ಮಳೆ ಕಟ್ಟಿಕೊಟ್ಟ ಪ್ರಕೃತಿ ರಮಣೀಯ ಚಿತ್ರಗಳು

ಬುಧವಾರ, ಮೇ 22, 2019
34 °C

ಮಳೆ ಕಟ್ಟಿಕೊಟ್ಟ ಪ್ರಕೃತಿ ರಮಣೀಯ ಚಿತ್ರಗಳು

Published:
Updated:
ಮಳೆ ಕಟ್ಟಿಕೊಟ್ಟ ಪ್ರಕೃತಿ ರಮಣೀಯ ಚಿತ್ರಗಳು

ಕೊಪ್ಪಳ: ನಾಲ್ಕು ದಿನ ಸುರಿದ ಮಳೆಗೆ ನಗರದಲ್ಲಿ ಪ್ರಕೃತಿ ಹೊಸ ಚಿತ್ರ ಕಟ್ಟಿಕೊಟ್ಟಿದೆ. ಕೆಲವು ದಿನಗಳ ಕಾಲ ನಗರದಲ್ಲಿ ಮಲೆನಾಡಿನ ಮಾದರಿಯಲ್ಲಿ ಮೋಡ ಮುಸುಕಿದ ವಾತಾವರಣ ಕಂಡುಬಂದಿದೆ. ಇನ್ನೂ ವಾತಾವರಣ ತಿಳಿಯಾಗಿಲ್ಲ.

ಮಳೆ ಸುರಿದ ಸಮಯದಲ್ಲಿ ನಗರದಲ್ಲೇ ಇರುವ ತಾಣಗಳು ಹಸಿರು ಸಿರಿಯಿಂದ ಕಂಗೊಳಿಸಿವೆ. ಕೊಳಕು ತುಂಬಿದ್ದ ರಸ್ತೆಗಳು ತಕ್ಕಮಟ್ಟಿಗೆ ಸ್ವಚ್ಛಗೊಂಡಿವೆ. ಹಸಿರು ಪಾಚಿಯಷ್ಟೇ ಕಾಣುತ್ತಿದ್ದ ಹುಲಿಕೆರೆ, ಮರ್ದಾನ್‌ ಅಲಿ ದರ್ಗಾ ಸಮೀಪದ ಕೊಳದಲ್ಲಿ ಶುದ್ಧ ತಿಳಿನೀರು ತುಂಬಿದೆ. ಬೆಳ್ಳಕ್ಕಿ, ಮಿಂಚುಳ್ಳಿ ಸೇರಿದಂತೆ ಅಪರೂಪದ ಹಕ್ಕಿಗಳು ಈ ಕೆರೆಗಳ ನಡುಗಡ್ಡೆಗಳಲ್ಲಿ ಕುಳಿತು ಮೀನು ಬೇಟೆಯಾಡುತ್ತಿರುವ ದೃಶ್ಯ ಕಣ್ಣಿಗೆ ಮುದ ನೀಡುತ್ತದೆ.

ಕೋಟೆಯ ಮೇಲೇರಿ ನೋಡಿದರೆ ಹುಲಿಕೆರೆ ಈಗ ದಕ್ಷಿಣ ಭಾರತದ ನಕಾಶೆಯಂತೆ ಕಾಣುತ್ತದೆ. ಇದೇ ಹುಲಿಕೆರೆಗೆ ನೀರು ಪೂರೈಸುವ ಗುಡ್ಡದ ಸಮೀಪದ ಕೋತಿಗುಂಡು ಝರಿ ಈಗ ಪುಟ್ಟ ಜಲಪಾತ ಸೃಷ್ಟಿಸಿದೆ. ಕೊಪ್ಪಳ ಕೋಟೆಯ ಮೇಲ್ಭಾಗದ ಬಾವಿಗಳು ತುಂಬಿವೆ. ಅಲ್ಪ ಪ್ರಮಾಣದಲ್ಲಿ ಇಲ್ಲಿನ ನೀರನ್ನು ಬಳಸಲಾಗುತ್ತಿದೆ.

ಮಳೆ ಮಲ್ಲೇಶ್ವರ ದೇವಸ್ಥಾನದ ಹಿಂಭಾಗದ ಬೆಟ್ಟಗಳ ನಡುವಿನ ಜಾಗ ಅಕ್ಷರಶಃ ಜಲಪಾತ್ರೆಯಂತಾಗಿತ್ತು. ಇದರಿಂದ ಬೆಟ್ಟಗಳಲ್ಲಿ ಜಲಧಾರೆಯ ಸೌಂದರ್ಯ ಮನೋಹರವಾಗಿತ್ತು. ಇಂತಹ ದೃಶ್ಯ ಅಪರೂಪಕ್ಕೊಮ್ಮೆ ಮಾತ್ರ ಕಾಣಬಹುದು. ಇಲ್ಲಿ ತುಂಬಿ ಹರಿದ ನೀರು ದೇವಸ್ಥಾನದ ಸಮೀಪದ ಹೊಂಡ ತುಂಬಿ ಅಂತರ್ಜಲ ವೃದ್ಧಿಗೆ ಕಾರಣವಾಗಿದೆ. ಇಲ್ಲಿ ಹುಟ್ಟಿದ ಝರಿಯೂ ಈಗ ಭಕ್ತರಿಗೆ ಪವಿತ್ರ ಸ್ನಾನದ ತಾಣ. ಇದೇ ಬೆಟ್ಟದ ಸಾಲಿನ ಕೊನೆಯಲ್ಲಿ ನಗರ ಮತ್ತು ಮಂಗಳಾಪುರ ಗ್ರಾಮದ ಗಡಿ ಪ್ರದೇಶ. ಇಲ್ಲಿ ಅಕ್ರಮವಾಗಿ ನಡೆಸಲಾದ ಕಲ್ಲು ಗಣಿಯ ಕ್ವಾರಿಗಳಲ್ಲಿ ಸಮೃದ್ಧ ನೀರು ತುಂಬಿದೆ. ಬಹಳ ವರ್ಷಗಳ ನಂತರ ತುಂಬಿ ಹರಿಯುತ್ತಿರುವ ಹಿರೇಹಳ್ಳದ ಪ್ರವಾಹ ನೋಡಲು ನಗರದ ಹೊರವಲಯದಲ್ಲಿರುವ ಸೇತುವೆಯ ಮೇಲೆ ಜನರು ನಿಂತು ಜಲರಾಶಿಯ ಮೇಲೆ ಕಣ್ಣು ಹಾಯಿಸಿ ಹೋಗುವುದು ಸಾಮಾನ್ಯದ ನೋಟ.

‘ನಾಲ್ಕು ದಿನಗಳಿಂದ ಸುರಿದ ಮಳೆ ನಗರದಲ್ಲಿ ಮಲೆನಾಡ ಚಿತ್ರವನ್ನು ತಂದಿದ್ದು, ಎಲ್ಲೆಲ್ಲೂ ಜಲಧಾರೆ ಪ್ರಕೃತಿ ಪ್ರೇಮಿಗಳಲ್ಲಿ ಸಂತಸ ಉಂಟುಮಾಡಿತ್ತು. ನಗರದ ಸುತ್ತಮುತ್ತಲಿನ ಜಲಪಾತಗಳು ತುಂಬಿ ಹರಿದವು’ ಎಂದು ಸ್ಥಳೀಯರು ಹೇಳಿದರು.

‘ನಗರದ ಸುತ್ತಮುತ್ತಲಿನ ಸುಂದರ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ’ ಎನ್ನುತ್ತಾರೆ ಭಾಗ್ಯನಗರ ನಿವಾಸಿ ಅಮರದೀಪ್ ಪಿ.ಎಸ್. ಗವಿಮಠದ ಕೆರೆಯೂ ತುಂಬಿದೆ. ಜುಳುಜುಳು ನೀರ ಕಲರವದ ನಡುವೆ ಕೆರೆಯಲ್ಲಿ ಬಾತುಕೋಳಿಗಳ ಈಜಾಟ ಖುಷಿಕೊಡುತ್ತದೆ. ಮಳೆಗಾಲದ ಸೌಂದರ್ಯ ಮಲೆನಾಡಿನಲ್ಲೇ ಇಲ್ಲ. ಕೊಪ್ಪಳದಲ್ಲೂ ಇದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry