ಯಾವುದೇ ಅಡೆತಡೆ ಇಲ್ಲದೆ ಓಡಾಡುತ್ತಿದ್ದ ರಸ್ತೆಗಳಲ್ಲಿ ಕೆಂಪುದೀಪಗಳು ಮಿನುಗುತ್ತಿವೆ.

ಇವುಗಳ ಜತೆಗೆ ಸಾಪ್ಟ್ ವೇರ್ ಉದ್ಯಮ ನೆಲೆಯೂರತೊಡಗಿದೆ. ಇದರೊಂದಿಗೆ ವೇಗವಾಗಿ ದಾಪುಗಾಲಿಡುತ್ತಿರುವ ಮಹಾನಗರಗಳ ಸಾಲಿಗೆ ಈ ಸಾಂಸ್ಕೃತಿಕ ನಗರಿಯೂ ಸೇರ್ಪಡೆಯಾಗಿದೆ. ಅಂತೆಯೇ ರಿಯಲ್ ಎಸ್ಟೇಟ್ ಉದ್ಯಮವೂ ಆಳವಾದ ಬೇರುಬಿಟ್ಟಿದೆ.

ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮೈಸೂರಿನ ಹೊರವಲಯ ಚಿನ್ನದ ಮೊಟ್ಟೆ ಇಡುವ ಕೋಳಿ. ಈ ಉದ್ಯಮದ ಕಬಂಧಬಾಹುಗಳಿಗೆ ಸಿಲುಕಿ ನಗರದ ವಿಸ್ತಾರ ಹೆಚ್ಚಿದಂತೆಲ್ಲಾ ಆಸುಪಾಸಿನ ಹಳ್ಳಿಗಳು ನಾಮಾವಾಶೇಷವಾಗುತ್ತಿವೆ. ಇಂತಹ ದುರಂತ ಅಂತ್ಯ ಕಂಡ ಗ್ರಾಮಗಳ ಸಾಲಿನಲ್ಲಿ ದಟ್ಟಗಳ್ಳಿಯೂ ಒಂದು. ದಟ್ಟಗಳ್ಳಿ ಹೆಸರಿಗೆ ಮಾತ್ರ ಹಳ್ಳಿ; ಆದರೆ, ಇಲ್ಲಿ ಯಾವ ಹಳ್ಳಿಯೂ ಇಲ್ಲ. ಈಗ ಇದೊಂದು ಹೈಟೆಕ್ ಕಟ್ಟಡಗಳ ಬಡಾವಣೆ.

ಹೊರವರ್ತುಲ ರಸ್ತೆ ನಿರ್ಮಾಣವಾಗುವವರೆಗೆ ದಟ್ಟಗಳ್ಳಿಗೆ ಅಷ್ಟೇನೂ ಬೇಡಿಕೆ ಇರಲಿಲ್ಲ. ಆದರೆ, ಯಾವಾಗ ನಗರದ ಸುತ್ತ ರಸ್ತೆ ಬಂದಿತೋ ಅಲ್ಲಿಂದ ಈ ಊರಿಗೆ ಶುಕ್ರದೆಸೆ ಶುರುವಾಯಿತು. ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಜಮೀನಿಗೆ ಕೋಟಿ ರೂಪಾಯಿ ಬೇಡಿಕೆ ಬಂದಿತು.

ಬಡವರ ಕೈಗೆ ಎಟುಕದಂತೆ ನಿವೇಶನಗಳ ಬೆಲೆ ಗಗನಕ್ಕೇರಿತು. ಪರಿಣಾಮ, ಇದು ಶ್ರೀಮಂತರ ಬಡಾವಣೆಯಾಗಿ ಮಾರ್ಪಟ್ಟಿತು. ವಲಸಿಗರ ಬೀಡಾಯಿತು. ಶೇ 80ರಿಂದ 90ರಷ್ಟು ಭಾಗ ಇಲ್ಲಿರುವುದೆಲ್ಲಾ ಬಂಗಲೆಗಳೇ. ನಿಶ್ಯಬ್ದ ವಾತಾವರಣದಲ್ಲಿ ಕಟ್ಟಡಗಳ ನಿರ್ಮಾಣದ ಸದ್ದು ಕೇಳಿಬರುತ್ತದೆ. ದಟ್ಟಗಳ್ಳಿಯ ಅಭಿವೃದ್ಧಿಯ ಮುಂದುವರಿದ ಭಾಗವೇ ಕನಕದಾಸನಗರ. ಇಲ್ಲಿನ ಮೂಲ ನಿವಾಸಿಗರ ಮಾತಿನಲ್ಲಿ ಹೇಳುವುದಾದರೆ, ದಟ್ಟಗಳ್ಳಿ ಬೇರೆಯಲ್ಲ, ಕನಕದಾಸನಗರ ಬೇರೆಯಲ್ಲ.

ಚದರಡಿಗೆ ಮೂರರಿಂದ ಮೂರುವರೆ ಸಾವಿರ: ಸುಂದರ ವಾತಾವರಣ, ಸ್ವಚ್ಛ ಪರಿಸರ, ಶಿಕ್ಷಣ, ಕಲೆ, ಸಂಸ್ಕೃತಿ, ಪ್ರವಾಸೋದ್ಯಮ ಎಲ್ಲವೂ ಒಂದೇ ಸೂರಿನಡಿ ಲಭ್ಯವಾಗುವ ಮೈಸೂರಿನ ಕಡೆ ಜನರು ಅದರಲ್ಲೂ ನಿವೃತ್ತಿ ಹೊಂದಿದವರು ಮುಖಮಾಡಿದ್ದಾರೆ. ಸೇವಾ ನಿವೃತ್ತಿಯಾದ ಬಳಿಕ ಸುಂದರವಾದ ವಿಶ್ರಾಂತ ಬದುಕು ನಡೆಸಲು ಮುಂದಾಗುತ್ತಿದ್ದಾರೆ. ಇಂತಹವರೆಲ್ಲ ನಗರದ ಹೊರವಲಯ ಇಷ್ಟಪಡುತ್ತಾರೆ. ಹೀಗಾಗಿ, ಹೊರವಲಯದ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಈ ಹಿಂದೆ ರಾಗಿ, ಜೋಳ, ಕಡಲೆಕಾಯಿ, ಹುರುಳಿ... ಹೀಗೆ ವಿವಿಧ ದವಸ ಧಾನ್ಯ ಬೆಳೆಯುತ್ತಿದ್ದ ಜಮೀನುಗಳಲ್ಲಿ ಸುಂದರವಾದ ಕಟ್ಟಡಗಳು ಎದ್ದುನಿಂತಿವೆ. ಜಾಲಿಗಿಡಗಳು, ಪೊದೆಗಳ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ನಿರ್ಮಾಣವಾಗಿವೆ, ಆಗುತ್ತಲೂ ಇವೆ. ದಟ್ಟಗಳ್ಳಿಯಲ್ಲಿ ಬಡವರು, ಕೆಳ, ಮಧ್ಯಮ ವರ್ಗದವರು ನಿವೇಶನ ಖರೀದಿಸಿ ಸೂರು ಹೊಂದುವುದು ಕನಸಿನ ಮಾತೇ ಸರಿ ಎಂಬುದು ಇಲ್ಲಿನ ನಿವಾಸಿಗರ ಮಾತು.

ದಟ್ಟಗಳ್ಳಿ ಮೂರು ಹಂತ ಹೊಂದಿದ್ದು, ಎಲ್ಲ ಕಡೆ ಚದರಡಿಗೆ 3 ಸಾವಿರ ರೂಪಾಯಿಯಿಂದ ಬೆಲೆ ಆರಂಭವಾಗುತ್ತಿದೆ. ನಿವೇಶನ ಇರುವ ಸ್ಥಳದ ಆಧಾರದ ಮೇಲೆ ಅಂತಿಮವಾಗಿ ಬೆಲೆ ನಿಗದಿಯಾಗುತ್ತದೆ. ‘ಮುಡಾ’ದಿಂದ ಮಾನ್ಯತೆ ಪಡೆದಿರುವ ನಿವೇಶನ ಚದರಡಿಗೆ ಹೆಚ್ಚಿನ ಬೆಲೆ ಇದೆ. ದಟ್ಟಗಳ್ಳಿಯಿಂದ ಸ್ವಲ್ಪ ಮುಂದೆ ಹೋದರೆ ಬೆಲೆ ಕಡಿಮೆಯಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಹೇಳುತ್ತಾರೆ.

ದೇಶದಲ್ಲಿ ಸಂಚಲನ ಮೂಡಿಸಿದ ನೋಟು ಅಮಾನ್ಯೀಕರಣ ನಂತರ ರಿಯಲ್ ಎಸ್ಟೇಟ್‌ ಉದ್ಯಮಕ್ಕೆ ಹೊಡೆತ ಬಿದ್ದಿದೆ. ನಿವೇಶನಗಳ ಬೆಲೆ ಶೇ 20ರಷ್ಟು ಕುಸಿತಗೊಂಡಿದೆ. ಆದರೆ, ನಿವೇಶನ ಮಾರಾಟ ಮಾಡುವರರು ಹೆಚ್ಚಿನ ಬೆಲೆ ನಿರೀಕ್ಷೆ ಮಾಡುತ್ತಿರುವುದರಿಂದ ವಹಿವಾಟಿಗೆ ಹಿನ್ನಡೆಯಾಗಿದೆ ಎಂದು ಅವರು ಹೇಳುತ್ತಾರೆ.

ಹೀಗೆ ಖರೀದಿಸಿದ ಶೇ 50ರಷ್ಟು ನಿವೇಶನಗಳಲ್ಲಿ ಮನೆಗಳು, ಬಂಗಲೆಗಳು ನಿರ್ಮಾಣವಾಗಿದ್ದರೆ, ಖಾಲಿ ನಿವೇಶನಗಳಲ್ಲಿ ಪೊದೆಗಳು ಬೆಳೆದುಕೊಂಡಿದೆ. ದಟ್ಟಗಳ್ಳಿಯು ‘ಮುಡಾ’ ಸುಪರ್ದಿಯಲ್ಲಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಿದ ನಂತರ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಲಿದೆ.

ಉದ್ಯೋಗ ಸೃಷ್ಟಿ: ಇಲ್ಲಿ ರಿಯಲ್ ಎಸ್ಟೇಟ್ ಬಹುದೊಡ್ಡ ಉದ್ಯಮವಾಗಿದೆ. ಇದು ಅನೇಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡಿದೆ.

ರಿಯಲ್ ಎಸ್ಟೇಟ್‌ ಕಚೇರಿಗಳ ಜತೆಗೆ ಕಟ್ಟಡ ನಿರ್ಮಾಣ ಸಾಮಗ್ರಿಗಳು ಹಾಗೂ ಹಾರ್ಡ್‌ವೇರ್‌ ಅಂಗಡಿಗಳು, ಗಾರೆಕೆಲಸದವರು, ಬಣ್ಣ ಬಳಿಯುವವರು, ಮರಗೆಲಸದವರು, ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್‌ಗಳಿಗೆ ಆಧಾರವಾಗಿದೆ. ಅಲ್ಲದೆ, ಬಿಲ್ಡರ್ಸ್ ಮತ್ತು ಡೆವಲಪರ್ಸ್‌, ಒಳಾಂಗಣ ವಿನ್ಯಾಸ, ವಾಸ್ತು ವಿನ್ಯಾಸ ಕಚೇರಿಗಳು ಇಲ್ಲಿ ಬಹುಸಂಖ್ಯೆಯಲ್ಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry