ಸೋಮವಾರ, ಸೆಪ್ಟೆಂಬರ್ 16, 2019
21 °C

ಧೈರ್ಯ ಹೇಳಲಿದ್ದಾರೆ ಸುದೀಪ್!

Published:
Updated:
ಧೈರ್ಯ ಹೇಳಲಿದ್ದಾರೆ ಸುದೀಪ್!

‘ರಾಜು ಕನ್ನಡ ಮೀಡಿಯಂ’ ಸಿನಿಮಾದಲ್ಲಿ ನಟ ಸುದೀಪ್‌ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿದೆ. ಸುದೀಪ್‌ ಅವರ ಚಿತ್ರ ಈ ಸಿನಿಮಾದ ‍ಪೋಸ್ಟರ್‌ಗಳಲ್ಲಿ ಕಾಣಿಸಿಕೊಳ್ಳಲು ಆರಂಭವಾದ ನಂತರ, ಹಲವರ ಚಿತ್ತ ‘ಕನ್ನಡ ಮೀಡಿಯಂ’ ಹುಡುಗ ರಾಜುವಿನತ್ತ ಹೊರಳಿದೆ.

ಅಂದಹಾಗೆ, ಈ ಚಿತ್ರದಲ್ಲಿ ಸುದೀಪ್‌ ಅವರ ಪಾತ್ರ ಏನು? ಒಂದೆರಡು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರಾ ‘ಕಿಚ್ಚ’? ಎಂಬ ಪ್ರಶ್ನೆಗೆ, ಇಲ್ಲ, ಹಾಗೇನೂ ಇಲ್ಲ. ಸಿನಿಮಾದ ಬಹುಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ ಎಂದು ಹೇಳಿದೆ ಚಿತ್ರತಂಡ. ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗನೊಬ್ಬ ನಗರ ಜೀವನದಲ್ಲಿ ಅನುಭವಿಸುವ ಕೀಳರಿಮೆಗಳ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಅದರಲ್ಲಿ ಸುದೀಪ್‌ ಅವರು ರಾಜುಗೆ ಧೈರ್ಯ ತುಂಬುವ ಪಾತ್ರವೊಂದನ್ನು ನಿಭಾಯಿಸಿದ್ದಾರಂತೆ. ಈ ಎಲ್ಲ ವಿವರಗಳನ್ನು ಕೊಟ್ಟವರು ಸಿನಿಮಾ ನಿರ್ದೇಶಕ ನರೇಶ್ ಕುಮಾರ್.

‘ಸುದೀಪ್‌ ಅವರ ಪಾತ್ರ ಈ ಸಿನಿಮಾದಲ್ಲಿ ಬಹುಮುಖ್ಯವಾದದ್ದು. ಉತ್ತಮ ಸಂದೇಶವೊಂದನ್ನು ನೀಡುವ ಪಾತ್ರ ಇದಾಗಿರುವ ಕಾರಣ, ತೂಕದ ವ್ಯಕ್ತಿತ್ವ ಇರುವವರೇ ಇದಕ್ಕೆ ಬೇಕಿತ್ತು. ಹಾಗಾಗಿ, ಸುದೀಪ್‌ ಅವರನ್ನು ಆಯ್ಕೆ ಮಾಡಿಕೊಂಡೆವು’ ಎಂದರು ನರೇಶ್. ಸಿನಿಮಾ ಬಗ್ಗೆ ಮಾಹಿತಿ ನೀಡಲು ಅವರು ತಮ್ಮ ತಂಡದ ಜೊತೆ ಪತ್ರಿಕಾಗೋಷ್ಠಿ ಕರೆದಿದ್ದರು.

‘ಕಥೆ ಇಷ್ಟವಾದರೆ ಮಾತ್ರ ಅಭಿನಯಿಸುವುದಾಗಿ ಸುದೀಪ್‌ ಹೇಳಿದ್ದರು. ನಾವು ಸಿನಿಮಾ ಕಥೆಯನ್ನು ಅವರಿಗೆ ವಿವರಿಸಿದ ನಂತರ, ಅವರು ಒಪ್ಪಿಕೊಂಡರು. ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿದ ನಂತರ ನಮ್ಮ ಸಿನಿಮಾದ ತೂಕ ಇನ್ನಷ್ಟು ಹೆಚ್ಚಿತು’ ಎಂದು ಖುಷಿಯಿಂದ ಹೇಳಿದರು ನರೇಶ್.

ದೊಡ್ಡ ಬಜೆಟ್‌ನ ಈ ಸಿನಿಮಾ ಅಕ್ಟೋಬರ್ 27ಕ್ಕೆ ತೆರೆಗೆ ಬರಲಿದೆಯಂತೆ. 

Post Comments (+)