ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಶವ ಹೊತ್ತು ಹೊರ ನಡೆದ ಮಗ

ಒಂದೇ ದಿನ ಹೆತ್ತವರನ್ನು ಕಳೆದುಕೊಂಡ ದುಃಖ
Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದೇ ತನ್ನ ಪೋಷಕರಿಬ್ಬರೂ ಒಂದೇ ದಿನ ಮೃತಪಟ್ಟಿದ್ದಾರೆ ಎಂದು ಆಕ್ರೋಶ
ವ್ಯಕ್ತಪಡಿಸಿದ ಯುವಕನೊಬ್ಬ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರತಿಭಟನಾರ್ಥವಾಗಿ ತಾಯಿ ಶವವನ್ನು ಹೊತ್ತು ಹೊರನಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಚಿತ್ರಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿವೆ.

ಘಟನೆ ವಿವರ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ, ಬಳ್ಳಾರಿ ತಾಲ್ಲೂಕಿನ ಕೊರ್ಲಗುಂದಿಯ ಮಾರೆಪ್ಪ (76) ಹಾಗೂ ಅವರ ಪತ್ನಿ ತಿಪ್ಪಮ್ಮ (70) ಅವರನ್ನು ಭಾನುವಾರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ಮಾರೆಪ್ಪ ಅಸುನೀಗಿದರೆ, ರಾತ್ರಿ 9ರ ಸುಮಾರಿಗೆ ತಿಪ್ಪಮ್ಮ ಮೃತಪಟ್ಟಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡದೇ ಇರುವುದರಿಂದಲೇ ತನ್ನ ತಂದೆ–ತಾಯಿ ಜೀವ ಕಳೆದುಕೊಂಡಿದ್ದು ಎಂಬ ಆಕ್ರೋಶದಿಂದ ಅವರ ಕಿರಿಯ ಮಗ ರವಿ, ಸ್ಟ್ರೆಚರ್‌ ನೆರವೂ ಕೇಳಲಿಲ್ಲ ಎನ್ನಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರವಿ ಅವರ ಹಿರಿಯ ಸೋದರ ತಿರುಪತಿ, ‘ಬೆಳಿಗ್ಗೆಯೇ ಆಸ್ಪತ್ರೆಗೆ ದಾಖಲಿಸಿದ್ದರೂ ಅಲ್ಲಿಯ ಸಿಬ್ಬಂದಿ ಸಂಜೆವರೆಗೂ ವೃಥಾ ಕಾಲಹರಣ ಮಾಡಿದರು. ಅಪ್ಪನ ಶವವನ್ನು ಸಾಗಿಸುವ ಸಿದ್ಧತೆಯಲ್ಲಿದ್ದಾಗಲೇ ರಾತ್ರಿ ತಾಯಿಯೂ ತೀರಿಕೊಂಡರು. ಅಲ್ಲಿನ ಸಿಬ್ಬಂದಿ ಸ್ಟ್ರೆಚರ್‌, ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಿಕೊಡಲಿಲ್ಲ. ಇದರಿಂದ ಬೇಸತ್ತ ನನ್ನ ತಮ್ಮ, ತಾನೇ ಶವ ಹೊತ್ತು ಸಾಗಿಸಿದ’ ಎಂದು ಹೇಳಿದರು.

ಹೊಸಪೇಟೆ ತಾಲ್ಲೂಕಿನ ಗಾಳೆಮ್ಮನ ಗುಡಿ ಗ್ರಾಮದಲ್ಲಿ  ಸೋಮವಾರ ಸಂಜೆ ಇಬ್ಬರದೂ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಅವರು ತಿಳಿಸಿದರು.

‘ವೃದ್ಧರಿಬ್ಬರೂ ಕೆಮ್ಮು, ಆಯಾಸದಿಂದ ಬಳಲುತ್ತಿದ್ರು. ಸೂಕ್ತ ಚಿಕಿತ್ಸೆ ನೀಡಿ ಸರಿಪಡಿಸಬಹುದಿತ್ತು. ಆದರೆ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಇಬ್ಬರೂ ಪ್ರಾಣ ಕಳೆದುಕೊಳ್ಳುವಂತಾಯಿತು. ಇದರಿಂದ ಮನನೊಂದ ಅವರ ಮಗ ಸ್ಟ್ರೆಚರ್‌ ಬದಲಾಗಿ ಹೆಗಲ ಮೇಲೆ ತಾಯಿಯ ಶವವನ್ನು ಹೊತ್ತುಕೊಂಡು ಒಯ್ದು, ಆಟೊದಲ್ಲಿ ಮನೆಗೆ ಹೋಗಿದ್ದಾರೆ’ ಎಂದು ಪ್ರತ್ಯಕ್ಷದರ್ಶಿ ‘ಭ್ರಷ್ಟಾಚಾರ ಮುಕ್ತ ಕರ್ನಾಟಕ’ ಸಂಘಟನೆಯ ಅಧ್ಯಕ್ಷ ಪ.ಯ. ಗಣೇಶ್‌ ತಿಳಿಸಿದರು.

‘ಉಸಿರಾಟದ ತೊಂದರೆಯಿಂದ ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ಮಾರೆಪ್ಪ, ತಿಪ್ಪಮ್ಮ ಅಂದೇ ಮೃತಪಟ್ಟಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸ್ಟ್ರೆಚರ್‌ಗಳಿದ್ದರೂ ಅವರ ಮಗ ತಾಯಿಯ ಶವವನ್ನು ಭುಜದ ಮೇಲೆ ಏಕೆ ಹೊತ್ತೊಯ್ದರು ಎಂಬುದರ ಬಗ್ಗೆ ಮಾಹಿತಿ ಇಲ್ಲ' ಎಂದು ಆಸ್ಪತ್ರೆಯ
ಶಸ್ತ್ರಚಿಕಿತ್ಸಕ ಡಾ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪ್ರಕರಣದಲ್ಲಿ ಒಂದು ವೇಳೆ ಆಸ್ಪತ್ರೆಯ ಸಿಬ್ಬಂದಿಯ ತಪ್ಪು ಇದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT