ಬಣ್ಣದ ಗುಳ್ಳೆಯಂತೆ ಬದುಕು...

ಮಂಗಳವಾರ, ಜೂನ್ 18, 2019
24 °C

ಬಣ್ಣದ ಗುಳ್ಳೆಯಂತೆ ಬದುಕು...

Published:
Updated:
ಬಣ್ಣದ ಗುಳ್ಳೆಯಂತೆ ಬದುಕು...

‘ಜೀವನವೇ ನೀರಮೇಲಣ ಗುಳ್ಳೆಯಂತೆ...  ಇದ್ದಷ್ಟು ಹೊತ್ತು ಮಿಂಚುತಿರು... ಇತರರಿಗೆ ಮುದನೀಡುವಂತೆ ಬಾಳು’ ಎಂಬುದು ಒಂದು ನಾಣ್ಣುಡಿಯ ಆಶಯ. ಬಾಲ್ಯದಲ್ಲಿ ಮಕ್ಕಳ ಮುಗ್ಧ ಮನಸು ಪ್ರತಿ ನಿಮಿಷವನ್ನೂ ಹಾಗೆ ಕಳೆಯಲು ಹವಣಿಸುತ್ತಲೇ ಇರುವುದು ಸಹಜ.

ಪ್ರವಾಸಿ ಜಾಗಗಳಿಗೆ, ಉದ್ಯಾನಗಳಿಗೆ ಅಥವಾ ಜಾತ್ರೆಗಳಿಗೆ ಹೋದಾಗ ಅವರಿಗೆ ಸೋಪಿನ ದ್ರವದ ಡಬ್ಬಿ ಮತ್ತು ಸುರುಳಿ ಇರುವ ಪ್ಲಾಸ್ಟಿಕ್ ಕಡ್ಡಿಯನ್ನು ಕೊಳ್ಳುವುದು ಆಕರ್ಷಣೆಯ ಖರೀದಿ. ಆ ಕಡ್ಡಿಯನ್ನು ದ್ರವದಲ್ಲಿ ಅದ್ದಿ ಊದಿ ಬಣ್ಣದ ಗುಳ್ಳೆ ಮಾಡಿ ಪುರ್ ಪುರನೆ ಹಾರಿಸಿ ಆನಂದ ಪಡೆಯುವುದೂ ಸರ್ವೇಸಾಮಾನ್ಯ. ಏಳು ಬಣ್ಣಗಳಿಂದ ಕಂಗೊಳಿಸುತ್ತಾ ಗಾಳಿಯಲ್ಲಿ ತೇಲುವ ಆ ಗುಳ್ಳೆಗಳ ಸೌಂದರ್ಯಕ್ಕೆ ಮನಸೋಲದವರಾರು? ಜೀವನವೂ ಕ್ಷಣಿಕವಾದರೂ ಇದ್ದಷ್ಟು ಕ್ಷಣ ಆ ಗುಳ್ಳೆಗಳ ಮೆರಗು ಹೊಂದಿದ್ದಾದರೆ ಬದುಕು ಸಾರ್ಥಕವಲ್ಲವೇ? ಅಂತಹದ್ದೊಂದು ಸುಂದರ ದೃಶ್ಯವನ್ನು ಲಾಲ್‌ಬಾಗ್ ಗಾಜಿನಮನೆಯ ಬಳಿ ಸೆರೆಹಿಡಿದವರು, ಯಶವಂತಪುರದ, ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಪಿಯುಸಿ ವಿದ್ಯಾರ್ಥಿನಿ ಚಂದನಾ ಟಿ.

ಕಳೆದೈದು ವರ್ಷಗಳಿಂದ ಕ್ಯಾಂಡಿಡ್ ಮತ್ತು ರಾತ್ರಿಸಮಯದ ಛಾಯಾಗ್ರಹಣದಲ್ಲಿ ಆಸಕ್ತರಾಗಿರುವ ಚಂದನಾ, ಇಲ್ಲಿ ಬಳಸಿರುವ ಕ್ಯಾಮೆರಾ, ನಿಕಾನ್ ಡಿ 3200 ಮತ್ತು ಅದರೊಂದಿಗೆ  18 – 55 ಎಂ.ಎಂ. ಜೂಂ ಲೆನ್ಸ್. 

ಈ ಛಾಯಾಚಿತ್ರದ ಎಕ್ಸ್‌ಪೋಷರ್ ವಿವರ ಇಂತಿವೆ: ಲೆನ್ಸ್ ಫೋಕಲ್ ಲೆಂತ್  23 ಎಂ.ಎಂ., ಅಪರ್ಚರ್ f 5.6,  ಷಟರ್ ವೇಗ 1/ 200  ಸೆಕೆಂಡ್, ಐ.ಎಸ್.ಒ 100.

ಈ ಚಿತ್ರದ ಗುಣಾತ್ಮಕ ವಿಶೇಷವನ್ನು ಅವಲೋಕಿಸಿದಾಗ ಗುರುತಿಸಬಲ್ಲ ಕೆಲವು ಅಂಶಗಳು ಇಂತಿವೆ:

* ಇದೊಂದು ಕ್ಯಾಂಡಿಡ್  ಛಾಯಾಚಿತ್ರ. ಮಕ್ಕಳ ಆಟ, ಮೋಜು ಹೊರಾಂಗಣದ ಬೀದಿ ಬದಿ, ಆಟದ ಮೈದಾನ ಅಥವಾ ಪ್ರವಾಸಿ ಸ್ಥಳಗಳಲ್ಲಿ ಕ್ಯಾಮೆರಾಕ್ಕೆ ಸಿಕ್ಕುವ ಸುಲಭ ವಸ್ತುಗಳು. ಕ್ಯಾಮೆರಾ ತಮ್ಮೆಡೆಗೆ ಫೋಕಸ್ ಆಗುತ್ತಿದ್ದಂತೆಯೇ ಸೂಕ್ಷ್ಮ ಮನಸಿನ ಮಕ್ಕಳು ಫೋಸ್ ಕೊಟ್ಟೋ ಅಥವಾ ತಪ್ಪಿಸಿಕೊಳ್ಳುತ್ತಲೋ ಛಾಯಾಚಿತ್ರಕಾರರಿಗೆ ಸವಾಲೆಸೆಯುವುದೂ ಇದ್ದದ್ದೇ.

* ಸಹಜವಾದ ಇದ್ದಷ್ಟೇ ಬೆಳಕಿನಲ್ಲಿ, ಮುಖ್ಯವಸ್ತುವನ್ನು ಕೇಂದ್ರೀಕರಿಸಿ (ಫೋಕಸ್), ಪೂರಕ ಇತರ ವಸ್ತುಗಳ ಮತ್ತು ಹಿನ್ನೆಲೆಯ ನೋಟವನ್ನೂ ತಕ್ಕಮಟ್ಟಿಗೆ ಫೋಕಸ್ಸಾಗಿ ಕಾಣಿಸಿ, ಮಿಂಚಿನೋಟದಲ್ಲಿ ಇಲ್ಲಿನಂತೆ  ಕ್ಲಿಕ್ಕಿಸುವಲ್ಲಿ ಕ್ಯಾಮೆರಾದ ನಿಯಂತ್ರಣಗಳ

(ಕಂಟ್ರೋಲ್ಸ್) ಮೇಲಿನ ಹಿಡಿತ ಮತ್ತು ಪರಿಣಿತಿ ಅತ್ಯಗತ್ಯ. ಚಂದನಾ ಅವರ ಹಲವಾರು ವರ್ಷಗಳ ಅಭ್ಯಾಸ ಮತ್ತು ಚಿಕ್ಕ ವಯಸ್ಸಿನಲ್ಲೇ ಗಳಿಸಿರುವ ತಾಂತ್ರಿಕ ಪರಿಣಿತಿಗೆ ಈ ಚಿತ್ರ ಒಂದು ಸಾಕ್ಷಿ.

* ತನ್ನದೇ ಲೋಕದಲ್ಲಿ ಒಂದೊಂದಾಗಿ ಸೋಪಿನ ಬಣ್ಣದ ಗುಳ್ಳೆ ಉಬ್ಬಿಸಿ ಗಾಳಿಗೆ ತೇಲಿಬಿಡುತ್ತಿರುವ ಚೌಕಟ್ಟಿನ ಬಲಬದಿಯ ಮುಖ್ಯವಸ್ತುವಾದ ಹೆಣ್ಣುಮಗಳ ತಲ್ಲೀನತೆಯು ಸಹಜವಾಗಿ ಮೂಡಿ ಬಂದಿದೆ. ಎಡಬದಿಯ ಗೆಳತಿಯ ಸಂತಸದ ಮುಖ, ಒಟ್ಟಾರೆ ಸೆರೆಹಿಡಿದಿರುವ ಭಾವಪ್ರಚೋದನೆಗೆ (ಎಮೋಶನ್) ಪೂರಕವಾಗಿದೆ.\

* ಸ್ಥಿರ ಛಾಯಾಗ್ರಹಣದಲ್ಲಿ (ಸ್ಟಿಲ್ ಫೋಟೋಗ್ರಫಿ), ಮುಖ್ಯವಸ್ತುವನ್ನು (ಎಂಟ್ರಿಪಾಯಿಂಟ್) ಚೌಕಟ್ಟಿನ ಮಧ್ಯದಲ್ಲಿಡಿಸದೇ, ಆಚೀಚೆ ಒಂದುಮೂರಾಂಶದ ಭಾಗದಲ್ಲಿ ದೃಷ್ಟಿರೇಖೆಗೆ ಅನುಗುಣವಾಗಿ (ಡೈರೆಕ್ಷನ್ ಆಫ್ ಸೈಟ್) ರೂಪಿತವಾಗಿಸುವುದು ಒಳ್ಳೆಯ ಚಿತ್ರ ಸಂಯೋಜನೆ. ಪೂರಕ ವಸ್ತುವಿನೆಡೆ (ಗೆಳತಿ) ಸೆಳೆಯಲು ಸಹಕಾರಿಯಾಗಬಲ್ಲ ಬೆಳಗಿದ ಎಳೆಗಳು (ಇಲ್ಲಿ ತೇಲುತ್ತಾ ಅವಳೆಡೆಗೆ ಸಾಗುತ್ತಿರುವ ಬಣ್ಣದ ಗುಳ್ಳೆಗಳು) ನೋಡುಗನ ಕಣ್ಣುಗಳಿಗೆ ಒಂದೆಡೆಯೇ ಸ್ಥಿರವಾಗಿ ನಿಲ್ಲದೆ, ಚಲನೆಯನ್ನೂ ಉಂಟು ಮಾಡುತ್ತಿವೆ.

* ಚಲನೆಯಲ್ಲಿ ಎರಡು ಬಗೆ ಸಾಮಾನ್ಯ. ಒಂದು, ಆ ಎಳೆಗಳು ಚಿತ್ರ ಚೌಕಟ್ಟಿನ ಒಂದು ಭಾಗದಿಂದ ಮತ್ತೊಂದೆಡೆ ಸಮಾನಾಂತರವಾಗಿ (ಜಡವಾಗಿದ್ದಂತೆ) ಗೋಚರಿಸುವುದು (ಸ್ಟೇಲ್ ಮೂವ್ ಮೆಂಟ್). ಅಲ್ಲಿ ಭಾವನೆಗೆ ಅವಕಾಶ ಕಡಿಮೆ.  ಮತ್ತೊಂದು, ಅವು ಒಂದು ಬದಿಯ ಕೆಳ ಭಾಗದಿಂದ ಮತ್ತೊಂದು ಅಂಚಿನ ಮೇಲಿನ ಭಾಗದೆಡೆಗೆ ಚಿಮ್ಮಿದಂತೆ ಸಾಗುವುದು. ಆಗ ತ್ವರಿತವಾದ ಭಾವನೆಗೆ (ಎಕ್ಸೈಟ್ ಮೆಂಟ್) ಹೆಚ್ಚಿನ ಅವಕಾಶ ಸಾಧ್ಯ. ಇಲ್ಲಿ, ಬಣ್ಣದ ಗುಳ್ಳೆಗಳು ಆ ರೀತಿ ಬಲದಿಂದ ಎಡ ಭಾಗಕ್ಕೆ ಮೇಲೆ ಮೇಲೆ ಋಜುರೇಖಾ ಗತಿಯಲ್ಲಿ (ಡಯಾಗೊನಾಲ್) ಏರುತ್ತಾ  ಸಾಗುವುದರಿಂದ, ನೋಡುಗರ ಕಣ್ಣು ಮತ್ತು ಮನಸ್ಸಿಗೆ  ಹೆಚ್ಚಿನ ಮುದ ನೀಡಬಲ್ಲದಾಗಿದೆ.

l ಈ ಚಿತ್ರವನ್ನು ಸೆರೆ ಹಿಡಿದ ಸಮಯ ಹಿತಮಿತವಾದ ವಾದ ಬೆಳಕಿನ ಸಂದರ್ಭವಾಗಿದ್ದರಿಂದ, ಹುಡುಗಿಯರಿಬ್ಬರು, ಸೋಪಿನ ಗುಳ್ಳೆಗಳು ಮತ್ತು ಹಿನ್ನೆಲೆಯ ಲಾಲ್‌ಬಾಗ್‌ನ ದೃಶ್ಯಗಳು ಎಲ್ಲವೂ ಸಾಕಷ್ಟು ಫೋಕಸ್ ಆಗಿರುವುದು ಮತ್ತು ಉತ್ತಮವಾದ  ವರ್ಣಸಾಮರಸ್ಯವನ್ನೂ (ಟೋನಲ್ ಹಾರ್ಮೊನಿ) ಹೊಂದಿರುವುದು ಒಂದು ಪ್ರಶಂಸನಾರ್ಹ ಪ್ರಯತ್ನ. ಹಾಗಾಗಿ, ಇದೊಂದು ಕೇವಲ ಕ್ಯಾಂಡಿಡ್ ಫೋಟೊವಷ್ಟೇ ಆಗದೇ, ಕಲಾ ನೈಪುಣ್ಯವನ್ನೂ ಸೂಸುವ ಸುಂದರ ಚಿತ್ರಣದ ಅನುಭವ ನೀಡಬಲ್ಲದಾಗಿದೆ.

ಕೆ.ಎಸ್.ರಾಜಾರಾಮ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry