ಮಂಗಳವಾರ, ಸೆಪ್ಟೆಂಬರ್ 17, 2019
21 °C
ವಿನಯ್‌ ಕುಮಾರ್‌ಗೆ ಸಾರಥ್ಯ

ರಾಹುಲ್‌,ಕರುಣ್‌, ಮನೀಷ್‌ಗೆ ಸ್ಥಾನ ಇಲ್ಲ

Published:
Updated:
ರಾಹುಲ್‌,ಕರುಣ್‌, ಮನೀಷ್‌ಗೆ ಸ್ಥಾನ ಇಲ್ಲ

ಬೆಂಗಳೂರು: ಈ ಬಾರಿಯ ರಣಜಿ ಟ್ರೋಫಿಯಲ್ಲಿ ಅನುಭವಿ ಆಲ್‌ರೌಂಡರ್‌ ಆರ್‌.ವಿನಯ್‌ ಕುಮಾರ್‌ ಅವರು ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಶನಿವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಅನುಭವಿಗಳಾದ ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌ ಮತ್ತು ಮನೀಷ್‌ ಪಾಂಡೆ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ರಾಹುಲ್‌ ಮತ್ತು ಮನೀಷ್‌, ಆಸ್ಟ್ರೇಲಿಯಾ ವಿರುದ್ಧದ ಟಿ–20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕರುಣ್‌ ಅವರು ನ್ಯೂಜಿಲೆಂಡ್‌ ‘ಎ’ ವಿರುದ್ಧದ ಸರಣಿಯಲ್ಲಿ ಭಾರತ ‘ಎ’ ತಂಡದಲ್ಲಿ ಆಡುತ್ತಿದ್ದಾರೆ. ಈ ಕಾರಣದಿಂದಾಗಿ ಇವರನ್ನು ತಂಡದಿಂದ ಕೈಬಿಡಲಾಗಿದೆ.

ಇವರ ಬದಲಿಗೆ ಅಭಿಷೇಕ್‌ ರೆಡ್ಡಿ, ಡಿ.ನಿಶ್ಚಲ್‌ ಮತ್ತು ಪವನ್‌ ದೇಶಪಾಂಡೆ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.

(ಆರ್. ವಿನಯ್‌ ಕುಮಾರ್)

ಸಿ.ಎಂ.ಗೌತಮ್‌, ವಿಕೆಟ್‌ ಕೀಪರ್‌ ಜವಾಬ್ದಾರಿ ನಿಭಾಯಿಸಲಿದ್ದು, ಶರತ್‌ ಶ್ರೀನಿವಾಸ್‌ ಅವರನ್ನು ಹೆಚ್ಚುವರಿ ವಿಕೆಟ್‌ ಕೀಪರ್‌ ಆಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಆರ್‌.ಸಮರ್ಥ್‌, ಮಯಂಕ್‌ ಅಗರವಾಲ್‌,ಸ್ಟುವರ್ಟ್‌ ಬಿನ್ನಿ ಮತ್ತು ಕೆ.ಗೌತಮ್‌ ಅವರೂ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಅಭಿಮನ್ಯು ಮಿಥುನ್‌, ಎಸ್‌.ಅರವಿಂದ್‌ ಮತ್ತು ರೋನಿತ್‌ ಮೋರೆ, ವೇಗದ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದು, ಶ್ರೇಯಸ್‌ ಗೋಪಾಲ್‌ ಮತ್ತು ಜೆ.ಸುಚಿತ್‌, ತಂಡದ ಸ್ಪಿನ್‌ ಅಸ್ತ್ರಗಳಾಗಿದ್ದಾರೆ.

ತಂಡ ಇಂತಿದೆ: ಆರ್‌.ವಿನಯ್‌ ಕುಮಾರ್‌ (ನಾಯಕ), ಆರ್‌.ಸಮರ್ಥ್‌, ಅಭಿಷೇಕ್‌ ರೆಡ್ಡಿ, ಮಯಂಕ್‌ ಅಗರವಾಲ್‌, ಮೀರ್‌ ಕೌನೈನ್‌ ಅಬ್ಬಾಸ್‌, ಪವನ್‌ ದೇಶಪಾಂಡೆ, ಸಿ.ಎಂ. ಗೌತಮ್‌ (ವಿಕೆಟ್‌ ಕೀಪರ್‌), ಸ್ಟುವರ್ಟ್‌ ಬಿನ್ನಿ, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಎಸ್‌.ಅರವಿಂದ್‌, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್, ಡಿ.ನಿಶ್ಚಲ್‌, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌) ಮತ್ತು ರೋನಿತ್‌ ಮೋರೆ.

ಕೋಚ್‌: ಪಿ.ವಿ.ಶಶಿಕಾಂತ್‌. ಸಹಾಯಕ ಕೋಚ್‌: ಜಿ.ಕೆ.ಅನಿಲ್‌ ಕುಮಾರ್‌. ಮ್ಯಾನೇಜರ್‌:ಬಿ.ಸಿದ್ದರಾಮು. ಫಿಸಿಯೊ: ಜಾಬ ಪ್ರಭು. ಟ್ರೈನರ್‌: ಪ್ರಶಾಂತ್ ಪೂಜಾರ. ವಿಡಿಯೊ ವಿಶ್ಲೇಷಕ:ಎಂ.ಶ್ರೀನಿವಾಸ್‌.

********

ಪ್ರಶಸ್ತಿ ಗೆಲ್ಲುವುದು ನಮ್ಮ ಗುರಿ: ಶಶಿಕಾಂತ್‌

ಬೆಂಗಳೂರು: ‘ಈ ಬಾರಿ ರಣಜಿ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮ ಗುರಿ. ಇದಕ್ಕಾಗಿ ಈಗಾಗಲೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ತಂಡದಲ್ಲಿರುವ ಯುವ ಮತ್ತು ಅನುಭವಿ ಆಟಗಾರರು ಎಲ್ಲಾ ಪಂದ್ಯಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿ ಈ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸಲಿದ್ದಾರೆ’ ಎಂದು ಕರ್ನಾಟಕ ತಂಡದ ಮುಖ್ಯ ಕೋಚ್‌ ಪಿ.ವಿ.ಶಶಿಕಾಂತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ತಂಡದ ಆಯ್ಕೆ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ರಾಹುಲ್‌, ಮನೀಷ್‌ ಮತ್ತು ಕರುಣ್‌ ಅವರು ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಅವರು ರಣಜಿಗೆ ಲಭ್ಯವಾಗುವುದು ಅನುಮಾನ. ಹೀಗಾಗಿ  ತಂಡದಿಂದ ಕೈಬಿಡಲಾಗಿದೆ. ಒಂದೊಮ್ಮೆ ಲಭ್ಯರಾದರೆ ಖಂಡಿತವಾಗಿಯೂ ತಂಡದಲ್ಲಿ ಅವಕಾಶ ನೀಡಲಾಗುತ್ತದೆ’ ಎಂದರು.

‘ವಿನಯ್‌ ಕುಮಾರ್‌, ಸತತ ಎರಡು ಬಾರಿ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ್ದಾರೆ. ಆದ್ದರಿಂದ ಈ ಬಾರಿಯೂ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಅಕ್ಟೋಬರ್‌ 14ರಂದು ಮೈಸೂರಿನಲ್ಲಿ ನಿಗದಿಯಾಗಿರುವ ಅಸ್ಸಾಂ  ವಿರುದ್ಧದ ಪಂದ್ಯ ತುಂಬಾ ಮಹತ್ವದ್ದು. ಇದರಲ್ಲಿ ಗೆದ್ದು ಅಭಿಯಾನ ಆರಂಭಿಸುವುದು ನಮ್ಮ ಉದ್ದೇಶ. ಈ ಕಾರಣದಿಂದಾಗಿಯೇ ಅಕ್ಟೋಬರ್‌ 11ರಂದು ಮೈಸೂರಿಗೆ ಹೋಗುತ್ತಿದ್ದೇವೆ. ಮೂರು ದಿನಗಳ ಕಾಲ ಕಠಿಣ ತಾಲೀಮು ನಡೆಸುತ್ತೇವೆ. ಎದುರಾಳಿಗಳ ಶಕ್ತಿ ಮತ್ತು ದೌರ್ಬಲ್ಯವನ್ನು ಅರಿತು ಅದಕ್ಕನುಗುಣವಾಗಿ ಸೂಕ್ತ ಯೋಜನೆ ಹೆಣೆಯುತ್ತೇವೆ’ ಎಂದು ವಿವರಿಸಿದರು.

Post Comments (+)