ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಪುತ್ರ ನಿರ್ದೇಶಕರಾಗಿರುವ ಸಂಸ್ಥೆಗೆ ಅಕ್ರಮವಾಗಿ ಜಮೀನು ಮಂಜೂರು: ಆರೋಪ

Last Updated 8 ಅಕ್ಟೋಬರ್ 2017, 6:19 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ನಿರ್ದೇಶಕರಾಗಿರುವ ಸಂಸ್ಥೆಗೆ ಬಿಬಿಎಂಪಿ, ಬಿಡಿಎ ವತಿಯಿಂದ ಅಕ್ರಮವಾಗಿ ಜಮೀನು ಮಂಜೂರು ಮಾಡಲಾಗಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಸುದ್ದಿಗಾರರೊಂದಿಗೆ ಇಲ್ಲಿ ಶನಿವಾರ ಮಾತನಾಡಿದ ಅವರು, ‘ಅಕ್ರಮವಾಗಿ ಜಮೀನು ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) 52 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರವು ಆದಾಯ ತೆರಿಗೆ (ಐಟಿ) ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ ಮಾಡಿಸಿ ಅವರನ್ನು ಹೆದರಿಸುವ ಕೆಲಸಕ್ಕೆ ಮುಂದಾಗಿದೆ. ಡಿವೈಎಸ್ಪಿ ಗಣಪತಿ ಸಂಬಂಧಿಕರು, ಸ್ನೇಹಿತರಿಗೆ ಸಿಐಡಿ ಅಧಿಕಾರಿಗಳು ಕರೆ ಮಾಡಿ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಬಾರದು ಎಂದು ತಾಕೀತು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರದ ಅನುದಾನ ಬಳಸಿಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಸ್ವಚ್ಛ ಭಾರತ್ ಯೋಜನೆಗೆ ಮಂಜೂರು ಮಾಡಿದ ಅನುದಾನವನ್ನು ರಾಜ್ಯ ಸರ್ಕಾರ ಶೌಚಾಲಯ ನಿರ್ಮಾಣ, ಆಸ್ಪತ್ರೆ ಹಾಗೂ ಶಾಲಾ ಕಟ್ಟಡಗಳ ರಿಪೇರಿಗೆ ಬಳಸಿಲ್ಲ. ಬದಲಿಗೆ, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಕಾಮಗಾರಿಗೆ ಬಳಸಿಕೊಂಡಿದೆ’ ಎಂದು ದೂಷಿಸಿದರು.

‘ಕೇಂದ್ರದಿಂದ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಗೆ ₹ 460 ಕೋಟಿ ಅನುದಾನ ಮಂಜೂರಾಗಿತ್ತು. ಅದನ್ನು ಬೇರೆಯದಕ್ಕೆ ವರ್ಗಾಯಿಸಿದ್ದರಿಂದ ಕೇಂದ್ರ ಸರ್ಕಾರವು ಅನುದಾನವನ್ನು ವಾಪಸ್‌ ಪಡೆದಿದೆ’ ಎಂದರು.

‘ಕೇಂದ್ರ ಸರ್ಕಾರವು ಅಮೃತ್ ಯೋಜನೆಗಾಗಿ ಜಿಲ್ಲೆಗೆ ₹102 ಕೋಟಿ ಮಂಜೂರು ಮಾಡಿದೆ. ಕಾಮಗಾರಿಗೆ ಚಾಲನೆ ನೀಡಲು ಮೂರು ಬಾರಿ ದಿನ ನಿಗದಿಗೊಳಿಸಿ ಮುಂದೂಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹಕಾರ ನೀಡುತ್ತಿಲ್ಲ’ ಎಂದು ದೂರಿದರು.

‘ಕರಾವಳಿ ಪ್ರದೇಶದಲ್ಲಿ ಐಸಿಸ್ ಸಂಘಟನೆ ಚಟುವಟಿಕೆ ನಡೆಯುತ್ತಿರುವ ಶಂಕೆ ಇದೆ. ದೇಶದ ಭದ್ರತೆ ಹಿತದೃಷ್ಟಿಯಿಂದ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ತನಿಖೆ ದಳ(ಎನ್ಐಎ) ಶಾಖಾ ಕಚೇರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT