7

ಒಳ ವರ್ಗೀಕರಣ : ವೈಜ್ಞಾನಿಕವಾಗಿ ನಡೆಯಲಿ

Published:
Updated:
ಒಳ ವರ್ಗೀಕರಣ : ವೈಜ್ಞಾನಿಕವಾಗಿ ನಡೆಯಲಿ

‘ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿ’ಯ ಒಳ ವರ್ಗೀಕರಣಕ್ಕೆ (OBC Sub- Categorization) ಕೇಂದ್ರ ಸಚಿವ ಸಂಪುಟ ಕಳೆದ ಆಗಸ್ಟ್ 23ರಂದು ಒಪ್ಪಿಗೆ ನೀಡಿದೆ. ಅದಕ್ಕಾಗಿಯೇ ಸಂವಿಧಾನದ ವಿಧಿ 340ರ ಪ್ರಕಾರ ಒಂದು ಆಯೋಗ ರಚಿಸಲೂ ಸರ್ಕಾರ ಒಪ್ಪಿದೆ. ಈ ಆಯೋಗ ರಚನೆಯಾದ ದಿನದಿಂದ 12 ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂಬ ಗಡುವನ್ನೂ ಅದು ನಿಗದಿಪಡಿಸಿದೆ. ಮೀಸಲಾತಿ ಅನುಷ್ಠಾನಗೊಳಿಸುವಾಗ ಎದುರಾಗುವ ತಾರತಮ್ಯ ನಿವಾರಣೆ ಮತ್ತು ಹಿಂದುಳಿದ ವರ್ಗಗಳ ಒಳ ವರ್ಗೀಕರಣಕ್ಕೆ ಅನುಸರಿಸಬೇಕಾದ ವಿಧಾನ ಕುರಿತು ಈ ಆಯೋಗ ವರದಿ ನೀಡಬೇಕು. ಜತೆಗೆ, ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯನ್ನು ಅತೀ ಹೆಚ್ಚು ಹಿಂದುಳಿದ, ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ ಇತ್ಯಾದಿ ವರ್ಗಗಳಾಗಿ ವಿಂಗಡಿಸಬೇಕು. ಆ ಪ್ರಕಾರ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ಒದಗಿಸಬೇಕು ಎಂಬುದು ಕೇಂದ್ರ ಸರ್ಕಾರದ ನಿರ್ಧಾರ. ಈ ಕುರಿತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ (ಎನ್‌ಸಿಬಿಸಿ),  2015ರ ಮಾರ್ಚ್‌ 2ರಂದು ಕೇಂದ್ರಕ್ಕೆ ವರದಿ ಸಲ್ಲಿಸಿತ್ತು ಎಂಬುದು ಉಲ್ಲೇಖನೀಯ. ಹಿಂದುಳಿದ ವರ್ಗಗಳ ಒಳ ವರ್ಗೀಕರಣಕ್ಕೆ ಕೇಂದ್ರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಇದು ವೈಜ್ಞಾನಿಕವಾಗಿ ನಡೆಯಬೇಕು.

ಜಾತ್ಯತೀತ ಸಮಾಜವನ್ನು ಭಾರತ ಸಂವಿಧಾನ ಅಪೇಕ್ಷಿಸುತ್ತದೆ. ಜಾತ್ಯತೀತ ಸಿದ್ಧಾಂತವನ್ನು ಆಧರಿಸಿಯೇ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ತತ್ವಗಳನ್ನು ಅಳವಡಿಸಲಾಗಿದೆ. ಯಾವ ಅಪರಾಧವನ್ನೂ ಮಾಡದೆ, ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾದ ಜಾತಿಗಳಿಗೆ ವಿಶೇಷ ಸವಲತ್ತು, ವಿನಾಯಿತಿಗಳನ್ನು ನೀಡಬೇಕಾದುದು ಅನಿವಾರ್ಯ. ಸಂವಿಧಾನವು ‘ಹಿಂದುಳಿದ ವರ್ಗಗಳು’ ಎಂಬ ಪದ ಸಮುಚ್ಚಯವನ್ನು ಸ್ಪಷ್ಟೀಕರಿಸಿರುವುದಿಲ್ಲ, ನಿಜ. ಆದರೆ, ಅವುಗಳ ಗುಣ ಲಕ್ಷಣಗಳನ್ನು ಸಂವಿಧಾನದ ಹಲವಾರು ವಿಧಿಗಳಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.

ಅವುಗಳಲ್ಲಿ ಪ್ರಮುಖವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಬಗ್ಗೆ ಪ್ರತಿಪಾದಿಸುವ ವಿಧಿ 15(4), ಸರ್ಕಾರಿ ನೌಕರಿಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಇಲ್ಲದವರಿಗೆ ಪ್ರಾತಿನಿಧ್ಯ ಬೇಕು ಎಂದು ಹೇಳುವ ವಿಧಿ 16(4), ಅಸ್ಪೃಶ್ಯತಾ ನಿರ್ಮೂಲನೆಯನ್ನು ನಿರ್ದೇಶಿಸುವ ವಿಧಿ 17, ಶೋಷಣೆ ವಿರುದ್ಧ ಪ್ರತಿಪಾದಿಸುವ ವಿಧಿ 23, ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಅವಕಾಶ ಕಲ್ಪಿಸುವ ವಿಧಿ 45, ಪರಿಶಿಷ್ಟರನ್ನು ಒಳಗೊಂಡಂತೆ ಅಸಹಾಯಕ ವರ್ಗಗಳನ್ನು ಶೋಷಣೆಯಿಂದ ಸಂರಕ್ಷಿಸುವ ವಿಧಿ 46, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿಗ

ಳನ್ನು ಮತ್ತು ಅವರು ಅನುಭವಿಸುತ್ತಿರುವ ತೊಂದರೆಗಳನ್ನು ಪರಿಶೀಲಿಸಿ, ಅಂತಹ ತೊಂದರೆಗಳ ನಿವಾರಣೆಗೆ ಸೂಚಿಸುವ ವಿಧಿ 340 ಮುಖ್ಯವಾದವು.

ಜಾತಿ, ಅಸ್ಪೃಶ್ಯತೆ, ಅನಕ್ಷರತೆ ಮತ್ತು ಶಿಕ್ಷಣದ ಕೊರತೆ, ಬಡತನ, ನಿರುದ್ಯೋಗ, ಶೋಷಣೆ, ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶ ವಂಚಿತರಾಗಿರುವುದು ಹಿಂದುಳಿದಿರುವಿಕೆಯ ಪ್ರಾಥಮಿಕ ಗುಣ ಲಕ್ಷಣಗಳು. ಇವುಗಳ ನಿವಾರಣೆ ಮತ್ತು ಸಮಾನತೆಯ ಸಾಕಾರ ಭಾರತ ಸಂವಿಧಾನದ ಪ್ರಮುಖ ಉದ್ದೇಶಗಳಲ್ಲೊಂದು. ಈ ಸಾಧನೆಯ ದಿಕ್ಕಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಅಷ್ಟೇ ಸಂಪೂರ್ಣ ಪರಿಹಾರವಲ್ಲ. ಭೂಮಿ ಹಂಚಿಕೆ, ವಸತಿ, ಆರೋಗ್ಯ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಜಾರಿ ಆಗಬೇಕಿದೆ. ಈ ದಿಕ್ಕಿನಲ್ಲಿ ಶಿಕ್ಷಣ, ಉದ್ಯೋಗ ಮೀಸಲಾತಿ ಹಾಗೂ ಹಿಂದುಳಿದ ವರ್ಗಗಳ ಒಳ ವರ್ಗೀಕರಣವು ಸಾಮಾಜಿಕ ನ್ಯಾಯ ಜಾರಿಗೊಳಿಸುವ ಕಾರ್ಯವ್ಯಾಪ್ತಿಯಲ್ಲಿ ಮುಖ್ಯ ಭಾಗಗಳಾಗಿರುತ್ತವೆ.

ಹಿಂದುಳಿದ ವರ್ಗಗಳ ಒಳ ವರ್ಗೀಕರಣಕ್ಕೆ ಕಾನೂನು ಸಮ್ಮತಿಯೂ ಇದೆ. ಇಂದಿರಾ ಸಾಹ್ನಿ ಮೊಕದ್ದಮೆಯಲ್ಲಿ ಹಿಂದುಳಿದ ವರ್ಗಗಳ ಒಳ ವರ್ಗೀಕರಣ ಕಾನೂನು ಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ 1992ರ ನವೆಂಬರ್‌ 16ರಂದು ನೀಡಿದ ತೀರ್ಪಿನ ಪ್ಯಾರ 802ರಲ್ಲಿ ಸ್ಪಷ್ಟಪಡಿಸಿದೆ. ಆದರೆ ಅದನ್ನು ಯಾವ ಕ್ರಮದಲ್ಲಿ ಮಾಡಬೇಕು ಮತ್ತು ಯಾವ ರೀತಿ ಜಾರಿಗೆ ತರಬೇಕೆಂಬುದು ಆಯಾ ರಾಜ್ಯಕ್ಕೆ ಮತ್ತು ಸಂಬಂಧಪಟ್ಟ ಆಯೋಗಕ್ಕೆ ಬಿಟ್ಟ ವಿಷಯವೆಂತಲೂ ನ್ಯಾಯಾಲಯ ಉಚ್ಚರಿಸಿದೆ.

ಇದೇ ನೀತಿಯನ್ನು  ಬಲರಾಮ್ (1972) ಮೊಕದ್ದಮೆಯಲ್ಲೂ ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. 1980ರಲ್ಲಿ ಮಂಡಲ್ ಆಯೋಗದ ಸದಸ್ಯರಲ್ಲೊಬ್ಬರಾದ ಎಲ್.ಆರ್. ನಾಯ್ಕ ಕೂಡ ತಮ್ಮ ಟಿಪ್ಪಣಿಯಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಮೀಸಲಾತಿ ಪಟ್ಟಿಯ ಒಳ ವರ್ಗೀಕರಣ ಭಾಗ-1 ಮತ್ತು 2 ಎಂಬ ಎರಡು ಭಾಗಗಳಾಗಬೇಕು. ಅದರಲ್ಲಿ ಭಾಗ-1 ‘ಡಿಪ್ರೆಸ್ಡ್ ಬ್ಯಾಕ್‌ವರ್ಡ್‌ ಕ್ಲಾಸಸ್’ ಮತ್ತು ಭಾಗ-2 ‘ಇಂಟರ್ ಮೀಡಿಯೇಟ್ ಬ್ಯಾಕ್‌ವರ್ಡ್ ಕ್ಲಾಸಸ್’ ಎಂದು ಆಗಬೇಕು ಎಂಬ ಅಭಿಪ್ರಾಯ ನೀಡಿದ್ದಾರೆ.

ಹಾಗಾಗಿ, ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಒಳ ವರ್ಗೀಕರಣ ಮಾಡುವುದು ಅವಶ್ಯವೇ ಸರಿ. ಆದರೆ, ಹೇಗೆ ಮಾಡಬೇಕು, ಯಾವ ಆಧಾರದ ಮೇಲೆ ಮಾಡಿದರೆ ಸೂಕ್ತ ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಒಳವರ್ಗೀಕರಣ ವೈಜ್ಞಾನಿಕವಾಗಿಯೇ ಆಗಬೇಕು. ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಕೇಂದ್ರ ಸರ್ಕಾರ 1931ರ ಜನಗಣತಿಯ ನಂತರ ಪಡೆದಿಲ್ಲ. 2011ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ನಡೆಸಿರುವ ಸಾಮಾಜಿಕ ಹಾಗೂ ಆರ್ಥಿಕ ಜಾತಿಗಣತಿ ಅಂಕಿ ಅಂಶಗಳನ್ನು ಈವರೆಗೂ ಪ್ರಕಟಿಸದೇ ಇರುವುದರಿಂದ ಅದರ ಸಾಧಕ-ಬಾಧಕಗಳನ್ನೂ ತಿಳಿಯಲಾಗಿಲ್ಲ. ಅದನ್ನು ಬಿಡುಗಡೆ ಮಾಡದೆ, ಒಳವರ್ಗೀಕರಣದ ಬಗ್ಗೆ ಮಾತನಾಡುವುದು ‘ಗಾಡಿ ಮುಂದೆ, ಕುದುರೆ ಹಿಂದೆ’ ಎಂಬ ಗಾದೆ ಮಾತಿನಂತಾಗುತ್ತದೆ.

ಒಳವರ್ಗೀಕರಣದ ಮುಖ್ಯ ಉದ್ದೇಶ ಹಿಂದುಳಿದ ವರ್ಗಗಳಲ್ಲೇ ಸಬಲರನ್ನು, ದುರ್ಬಲರನ್ನು ಪ್ರತ್ಯೇಕಿಸುವುದು. ಇಲ್ಲವಾದಲ್ಲಿ ಸಾಮಾಜಿಕ ನ್ಯಾಯವನ್ನು ಪ್ರಾಮಾಣಿಕ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಿದಂತೆ ಆಗುವುದಿಲ್ಲ. ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ, ರಾಜಕೀಯ ಲಾಭಕ್ಕಾಗಿ ಕೃತಕವಾಗಿ ಮಾತನಾಡಿದಂತಾಗುತ್ತದೆ. ವೈಜ್ಞಾನಿಕ ಅಂಕಿ-ಅಂಶಗಳು ಇಲ್ಲದೆ, ಒಳವರ್ಗೀಕರಣದ ಉದ್ದೇಶ ಸಫಲವಾಗುವುದಿಲ್ಲ. ವೈಜ್ಞಾನಿಕ ವಿಧಾನ, ರಾಷ್ಟ್ರದ ಸರ್ವ ಜಾತಿ, ಜನಾಂಗಗಳ ಜನಗಣತಿ ಅಥವಾ ಸಮೀಕ್ಷೆಯ ಮೂಲಕವೇ ಆಗಬೇಕಾಗು

ತ್ತದೆ. ಅನ್ಯಥಾ ಮಾರ್ಗವಿಲ್ಲ. ಅಂತಹ ಅಂಕಿಅಂಶಗಳು ಸದ್ಯಕ್ಕೆ 2011ರಲ್ಲಿ ಮಾಡಿರುವ ಸಾಮಾಜಿಕ ಹಾಗೂ ಆರ್ಥಿಕ ಜಾತಿ ಜನಗಣತಿಯ ಹೊರತಾಗಿ ಬೇರೆಯ ಅಂಕಿ ಅಂಶಗಳು ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟಂತೆ ರಾಷ್ಟ್ರಮಟ್ಟದಲ್ಲಿಲ್ಲ.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹೀಗೆ ಹಲವು ರಾಜ್ಯಗಳು ಹಿಂದುಳಿದ ವರ್ಗಗಳ ಒಳವರ್ಗೀಕರಣವನ್ನು ಬಹಳ ವರ್ಷಗಳಿಂದ ಯಶಸ್ವಿಯಾಗಿ ಜಾರಿಗೊಳಿಸಿವೆ. ಕರ್ನಾಟಕವು ಸಂವಿಧಾನದ ವಿಧಿ 15(4) ಮತ್ತು 16(4)ರಡಿಯಲ್ಲಿ ಪ್ರದತ್ತವಾದ ವಿಶೇಷ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-1(ಶೇ 4) , ಪ್ರವರ್ಗ-2ಎ(ಶೇ 15), ಪ್ರವರ್ಗ-2ಬಿ(ಶೇ 4), ಪ್ರವರ್ಗ-3ಎ(ಶೇ 4) ಮತ್ತು ಪ್ರವರ್ಗ-3ಬಿ(ಶೇ 5) ಒಟ್ಟು ಶೇ 32 ಎಂದು ಒಳವರ್ಗೀಕರಣ ಮಾಡಿ ಜಾರಿಗೊಳಿಸಿದೆ. ಪರಿಶಿಷ್ಟ ಜಾತಿ(ಶೇ 15), ಪರಿಶಿಷ್ಟ ಪಂಗಡಗಳಿಗೆ (ಶೇ 3) ಪ್ರತ್ಯೇಕ ಮೀಸಲಾತಿ ನೀಡಲಾಗುತ್ತಿದೆ. ಇದರ ಉದ್ದೇಶ ಸಮಾನಾಂತರ ಜಾತಿ ಸಮುದಾಯಗಳ ಮಧ್ಯೆ ಅಷ್ಟೇ ಮೂಲಭೂತ ಸೌಲಭ್ಯಗಳಿಗಾಗಿ ಸ್ಪರ್ಧೆ ಇರಬೇಕೆಂಬುದು. ಹಿಂದುಳಿದ ವರ್ಗಗಳ ಒಳ ವರ್ಗೀಕರಣ ಕರ್ನಾಟಕ ರಾಜ್ಯದಲ್ಲಿ ಅನೇಕ ದಶಕಗಳಿಂದ ಜಾರಿಯಲ್ಲಿದೆ.

ಆದರೆ, ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟಂತೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ (ಶೇ 27) ಪ್ರಥಮವಾಗಿ ದೊರೆತಿದ್ದೇ 1990ರ ಆಗಸ್ಟ್‌ 13ರಂದು ವಿ.ಪಿ. ಸಿಂಗ್ ಸರ್ಕಾರದಲ್ಲಿ. ತದನಂತರ ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ವೈಜ್ಞಾನಿಕವಾದ ಒಳವರ್ಗೀಕರಣ ಅಳವಡಿಸಿಲ್ಲ. ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಎಲ್ಲ ಜಾತಿ ಸಮುದಾಯಗಳು, ಎಲ್ಲ ಜಾತಿ ಸಮುದಾಯಗಳ ಜೊತೆಗೆ ಸ್ಪರ್ಧಿಸುವಂತಾಗಿದೆ. ಇದರಿಂದಲೇ ಈವರೆವಿಗೆ ಹಿಂದುಳಿದ, ಅತೀ ಹಿಂದುಳಿದ ವರ್ಗಗಳಿಗೆ ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಅನ್ಯಾಯವನ್ನೂ ಊಹಿಸಬಹುದು. ಒಳ ವರ್ಗೀಕರಣ ಇಲ್ಲದೇ ಇದ್ದಲ್ಲಿ ಅಲೆಮಾರಿ, ಅರೆ ಅಲೆಮಾರಿ, ಹಿಂದುಳಿದ, ಅತೀ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟರೂ ಪ್ರಯೋಜನವಾಗುವುದಿಲ್ಲ. ಹಿಂದುಳಿದ ವರ್ಗಗಳ ಒಳವರ್ಗೀಕರಣ ಕ್ರಮಬದ್ಧವಾಗಿ ಆಗದಿದ್ದರೆ ಮೀಸಲಾತಿ ಪರಿಕಲ್ಪನೆಯೇ ಬುಡಮೇಲಾದಂತಾಗುತ್ತದೆ.

ಜೊತೆಗೆ ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೂ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೂ ಅನೇಕವ್ಯತಿರಿಕ್ತಗಳಿವೆ. ಉದಾಹರಣೆಗೆ, ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ರಾಜ್ಯದಲ್ಲಿ ಪ್ರಸ್ತುತ ಮೀಸಲಾತಿ ಪಡೆಯುತ್ತಿರುವ 137 ಜಾತಿ, ಉಪ ಜಾತಿಗಳು ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಲ್ಲ. ಪ್ರಾಂತೀಯ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ವ್ಯತ್ಯಾಸದ ಮೇಲೆ ರಾಜ್ಯ ಮೀಸಲಾತಿ ಪಟ್ಟಿಯಲ್ಲೇ, ಒಂದೇ ಜಾತಿ ವಿವಿಧ ಮೀಸಲಾತಿ ಲಾಭವನ್ನು ಪಡೆದ ಸಂದರ್ಭ

ಗಳು ರಾಜ್ಯ ಪಟ್ಟಿಯಲ್ಲಿ ಕಾಣಬಹುದು. ಇಂತಹ ವ್ಯವಸ್ಥೆಗೆ, ನಿಜವಾದ ಫಲಾನುಭವಿಗಳಿಗೆ ವಿಶೇಷ ಸೌಲಭ್ಯಗಳು ತಲುಪಬೇಕು ಎನ್ನುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ಬೈಯಾಲಾಲ್ ಮೊಕದ್ದಮೆಯಲ್ಲಿ (1965) ಸಮ್ಮತಿಸಿದೆ.

ಆದರೆ, ಅಂತಹ ವೈಜ್ಞಾನಿಕ ಅಂಕಿ -ಅಂಶಗಳನ್ನಾಧರಿಸಿದ ಕ್ರಮಬದ್ಧ ವ್ಯವಸ್ಥೆ ಕೇಂದ್ರ ಪಟ್ಟಿಯಲ್ಲಿ ಈವರೆವಿಗೂ ಕಾಣಲಾಗಿಲ್ಲ. ಅಷ್ಟೇ ಏಕೆ, ರಾಷ್ಟ್ರದಲ್ಲಿ ಒಟ್ಟು 801 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿದ್ದು, ಅವರ ಜನಸಂಖ್ಯೆ 13.5 ಕೋಟಿ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ 227 ಜಾತಿ, ಸಮುದಾಯದವರು ಪರಿಶಿಷ್ಟ ಜಾತಿ ಪಟ್ಟಿಯಲ್ಲಾಗಲೀ, ಪರಿಶಿಷ್ಟ ಪಂಗಡದ ಪಟ್ಟಿಯಲ್ಲಾಗಲೀ, ಕೊನೆ ಪಕ್ಷ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಾಗಲೀ ಈವರೆವಿಗೂ ಸೇರಿಲ್ಲ. ಈ ಎಲ್ಲ ಜಾತಿ, ಸಮುದಾಯಗಳಿಗೂ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯ ಒಳವರ್ಗೀಕರಣದಿಂದ ನ್ಯಾಯ ದೊರೆಯಬೇಕು. ಅದಕ್ಕಾಗಿ ಇದು ವೈಜ್ಞಾನಿಕವಾಗಿ ನಡೆಯಬೇಕು. ಆದರೆ 12 ವಾರಗಳಲ್ಲಿ ಈ ಕುರಿತು ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿರುವುದು ನೋಡಿದರೆ, ಅದು ಆತುರಾತುರದಲ್ಲಿ ಈ ಕಾರ್ಯ ಮಾಡಲು ಹೊರಟಂತಿದೆ. ಹೀಗಾದರೆ ಅದು ಎಷ್ಟರ ಮಟ್ಟಿಗೆ ಕ್ರಮಬದ್ಧ ಮತ್ತು ವೈಜ್ಞಾನಿಕವಾಗಿರುತ್ತದೆ? ಈ ಕೆಲಸ ಸ್ವಲ್ಪ ತಡವಾದರೂ ಕ್ರಮಬದ್ಧವಾಗಿರ

ಬೇಕು. ಶೋಷಣೆ, ಅನ್ಯಾಯಕ್ಕೆ ಒಳಗಾದ ಒಳ ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗುವಂತಾಗಬೇಕು.

ಕೊನೆಯದಾಗಿ, ಒಂದೆಡೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮತ್ತು ಅವುಗಳ ಒಳ ವರ್ಗೀಕರಣವಾದರೆ, ಮತ್ತೊಂದೆಡೆ ಉದ್ಯೋಗಾವಕಾಶವೂ ಮುಖ್ಯ ವಿಷಯ. ಉದ್ಯೋಗಾವಕಾಶಗಳಿಲ್ಲದೆ, ಮೀಸಲಾತಿ ಸೌಲಭ್ಯದಿಂದ ಹೆಚ್ಚು ಪರಿಣಾಮಕಾರಿಯಾದ ಪ್ರಯೋಜನ ಕಾಣುವುದಿಲ್ಲ. ಸರ್ಕಾರಿ ಸೇವೆಗಳಲ್ಲಿ ಉದ್ಯೋಗಾವಕಾಶಗಳು ಕ್ಷೀಣಿಸಲು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (ಎಲ್.ಪಿ.ಜಿ) ಬಹು ಮುಖ್ಯ ಕಾರಣವಾಗಿದೆ. ಹಾಗಾಗಿ, ಈವರೆಗೆ ಅನೇಕ ಆಯೋಗಗಳು ಖಾಸಗಿ ವಲಯಗಳಲ್ಲೂ ಮೀಸಲಾತಿ ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಿವೆ. ಆದರೆ ಅದು ಜಾರಿ ಆಗಿಲ್ಲ. ಜುಲೈ ನಲ್ಲಿ ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ 40 ಅಂಶಗಳ ‘ಬೆಂಗಳೂರು ಘೋಷಣೆ’ ಮಾಡಲಾಯಿತು. ಅದರಲ್ಲಿ ಖಾಸಗಿ ವಲಯದಲ್ಲೂ ಮೀಸಲಾತಿ ಕಲ್ಪಿಸಬೇಕು ಎಂಬುದು ಒಂದು ಪ್ರಮುಖಾಂಶ. ಇದೇ ರೀತಿಯಲ್ಲಿ ಸಂಸತ್ತು, ರಾಜ್ಯ ಶಾಸನ ಸಭೆಗಳಲ್ಲೂ ರಾಜಕೀಯ ಮೀಸಲಾತಿಗಾಗಿ ಹಿಂದುಳಿದ ವರ್ಗಗಳಿಂದ ಬಹು ಕಾಲದ ಒತ್ತಾಯವಿದೆ ಎಂಬುದು ಕೂಡ ಇಲ್ಲಿ ಗಮನಾರ್ಹ.

ಲೇಖಕ: ಅಧ್ಯಕ್ಷ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry