ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಫಿಟ್‌ನೆಸ್‌ ಸೂತ್ರಗಳು

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಫುಟ್‌ಬಾಲ್ ಆಟಗಾರರಿಗಾಗಿಯೇ ಇರುವ ವಿಭಿನ್ನ ಫಿಟ್‌ನೆಸ್‌ ಸೂತ್ರಗಳೇನು?
ಕಂಡೀಷನಿಂಗ್‌, ಸಾಮರ್ಥ್ಯ ಪರೀಕ್ಷೆ, ವೇಗ, ಲೋವರ್ ಹಾಗೂ ಅಪ್ಪರ್ ಸ್ಟ್ರೆಂತನಿಂಗ್‌ ಸೂತ್ರಗಳನ್ನು ಬಳಸಿ ಆಟಗಾರರಿಗೆ ಫಿಟ್‌ನೆಸ್ ತರಬೇತಿ ನೀಡಲಾಗುತ್ತದೆ. ಕಂಡೀಷನಿಂಗ್ ಅಂದರೆ ಬೀಪ್‌ ಪರೀಕ್ಷೆ ಕೂಡ ಇದರಲ್ಲಿ ಸೇರಿದೆ. ಒಂದು ಬೀಪ್‌ನಿಂದ ಇನ್ನೊಂದು ಬೀಪ್ ಆಗುವವರೆಗೂ ಆಟಗಾರರು ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಈ ಸಮಯದಲ್ಲಿ ಅವರು ನಿಲ್ಲಿಸದೆ ಕಸರತ್ತು ಮಾಡಿದರೆ ಫಿಟ್ ಆಗಿದ್ದಾರೆ ಎಂಬುದು ಮನದಟ್ಟಾಗುತ್ತದೆ. ವಾರದಲ್ಲಿ ಒಮ್ಮೆ ಅಥವಾ ಮೂರು ಬಾರಿ ಮಾತ್ರ ಈ ಪರೀಕ್ಷೆ ಮಾಡುತ್ತೇವೆ. ಯಾವುದೇ ಟೂರ್ನಿ ಇಲ್ಲದ ವೇಳೆ ಇಂತಹ ಪರೀಕ್ಷೆಗಳನ್ನು ಮಾಡುತ್ತೇವೆ. ಹತ್ತಿರದಲ್ಲಿ ಮಹತ್ವದ ಟೂರ್ನಿಗಳು ಇದ್ದಾಗ ಇಂತಹ ಪರೀಕ್ಷೆಗಳಿಂದ ಆಟಗಾರರ ಒತ್ತಡ ಹೆಚ್ಚುತ್ತದೆ.

ಆಟಗಾರರಿಗೆ ದಿನಕ್ಕೆ ಎಷ್ಟು ಪೌಷ್ಠಿಕಾಂಶದ ಅಗತ್ಯವಿದೆ.
ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನು ದಿನಕ್ಕೆ ಶೇಕಡಾ 60ರಿಂದ 70ರಷ್ಟು ತಿನ್ನಬಹುದು. ಅನ್ನ, ಚಪಾತಿ ಕೂಡ ಇದರಲ್ಲಿ ಸೇರಿದೆ. ಪ್ರೋಟಿನ್‌ಗಾಗಿ ಕಾಳು, ಮಶ್ರೂಮ್‌ ತಿನ್ನುತ್ತಾರೆ. ಇದು ದೇಹಕ್ಕೆ ಶೇ 10ರಿಂದ 15ರಷ್ಟು ಅಗತ್ಯವಿದೆ. ಕೊಬ್ಬು ಶೇ. 20ರಿಂದ 30ರಷ್ಟು ಬೇಕಾಗುತ್ತದೆ. ಆದರೆ ಖಾರ, ಎಣ್ಣೆ ಪದಾರ್ಥಗಳನ್ನು ಮಾತ್ರ ತಿನ್ನುವಂತಿಲ್ಲ. ಹುರಿದ ತರಕಾರಿ ಆಹಾರಗಳನ್ನು ತಿನ್ನುವಂತಿಲ್ಲ. ಬೇಯಿಸಿದ ತರಕಾರಿ ತಿನ್ನಬಹುದು. ಹಸಿಯಾದ ಸೊಪ್ಪು, ತರಕಾರಿಗಳ ಸಲಾಡ್ ಕೂಡ ಬಹುಮುಖ್ಯ ಆಹಾರ.  ಈ ಸೂತ್ರಗಳನ್ನು ಆಟಗಾರರು ಮನೆಯಲ್ಲೂ ಅಳವಡಿಸಿಕೊಳ್ಳಬೇಕು. ಕೇವಲ ಟೂರ್ನಿಯ ಸಂದರ್ಭಗಳಲ್ಲಿ ಮಾತ್ರ ನಡೆಸಿದರೆ ಪ್ರಯೋಜನ ಆಗುವುದಿಲ್ಲ. ದಕ್ಷಿಣ ಭಾರತದ ಆಟಗಾರರು ಅವರ ಪ್ರಿಯವಾದ ಪೂರಿ, ವಡಾ, ಚಟ್ನಿಯನ್ನು ಬಿಡಬೇಕಾಗುತ್ತದೆ.

ವೇ ಪ್ರೋಟೀನ್‌ ಎಂದರೆ ಏನು? ಇದನ್ನು ಎಲ್ಲಾ ಆಟಗಾರರು ಬಳಸಬಹುದಾ?
ನಾವು ಆಡುವಾಗ ಇದೆಲ್ಲಾ ಇರಲಿಲ್ಲ. ಈಗಿನವರಿಗೆ ಹೊಸ ಅನುಕೂಲಗಳಿವೆ. ಅದನ್ನು ಬಳಸಿಕೊಂಡು ಆಡುತ್ತಾರೆ. ಸ್ನಾಯುಗಳು ಚೇತರಿಸಿಕೊಳ್ಳುವುದಕ್ಕಾಗಿ ಇದನ್ನು ಕುಡಿಯುತ್ತಾರೆ. ಒಂದು ಚಿಕ್ಕ ಪ್ಯಾಕೆಟ್‌ನಲ್ಲಿರುವ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿಯಬೇಕು. ಇದು ಎನರ್ಜಿ ಡ್ರಿಂಕ್‌ ಮಾದರಿಯ ಒಂದು ಸ್ಪೋರ್ಟ್ಸ್‌ ಡ್ರಿಂಕ್ಸ್‌ ಅಷ್ಟೇ. ನಾವು ಆಡುವಾಗ ಗ್ಲೂಕಾನ್ ಡಿ ಕುಡಿಯುತ್ತಿದ್ದೆವು. ಈಗಿನವರಿಗೆ ಟೆಟ್ರಾ ಪ್ಯಾಕ್‌ ಹಾಗೂ ಮಾರುಕಟ್ಟೆಯಲ್ಲಿ ಸಿಗುವ ರೆಡಿ ಜ್ಯೂಸ್‌ಗಳು ಇವೆ. ಆದರೆ ನಾವು ಇದಕ್ಕಿಂತ ಹೆಚ್ಚಾಗಿ ತಾಜಾ ಹಣ್ಣಿನ ರಸ ಕುಡಿಯಲು ಸಲಹೆ ನೀಡುತ್ತೇವೆ.

ತರಬೇತಿ ಹಾಗೂ ಫಿಟ್‌ನೆಸ್‌ಗೆ ಬೇಕಾದ ಮುನ್ನೆಚ್ಚರಿಕೆಗಳೇನು?
ಪ್ರತಿ ದಿನ ತರಬೇತಿ ಪ್ರಾರಂಭ ಮಾಡುವ ಮೊದಲು ಆಟಗಾರರಿಗೆ ಮೂತ್ರ ಪರೀಕ್ಷೆ ಮಾಡುತ್ತೇವೆ. ಇದಕ್ಕೆ ವಿಶೇಷವಾದ ತಂತ್ರಜ್ಞಾನವನ್ನು ಬಳಸುವುದಿಲ್ಲ. ಬದಲಾಗಿ ಮೂತ್ರದ ಬಣ್ಣವನ್ನು ಆಧರಿಸಿ ಅವರ ಆರೋಗ್ಯವನ್ನು ಅಂದಾಜು ಮಾಡುತ್ತೇವೆ. ಬಣ್ಣದಲ್ಲಿ ಹೆಚ್ಚು ಬದಲಾವಣೆ ಕಂಡು ಬಂದರೆ ಅವರಿಗೆ ನಿರ್ಜಲೀಕರಣ ಆಗದಿರಲು ಹೆಚ್ಚು ನೀರು ಕುಡಿಯುವ ಸಲಹೆ ನೀಡುತ್ತೇವೆ. ಸ್ನಾಯು ಸೆಳೆತದ ಅಪಾಯದಿಂದ ತಪ್ಪಿಸಲು ಈ ರೀತಿಯ ಮುನ್ನೆಚ್ಚರಿಕೆ ಅಗತ್ಯ.

ಒಬ್ಬ ಫುಟ್‌ಬಾಲ್‌ ಆಟಗಾರನಿಗೆ ದಿನವೊಂದಕ್ಕೆ ಎಷ್ಟು ಕ್ಯಾಲೊರಿಯ ಅಗತ್ಯವಿದೆ?
ಪುರುಷ ಆಟಗಾರನಾದರೆ ದಿನವೊಂದಕ್ಕೆ 4000 ಕ್ಯಾಲೊರಿ ಬೇಕು.

ಪ್ರತಿ ದಿನ ಎಷ್ಟು ತಾಸು ಅಭ್ಯಾಸ ನಡೆಸುವ ಅಗತ್ಯವಿದೆ?
ಯಾವುದೇ ಟೂರ್ನಿ ಇಲ್ಲದಿದ್ದರೆ ದಿನಕ್ಕೆ 4ರಿಂದ 5 ತಾಸು. ನಡುವೆ ಒಂದು ವಿರಾಮ ಮಾತ್ರ ಇರುತ್ತದೆ. ಸಮೀಪದಲ್ಲಿ ಯಾವುದಾದರೂ ಟೂರ್ನಿ ಇದ್ದರೆ ಮೂರರಿಂದ ನಾಲ್ಕು ತಾಸು ಮಾತ್ರ.

ಫುಟ್‌ಬಾಲ್‌ ಬಿಟ್ಟು ಫಿಟ್‌ನೆಸ್‌ಗಾಗಿ ಬೇರೆ ಯಾವ ಆಟಗಳನ್ನು ಆಡುತ್ತಾರೆ?
ನಮ್ಮ ಆಟಗಾರರು ಬ್ಯಾಟ್‌ ಬದಲಾಗಿ ಕಾಲಿನಲ್ಲಿ ಕ್ರಿಕೆಟ್‌ ಆಡುತ್ತಾರೆ. ಟೆನಿಸ್‌ ಕೂಡ ಆಡುತ್ತಾರೆ.

ಫುಟ್‌ಬಾಲ್‌ ಕಾಲಿನಲ್ಲಿ ಆಡುವ ಕ್ರೀಡೆ ಆಗಿರುವುದರಿಂದ ಕಾಲುಗಳಿಗೆ ವಿಶೇಷವಾದ ವ್ಯಾಯಾಮ ಅಥವಾ ಫಿಟ್‌ನೆಸ್ ಸೂತ್ರಗಳು ಏನಾದರೂ ಇವೆಯೇ?
ಈ ಆಟದ ಬಹುತೇಕ ಫಿಟ್‌ನೆಸ್ ಹಾಗೂ ತರಬೇತಿ ಎಲ್ಲವೂ ಕಾಲುಗಳಿಗೆ ಕೇಂದ್ರಿತವಾಗಿರುತ್ತವೆ. ವಾರದಲ್ಲಿ ಮೂರು ದಿನ ವೇಟ್ ಟ್ರೈನಿಂಗ್‌ ಮಾಡುತ್ತಾರೆ. ಗೋಲ್‌ಕೀಪರ್‌ ಬಿಟ್ಟು ಉಳಿದ ಆಟಗಾರರಿಗೆ ಎಲ್ಲರಿಗೂ ಕಾಲುಗಳಲ್ಲಿ ಬಲ ಹೆಚ್ಚಿರಬೇಕು.

ಕೋಚಿಂಗ್‌ ಜೊತೆಗೆ ಫಿಟ್‌ನೆಸ್ ತರಬೇತಿ ನೀಡುವುದು ನಿಮಗೆ ಕಷ್ಟ ಆಗುವುದಿಲ್ಲವೇ?
ಖಂಡಿತಾ ಇಲ್ಲ. ನಮ್ಮ ತರಬೇತಿಯಲ್ಲಿ ಎಲ್ಲವನ್ನೂ ಹೇಳಿಕೊಟ್ಟಿರುತ್ತಾರೆ. ಪ್ರತಿ ಪಂದ್ಯದ ಮೊದಲು ಆಟಗಾರನ ಹೃದಯ ಬಡಿತ ಹಾಗೂ ನಾಡಿ ಮಿಡಿತ ಎಷ್ಟಿರಬೇಕು, ಇದನ್ನೆಲ್ಲಾ ಪರೀಕ್ಷೆ ಮಾಡುವುದನ್ನು ಕಲಿತುಕೊಂಡಿರುತ್ತೇವೆ. ಇದನ್ನು ಆಧರಿಸಿಯೇ ತಂಡವನ್ನು ಅಂತಿಮಗೊಳಿಸುವ ವ್ಯವಸ್ಥೆ ಇದೆ. ಹೃದಯ ಬಡಿತದಲ್ಲಿ ಬದಲಾವಣೆಯಾಗಿದ್ದರೆ ಆ ಆಟಗಾರನಿಗೆ ವಿಶ್ರಾಂತಿ ಹೇಳುತ್ತೇವೆ. ವೈದ್ಯರ ಅಗತ್ಯ ಇದ್ದವರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ.

ಮಾನಸಿಕ ತಯಾರಿಗಾಗಿ ಯಾವುದಾದರೂ ತಂತ್ರಗಳನ್ನು ಬಳಸುತ್ತೀರಾ?
ಇದು ಎಲ್ಲಾ ಆಟಗಳಲ್ಲೂ ಬಹುಮುಖ್ಯವಾದ ಭಾಗ. ಎಷ್ಟೇ ದೈಹಿಕ ತಯಾರಿ ನಡೆಸಿದ್ದರೂ ಮಾನಸಿಕವಾಗಿ ಅವರು ಪಂದ್ಯಕ್ಕೆ ಸಿದ್ಧಗೊಳ್ಳುವುದು ತುಂಬಾ ಮುಖ್ಯ. ತಮಾಷೆಯ ಆಟಗಳನ್ನು ಆಡಿಸುತ್ತೇವೆ. ಕುಟುಂಬ ಅಥವಾ ಹೊರಡಗಡೆಯ ಬೇಸರಗಳನ್ನು ಮರೆತು ಆಟದ ಬಗ್ಗೆ ಗಮನಹರಿಸುವಂತೆ ಮಾಡುತ್ತೇವೆ. ಇದು ಸ್ಪರ್ಧೆಯ ವೇಳೆ ಮಾತ್ರ ಅಲ್ಲ. ಪ್ರತಿ ದಿನ ಅಭ್ಯಾಸದ ಮೊದಲೂ ಇದನ್ನು ಮಾಡಲಾಗುತ್ತದೆ. ಕೋಚ್ ಹಾಗೂ ಇತರ ಸಿಬ್ಬಂದಿ ವರ್ಗದವರು ಆಪ್ತವಾಗಿ ಮಾತನಾಡುವುದರಿಂದ ಕೂಡ ಆಟಗಾರರು ಉಲ್ಲಾಸದಿಂದ ಅಭ್ಯಾಸ ಮಾಡಬಲ್ಲರು.

ಆರೋಗ್ಯಕರವಾದ ಡಯಟಿಂಗ್ ಸೂತ್ರಗಳೇನು?
ಹೊರಗಡೆ ತಿನ್ನಬಾರದು. ರಸ್ತೆ ಬದಿ ಆಹಾರಗಳಿಂದ ದೂರ ಇರಬೇಕು. ಹಸಿ ತರಕಾರಿ, ಹಣ್ಣುಗಳಿಂದ ಮಾಡಿದ ಸಲಾಡ್‌, ಹಾಲು ಮುಖ್ಯವಾದದ್ದು. ಅದರ ಜತೆ ನಾವು ನಮ್ಮ ಊರು ಬಿಟ್ಟು ಹೊರಗಡೆ ಹೋದಾಗ ಹೋಟೆಲ್ ಮ್ಯಾನೇಜರ್ ಅಥವಾ ಶೆಫ್‌ ಬಳಿ ಮಾತನಾಡಿ ನಮ್ಮದೇ ದಿನನಿತ್ಯದ ಆಹಾರಕ್ಕೆ ತಕ್ಕಂತೆ ಅಡುಗೆ ಮಾಡಿಸುತ್ತೇವೆ. ಇದರಿಂದ ಕೂಡ ನಮ್ಮ ಡಯಟ್ ಹಾಳಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT