ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರಿಸಿದ ವರುಣ, ತುಂಬಿ ಹರಿದ ಹಳ್ಳ ಕೊಳ್ಳಗಳು

Last Updated 7 ಅಕ್ಟೋಬರ್ 2017, 7:44 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸಪುರ, ಕಕ್ಕಯ್ಯನಹಟ್ಟಿ, ಬಳಗಟ್ಟ, ಭರಮಗಿರಿ, ಕುರುಬರಹಳ್ಳಿ, ಕುರುಬರಹಳ್ಳಿ ತಾಂಡಾ ಮೊದಲಾದ ಕಡೆ ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಸುರಿದ ಭಾರೀ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಆರೇಳು ದಿನಗಳಿಂದ ಮಳೆ ಬರುತ್ತಿದ್ದರೂ ನೀರು ಹರಿಯುವ ಮಳೆ ಬಂದಿರಲಿಲ್ಲ.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಗುಡುಗು,ಮಿಂಚಿನಿಂದ ಕೂಡಿದ ಮಳೆ 2 ಗಂಟೆಗೂ ಹೆಚ್ಚು ಕಾಲ ಸುರಿದ ಪರಿಣಾಮ ಒಣಗಿ ನಿಂತಿದ್ದ ಭರಮಗಿರಿ ಕೆರೆಗೆ ನೀರು ಹರಿದು ಬರುತ್ತಿದೆ. ಭರಮಗಿರಿ ಗ್ರಾಮದ ಕೆಳಭಾಗದಲ್ಲಿ ಹರಿಯುವ ಗೌನಹಳ್ಳಿ ಹಳ್ಳದಲ್ಲು ಗಣನೀಯ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಈ ನೀರು ವೇದಾವತಿ ನದಿಗೆ ಸೇರುತ್ತದೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಪೆರಿಸ್ವಾಮಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಈಚಿನ ವರ್ಷಗಳಲ್ಲಿ ಇಂತಹ ಬಿರು ಮಳೆ ಕಂಡಿರಲಿಲ್ಲ. ರೆ ಕಟ್ಟೆಗಳು, ಚೆಕ್ ಡ್ಯಾಂಗಳು ಒಣಗಿ ನಿಂತಿದ್ದವು. ಈಗ ಉತ್ತಮ ಮಳೆಯಾಗಿರುವ ಕಾರಣ ತೋಟದ ಬೆಳೆಗಾರರಿಗೆ ಸಂತಸವಾಗಿದೆ ಎಂದು ಅವರು ಹೇಳಿದ್ದಾರೆ.

ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ 1ರಿಂದ 2ರ ವರೆಗೆ ಮಳೆ ಸುರಿಯಿತು. ಮಧ್ಯಾಹ್ನದ ಊಟದ ಸಮಯದಲ್ಲಿ ಮಳೆ ಬಂದಿದ್ದರಿಂದ ಶಾಲಾಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಯಿತು. ಒಂದು ತಾಸಿಗೂ ಹೆಚ್ಚು ಹೊತ್ತು ಜಿಟಿ ಜಿಟಿ ಮಳೆ ಬಂದಿದ್ದರಿಂದ ಕೆಲವರು ಛತ್ರಿ ಹಿಡಿದುಕೊಂಡು ತಮ್ಮ ಮನೆಗಳತ್ತ ಸಾಗಿದರು. ಪಟ್ಟಣದಲ್ಲಿ ದುರಸ್ತಿಯಾಗದ ರಸ್ತೆಗಳಲ್ಲಿ ಸಾಕಷ್ಟು ನೀರು ನಿಂತಿದ್ದರಿಂದ ಪಾದಾಚಾರಿಗಳಿಗೆ ತೀವ್ರ ತೊಂದರೆಯಾಯಿತು.

ಟಿ.ಬಿ.ವೃತ್ತದಿಂದ ವಿದ್ಯಾನಗರಕ್ಕೆ ಹೋಗುವ ರಸ್ತೆಯ ಮಧ್ಯೆದಲ್ಲಿಯೇ ಅಲ್ಲಲ್ಲಿ ಇರುವ ಒಳಚರಂಡಿ ಬಾಕ್ಸ್‌ನ ಮುಚ್ಚುಳದ ಭಾಗ ತಗ್ಗಾಗಿದೆ. ಮಳೆ ಬಂದಾಗ ಅಲ್ಲಿ ನೀರು ನಿಲ್ಲುತ್ತದೆ. ಇದರಿಂದ ಮಳೆ ಬರುವಾಗ ವೇಗವಾಗಿ ಬರುವ ವಾಹನ ಸವಾರರಿಗೆ ಒಳಚರಂಡಿ ಬಾಕ್ಸ್‌ ಇದೆ ಎಂದು ಕಾಣಿಸುವುದಿಲ್ಲ. ನೀರು ನಿಂತಿರುವ ಗುಂಡಿಗೆ ಚಕ್ರ ಇಳಿಯುತ್ತಿದ್ದಂತೆ ವಾಹನ ಸವಾರರು ಮುಗ್ಗರಿಸುವಂತಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪುರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಪ್ರಾಧ್ಯಾಪಕ ಎ.ಮೋಹನ್‌.

ಪಟ್ಟಣದಲ್ಲಿ ಇಡೀ ದಿನ ಮೋಡ ಕವಿದ ವಾತಾವರಣ ಇದಿದ್ದರಿಂದ ಚಿರ್‌ಮುರಿ, ಕಾರಾಮಂಡಕ್ಕಿ, ವಡೆ, ಬೋಂಡಾ ಮಾರಾಟದ ಅಂಗಡಿಗಳಿಗೆ ಹೆಚ್ಚು ವ್ಯಾಪಾರವಾಯಿತು.
ಗುರುವಾರ ಸಂಜೆ ಪಟ್ಟಣದಲ್ಲಿ 21.4ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಮಾಡದಕೆರೆ ಹೋಬಳಿ ನರಸೀಪುರದ ರಂಗನಾಥ್‌ ಅವರಿಗೆ ಸೇರಿದ ಮನೆಗೆ ಭಾಗಶಃ ಹಾನಿಯಾಗಿದೆ ಎಂದು ತಾಲ್ಲೂಕು ಆಡಳಿತ ಮಳೆ ಮಾಪನ ವಿಭಾಗ ಮಾಹಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT