ಮಂಗಳವಾರ, ಸೆಪ್ಟೆಂಬರ್ 17, 2019
24 °C

ಪೊಲೀಸರನ್ನು ನೋಡಿ ನಗು ಬೀರುವ ಮಗುವಿನ ಫೋಟೊ ವೈರಲ್

Published:
Updated:
ಪೊಲೀಸರನ್ನು ನೋಡಿ ನಗು ಬೀರುವ ಮಗುವಿನ ಫೋಟೊ ವೈರಲ್

ಹೈದರಾಬಾದ್: ನಾಲ್ಕು ತಿಂಗಳ ಮಗುವೊಂದು ಪೊಲೀಸರನ್ನು ನೋಡಿ ನಗುತ್ತಿರುವ ಫೋಟೊವೊಂದು ಸಾಮಾಜಿಕ ತಾಣದಲ್ಲಿ  ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ಸ್ವಾತಿ ಲಾಕ್ರಾ ಈ ಫೋಟೊವನ್ನು ಟ್ವೀಟ್ ಮಾಡಿದ್ದು ಇದು 5214 ಬಾರಿ ರೀಟ್ವೀಟ್ ಆಗಿದೆ.

ಹೈದರಾಬಾದ್‍ನ ನಾಂಪಲ್ಲಿ ಎಂಬಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಹಮೀರಾ ಬೇಗಂ ಅವರ 4 ತಿಂಗಳ ಮಗು ಫೈಜಾನ್ ಖಾನ್‍ನ್ನು ಎರಡು ದಿನಗಳ ಹಿಂದೆ ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಮಗು ಅಪಹರಣವಾಗಿರುವ ವಿಷಯ ತಿಳಿದ ಪೊಲೀಸ್ ತಕ್ಷಣವೇ ಕಾರ್ಯ ಪ್ರವೃತ್ತರಾಗಿದ್ದು, 15 ಗಂಟೆಯೊಳಗೆ ಮಗುವನ್ನು ರಕ್ಷಿಸಿದ್ದರು.

ಮಗುವನ್ನು  ಅಪಹರಣ ಮಾಡಿ ಮಾರಲು ಯತ್ನಿಸಿದ ಪ್ರಕರಣದಲ್ಲಿ ಮೊಹಮ್ಮದ್ ಮುಷ್ತಾಕ್  (42) ಮತ್ತು ಮೊಹಮ್ಮದ್ ಯೂಸಫ್ (25) ಎಂಬವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಮಗುವನ್ನು ರಕ್ಷಿಸಿದ ನಂತರ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಮಗುವನ್ನು ಕೈಗೆತ್ತಿಕೊಂಡಾಗ ಆ ಮಗು ಪೊಲೀಸರನ್ನು ನೋಡಿ ನಗುತ್ತಿರುವ ಫೋಟೊ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಪಹರಣಕ್ಕೊಳಗಾದ ಮಗುವನ್ನು ರಕ್ಷಿಸಲಾಗಿದೆ. ಈ ಚಿತ್ರವೇ ಎಲ್ಲವನ್ನೂ ಹೇಳುತ್ತದೆ ಎಂದು ಲಾಕ್ರಾ ಅವರು ಫೋಟೊವನ್ನು ಟ್ವೀಟ್ ಮಾಡಿದ್ದರು.

ಹಮೀರಾ ಬೇಗಂ ಅವರು ಬೆಳಗ್ಗೆ 4 ಗಂಟೆಗೆ ಎದ್ದು ನೋಡಿದಾಗ ಪಕ್ಕ ಮಲಗಿಸಿದ್ದ ಮಗು ನಾಪತ್ತೆಯಾಗಿತ್ತು. ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ನಾಂಪಲ್ಲಿಯ ಪೊಲೀಸ್ ಅಧಿಕಾರಿ ಆರ್. ಸಂಜಯ್ ಕುಮಾರ್ ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಾಳಿಯನ್ನು ಆಧರಿಸಿ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದರು. ಮಗುವನ್ನು ಅಪಹರಿಸಿದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ ರಹಮತ್ ನಗರದಲ್ಲಿರುವ ಮೊಹಮ್ಮದ್ ಗೌಸ್ ಎಂಬವರಿಗೆ ಮಗುವನ್ನು ಮಾರಲು ತಾವು ಸಂಚು ಹೂಡಿದ್ದೆವು ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Post Comments (+)