ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲ್‌ವಾಲ್ಟ್‌: ರಾಜ್ಯದ ‘ಖ್ಯಾತಿ’ ಹೆಚ್ಚಿಸಿದ ಕ್ಯಾಥಿ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಣ್ಣ ವಯಸ್ಸಿನಲ್ಲೇ ಕ್ರೀಡಾ ಚಟುವಟಿಕೆಯತ್ತ ಒಲವು. ನಂತರ ಜಿಮ್ನಾಸ್ಟಿಕ್ಸ್‌ನಲ್ಲಿ ಸಾಧನೆ ಮಾಡುವ ಕನಸು ಹೊತ್ತು ಪ್ರಯತ್ನ. ಆದರೆ ಅವರಿಗೆ ಹೆಸರು ತಂದುಕೊಟ್ಟದ್ದು ಪೋಲ್‌ವಾಲ್ಟ್‌ ಕ್ರೀಡೆ. ತಡವಾಗಿ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡರೂ ಕೆಲವೇ ವರ್ಷಗಳಲ್ಲಿ ಹೆಸರು ಮಾಡಿದವರು ವೈದ್ಯೆ ಕ್ಯಾಥಿ ವಖಾರಿಯಾ.

ಬೆಂಗಳೂರಿನ ಜೆ.ಪಿ.ನಗರ ಫೋರ್ಟಿಸ್ ಆಸ್ಪತ್ರೆಯಲ್ಲಿ ಆರ್ಥೊಪೀಡಿಕ್ ಮತ್ತು ಕ್ರೀಡಾ ವೈದ್ಯಕೀಯ ವಿಭಾಗದಲ್ಲಿ ಟ್ರೇನಿ ವೈದ್ಯೆಯಾಗಿರುವ ಕ್ಯಾಥಿ ಅವರು ಪೋಲ್ ವಾಲ್ಟ್‌ಗೆ ಪ್ರವೇಶಿಸಿದ್ದು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್‌ ಎರಡನೇ ವರ್ಷದಲ್ಲಿ ಓದುತ್ತಿದ್ದಾಗ. ಸತತ ಪ್ರಯತ್ನದ ಫಲವಾಗಿ ಕೆಲವೇ ತಿಂಗಳಲ್ಲಿ ಈ ಕ್ರೀಡೆಯ ತಂತ್ರಗಳನ್ನು ಕರಗತ ಮಾಡಿಕೊಂಡ ಅವರಿಗೆ ಮೊದಲು ಹೆಸರು ತಂದುಕೊಟ್ಟದ್ದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರೀಡಾಕೂಟ.

ಪೋಲ್‌ ವಾಲ್ಟ್‌ನಲ್ಲಿ ಸತತ ಮೂರು ವರ್ಷ ಚಾಂಪಿಯನ್‌ ಪಟ್ಟ ಅಲಂಕರಿಸಿದ ಅವರು ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಸತತ ಎರಡು ವರ್ಷ ಚಿನ್ನ ಗೆದ್ದರು. ಎರಡು ವರ್ಷವೂ ಹೊಸ ಕೂಟ ದಾಖಲೆ ಮಾಡಿದರು. ರಾಜೀವ್‌ಗಾಂಧಿ ವಿವಿಯಲ್ಲಿ ಇಂಥ ಸಾಧನೆ ಮಾಡಿದ ಅಪರೂಪದ ಅಥ್ಲೀಟ್ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡರು.

ರಾಂಚಿಯಲ್ಲಿ 2011ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟ ಅವರಿಗೆ ಪೋಲ್‌ವಾಲ್ಟ್‌ನಲ್ಲಿ ರಾಷ್ಟ್ರಮಟ್ಟದ ಗೌರವ ತಂದುಕೊಟ್ಟಿತು. ಆ ಕೂಟದಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡ ಅವರು ನಂತರ ಹೆಚ್ಚಿನ ಸಾಧನೆಗೆ ಮುಂದಾದರು.

ಎಂಬಿಬಿಎಸ್ ಮುಗಿಸಿದ ನಂತರ 2012 ಮತ್ತು 2013ರಲ್ಲಿ ಸ್ಥಳೀಯ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್‌ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಸೋಂದೆಕೊಪ್ಪ ಮತ್ತು ಜೆ.ಸಿ.ರಸ್ತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಮಿನುಗು ತಾರೆಯಾಗಿ ಬೆಳೆದರು.

ಪಟಿಯಾಲದಲ್ಲಿ ಮೂರು ವರ್ಷಗಳ ಹಿಂದೆ ನಡೆದ ಫೆಡರೇಷನ್ ಕಪ್‌ ಕ್ರೀಡಾಕೂಟದಲ್ಲಿ ಜೀವನಶ್ರೇಷ್ಠ ನಾಲ್ಕು ಮೀಟರ್‌ ಎತ್ತರವನ್ನು ದಾಟಿದರು. ಇದು ಅವರ ಸಾಧನೆಯ ಹಾದಿಯಲ್ಲಿ ಹೊಸ ಬೆಳಕು ಮೂಡಿಸಿತು. ಏಕಲವ್ಯ ಪ್ರಶಸ್ತಿಯೂ ಅವರನ್ನು ಹುಡುಕಿಕೊಂಡು ಬಂತು.


2016ರಲ್ಲಿ ನಡೆದ ರಾಜ್ಯ ಅಥ್ಲೆಟಿಕ್ ಕೂಟದಲ್ಲಿ ಹೊಸ ದಾಖಲೆ ಬರೆದರು. ತಮ್ಮದೇ ಹೆಸರಿನಲ್ಲಿದ್ದ 3.40 ಮೀಟರ್ ಎತ್ತರದ ದಾಖಲೆಯನ್ನು ಉತ್ತಮಪಡಿಸಿ 3.70 ಮೀಟರ್ ಜಿಗಿದ ಅವರಿಗೆ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಸಾಧನೆ ಮಾಡುವ ಹುಮ್ಮಸ್ಸು ಮೂಡಿತು. ಈ ವರ್ಷದ ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿ 3.80 ಮೀಟರ್ ಎತ್ತರ ದಾಟಿ ಚಿನ್ನದ ಪದಕ ಬಗಲಿಗೆ ಹಾಕಿಕೊಂಡ ಅವರು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಕೂಟದಲ್ಲಿ ರಾಜ್ಯಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟು ಬೀಗಿದರು.

ಪಂಜಾಬ್‌ನ ಕಿರಣ್‌ಬೀರ್ ಕೌರ್‌ ಮತ್ತು ತಮಿಳುನಾಡಿನ ಮಂಜುಳಾ ಅವರನ್ನು ಭಾರಿ ಅಂತರದಲ್ಲಿ ಹಿಂದಿಕ್ಕಿದ ಕ್ಯಾಥಿ, 3.70 ಮೀಟರ್ ದಾಟಿ ಚಿನ್ನದ ನಗೆ ಸೂಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವ ಆಸೆ ಪೋಲ್‌ವಾಲ್ಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಆಸೆ ಹೊತ್ತಿರುವ ಕ್ಯಾಥಿ ಆ ದಿಸೆಯಲ್ಲಿ ಆಗಲೇ ಹೆಜ್ಜೆ ಇರಿಸಿದ್ದಾರೆ. ಏಷ್ಯನ್‌ ಕೂಟಕ್ಕೆ ಸಜ್ಜಾಗುತ್ತಿರುವ ಅವರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಹೆಬ್ಬಯಕೆಯನ್ನೂ ಹೊಂದಿದ್ದಾರೆ.

‘ಭಾರತದಲ್ಲಿ ಪೋಲ್‌ವಾಲ್ಟ್ ಕ್ರೀಡೆ ಹೆಚ್ಚು ಹೆಸರು ಮಾಡಲಿಲ್ಲ. ಅನೇಕ ಮಂದಿಗೆ ಈ ವಿಭಾಗದಲ್ಲಿ ಸರಿಯಾಗಿ ತರಬೇತಿಯೂ ಸಿಗುತ್ತಿಲ್ಲ. ಹೀಗಾಗಿ ಪ್ರತಿಭೆಗಳು ಮುರುಟಿ ಹೋಗುತ್ತವೆ. ಆದ್ದರಿಂದ ಇದಕ್ಕೆ ಸೂಕ್ತ ವೇದಿಕೆ ಒದಗಿಸಬೇಕಾದ ಅಗತ್ಯವಿದೆ’ ಎನ್ನುತ್ತಾರೆ ಕ್ಯಾಥಿ

***
ಗಾಯಕ್ಕೆ ಧೃತಿಗೆಡದ ಛಲಗಾತಿ

ಕಳೆದ ವರ್ಷ ಕ್ಯಾಥಿ ಅವರಿಗೆ ಕ್ರೀಡಾ ಜೀವನದಲ್ಲಿ ಪ್ರಮುಖ ಸವಾಲು ಎದುರಾಗಿತ್ತು. ಮೊಣಕಾಲಿಗೆ ಗಾಯವಾಗಿ ಪೋಲ್‌ವಾಲ್ಟ್ ಮಾಡಲು ಸಾಧ್ಯವಾಗದ ಸ್ಥಿತಿ ಎದುರಾದಾಗ ಅವರ ಜಂಘಾಬಲವೇ ಉಡುಗಿ ಹೋಗಿತ್ತು. ಆದರೆ ಧೃತಿಗೆಡದ ಅವರು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಮುಂದಾದರು.

‘ಇನ್ನೆಂದೂ ಪೋಲ್‌ವಾಲ್ಟ್ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆದರೂ ಧೈರ್ಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಲು ತಯಾರಾದೆ. ಚಿಕಿತ್ಸೆಯ ನಂತರ ಮತ್ತೆ ಅಂಗಣಕ್ಕೆ ಇಳಿದೆ. ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಕೂಟದಲ್ಲಿ ಚಿನ್ನ ಗೆದ್ದು ಸಂಭ್ರಮಪಟ್ಟೆ. ಚಿಕಿತ್ಸೆಯ ನಂತರ ಕೆಲವು ತಂತ್ರಗಳನ್ನು ಬದಲಿಸಿದೆ. ಅದು ಫಲ ನೀಡಿತು. ಹೀಗಾಗಿ ಈಗ ಖುಷಿಯಾಗಿದ್ದೇನೆ. ತಂತ್ರಗಳನ್ನು ಸರಿಯಾಗಿ ಬಳಸಿದರೆ ಹೊಸ ದಿಗಂತ ಮುಟ್ಟುವುದು ಸುಲಭ ಎಂಬುದು ನನಗೆ ಮನವರಿಕೆಯಾಗಿದೆ’ ಎನ್ನುತ್ತಾರೆ ಅವರು.

***
ಉಪಾಧ್ಯಾಯರ ತೆಕ್ಕೆಯಿಂದ ಅಮೆರಿಕ ವರೆಗೆ...

ಖ್ಯಾತಿ ಅವರಲ್ಲಿ ಒಬ್ಬರು ಪೋಲ್‌ವಾಲ್ಟ್‌ ಪಟು ಅಡಗಿದ್ದಾರೆ ಎಂಬುದನ್ನು ಮೊದಲು ಗುರುತಿಸಿದ್ದು ಬೆಂಗಳೂರು ವೈದ್ಯಕೀಯ ಕಾಲೇಜಿನ ಕ್ರೀಡಾ ತಂಡದ ವ್ಯವಸ್ಥಾಪಕ ಆ್ಯಂಟೊ. ಖ್ಯಾತಿ ಅವರನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯಿ) ಪರಿಚಯಿಸಿದ್ದೂ ಅವರೇ.

‘ಸಾಯಿಯಲ್ಲಿ ಲಭಿಸಿದ ಅತ್ಯುತ್ತಮ ತರಬೇತಿ ನನ್ನನ್ನು ಉತ್ತಮ ಕ್ರೀಡಾಪಟುವಾಗಿ ಮಾರ್ಪಡಿಸಿತು’ ಎಂದು ಖ್ಯಾತಿ ಈಗಲೂ ನೆನಪಿಸಿಕೊಳ್ಳುತ್ತಾರೆ.
ಎಲ್‌.ಎಸ್‌.ಉಪಾಧ್ಯಾಯ ಅವರ ಗರಡಿಯಲ್ಲಿ ಪಳಗಿದ ಖ್ಯಾತಿ ಅತ್ಯುತ್ತಮ ತಂತ್ರಗಳನ್ನು ಕರಗತ ಮಾಡಿಕೊಂಡರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಮನಸ್ಸು ಮಾಡಿ ಅಮೆರಿಕದ ಡ್ಯಾನ್‌ ಪಾಫ್‌ ಅವರ ಬಳಿ ತರಬೇತಿಗೆ ಸೇರಲು ಬಯಸಿದರು. ಬೆಂಗಳೂರಿನಲ್ಲಿ ನಡೆದ ತರಬೇತಿಯ ವಿಡಿಯೊಗಳನ್ನು ಕಳುಹಿಸಿಕೊಟ್ಟರು. ಅದನ್ನು ನೋಡಿದ ಡ್ಯಾನ್‌ ಅಮೆರಿಕದ ಅರಿಜೋಜ್‌ನಲ್ಲಿರುವ ಆಲ್ಟಿಸ್‌ನಲ್ಲಿ ತರಬೇತಿಗೆ ಕರೆಸಿಕೊಂಡರು.

‘ತಾಂತ್ರಿಕವಾಗಿ ಬಹಳಷ್ಟು ಕಲಿಯುವುದಿದೆ ಎಂದು ನನಗೆ ಮನವರಿಕೆಯಾದದ್ದು ಅಮೆರಿಕದಲ್ಲಿ ತರಬೇತಿ ಪಡೆಯುವಾಗ. ಟೇಕ್ ಆಫ್‌, ಓಟದ ವೇಗ ಮತ್ತು ಪೋಲ್ ಜಗ್ಗುವ ವಿಧಾನ ಇತ್ಯಾದಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅದರ ಫಲಿತಾಂಶ ಈಗ ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಖ್ಯಾತಿ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT