ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ವಿವಾದ...

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಟ ಪ್ರಕಾಶ್ ರೈ ಅವರಿಗೆ ಈ ಬಾರಿಯ ಶಿವರಾಮ ಕಾರಂತ ಪ್ರಶಸ್ತಿ ಲಭಿಸಿದೆ. ಪತ್ರಕರ್ತೆ ಗೌರಿ ಲಂಕೇಶ‌ರ ಹತ್ಯೆಯ ಬಗ್ಗೆ ದೇಶದ ಪ್ರಧಾನಿಯವರು ಖಂಡನೆಯ ಮಾತನ್ನಾಡದೆ ದಿವ್ಯ ಮೌನ ವಹಿಸಿದ್ದಾರೆ ಎಂದು ಟೀಕಿಸುತ್ತ ಪ್ರಕಾಶ್ ರೈ ಅವರು, ‘ನರೇಂದ್ರ ಮೋದಿಯವರು ನನಗಿಂತಲೂ ಉತ್ತಮ ನಟರು’ ಎಂಬ ಹೇಳಿಕೆ ನೀಡಿದ್ದರು. ದೇಶದ ಪ್ರಧಾನಿಯನ್ನು ನಟನೆಂದು ಕರೆದಿದ್ದಕ್ಕೆ ಸಿಟ್ಟಾದ ಕೆಲವು ಹಿಂದೂಗಳು, ಪ್ರಕಾಶ್ ರೈ ಅವರನ್ನು ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಲಿಕ್ಕೆ ಬಿಡುವುದಿಲ್ಲ ಎಂಬ ಬೆದರಿಕೆ ಹಾಕಿದ್ದಾರೆ. ಪ್ರಕಾಶ್‌ ರೈ ಅವರಿಗೆ ಪ್ರಧಾನಿಯವರನ್ನು ಟೀಕಿಸಲಿಕ್ಕಿರುವಷ್ಟೇ ಹಕ್ಕು ಹಿಂದುತ್ವವಾದಿಗಳಿಗೆ ಪ್ರಕಾಶ್ ರೈ ಅವರನ್ನು ಟೀಕಿಸಲಿಕ್ಕಿದೆ. ಆದರೆ ಪ್ರಶಸ್ತಿ ಸ್ವೀಕರಿಸಲಿಕ್ಕೆ ಬಿಡುವುದಿಲ್ಲ ಎಂಬ ಹಟವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತಹದ್ದಲ್ಲ ಎನ್ನದೆ ಬೇರೆ ದಾರಿಯಿಲ್ಲವಾ ಗಿದೆ. ಒಬ್ಬ ರಂಗಕರ್ಮಿಯಾದ ನನಗೆ ನಿಮ್ಮ ಮಾತುಗಳಿಂದ ನೋವಾಗಿದೆ.

ನಟನಾಗುವುದು ಕೀಳೇ? ಪ್ರಧಾನಿಯಾಗುವುದು ಮೇಲೇ? ನನಗಿನ್ನೂ ನೆನಪಿದೆ. ನಾವು ರಂಗಕರ್ಮಿಗಳು ಹಾಗೂ ನಟರು, ಇಂದಿರಾ ಗಾಂಧಿಯವರನ್ನು ‘ತುರ್ತು ಪರಿಸ್ಥಿತಿಯ ಕರಾಳ ರಾಣಿ’ ಎಂದು ಕರೆದು ಟೀಕಿಸಿದ್ದೆವು. ಆಗ ಹಿಂದುತ್ವವಾದಿಗಳೂ ಸಹಿತ ನಮ್ಮೊಟ್ಟಿಗೆ ಸೇರಿ ನಾಟಕವಾಡಿದ್ದಿರಿ. ಆಗ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವಾಗಲೀ ಅಥವಾ ಇಂದಿರಾ ಗಾಂಧಿಯವರ ಹಿಂಬಾಲ
ಕರಾಗಲೀ ನಮ್ಮನ್ನು ನಟರೆಂದು ಜರಿದಿರಲಿಲ್ಲ ಅಥವಾ ನಮ್ಮ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ.

ನೀವು ಹಿಂದುತ್ವವಾದಿಗಳು ಇಂದು ದೇಶವನ್ನು ಆಳುತ್ತಿದ್ದೀರಿ, ಆನೆಬಲದಿಂದ ಆಳುತ್ತಿದ್ದೀರಿ. ನೀವು, ಇಷ್ಟೊಂದು ಅಸಹಿಷ್ಣುಗಳಾದರೆ ಹೇಗೆ? ನಟರು ರಾಜಕೀಯ ಮಾತನಾಡಲೇಬಾರದು ಎಂಬ ಹಟ ಹಿಡಿದರೆ ಹೇಗೆ? ತುರ್ತು ಪರಿಸ್ಥಿತಿಯನ್ನು ಮರೆತುಬಿಟ್ಟಿರೇ, ಹೇಗೆ?

ಹೋಗಲಿ ಬಿಡಿ, ನಿಮ್ಮ ನಡೆ ಶಿವರಾಮ ಕಾರಂತರಿಗೆ ಶೋಭೆ ತರುತ್ತದೆಯೇ? ಶಿವರಾಮ ಕಾರಂತರೂ ರಾಜಕೀಯ ಟೀಕೆಗಳನ್ನು ಮಾಡಿದ್ದರಲ್ಲವೇ? ಒಂದೊಮ್ಮೆ ಅವರು ಬದುಕಿದ್ದಿದ್ದರೆ, ಇಂದಿನ ಪ್ರಧಾನಿಯವರ ಯಾವುದೇ ಒಂದು ನಡೆಯನ್ನು ಟೀಕಿಸಿದ್ದಿದ್ದರೆ, ಕಡಲ ತೀರದ ಭಾರ್ಗವನ ಮೇಲೆ ಹೀಗೆಯೇ ಹರಿಹಾಯುತ್ತಿದ್ದಿರೇನು? ಅಸಹಿಷ್ಣು ಜಗಳಗಳು ನನಗೂ ಶೋಭೆ ತರುವುದಿಲ್ಲ ನಿಮಗೂ ತರುವುದಿಲ್ಲ. ತಾಳ್ಮೆ ವಹಿಸಿರಿ ಎಂದು ಎಲ್ಲ ಕನ್ನಡಿಗರ ಪರವಾಗಿ ಕಳಕಳಿಯಿಂದ ಮನವಿ ಮಾಡುತ್ತೇನೆ.

–ಪ್ರಸನ್ನ, ರಂಗಕರ್ಮಿ, ಹೆಗ್ಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT