ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನಗಳಲ್ಲಿ ರಸ್ತೆ ಗುಂಡಿ ಮುಚ್ಚಿ: ಸಿದ್ದರಾಮಯ್ಯ

Last Updated 9 ಅಕ್ಟೋಬರ್ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯ ಪಂತರಪಾಳ್ಯದ ಬಳಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ರಾಧಾ (47) ಎಂಬುವರು ಮೃತಪಟ್ಟ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಘಟನೆಗೆ ಕಾರಣವಾದ ರಸ್ತೆ ಗುಂಡಿಗಳನ್ನು ಬಿಬಿಎಂಪಿ ಸಿಬ್ಬಂದಿ ಮುಚ್ಚಿದ್ದರು. ಮಹಿಳೆ ಮೃತಪಟ್ಟಿದ್ದ ಜಾಗಕ್ಕೆ ಸಂಚಾರ ಪೊಲೀಸರು ಗುರುತು ಹಾಕಿದ್ದರು. ಘಟನೆ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಅವರು ಮುಖ್ಯಮಂತ್ರಿ ಅವರಿಗೆ ವಿವರಿಸಿದರು.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್‌ ಖರೋಲ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ, ರಸ್ತೆಗೆ ಡಾಂಬರು ಹಾಕುವಂತೆ ಸೂಚಿಸಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಪಂತರಪಾಳ್ಯದ ಬಳಿ ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಸ್ಕೂಟರ್‌ ಸವಾರ ಬ್ರೇಕ್‌ ಹಾಕಿದ್ದರಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆ ಮೇಲೆ ವಾಹನ ಹರಿದಿದೆ. ಇದು ದುರ್ದೈವ ಸಂಗತಿ’ ಎಂದರು.

‘ನಗರದ ಎಲ್ಲ ಗುಂಡಿಗಳನ್ನು 15 ದಿನಗಳ ಒಳಗೆ ಮುಚ್ಚುವಂತೆ ಮೇಯರ್‌ ಹಾಗೂ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.

‘ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯನ್ನು ಬಿಎಂಆರ್‌ಸಿಎಲ್‌ಗೆ ವಹಿಸಲಾಗಿದೆ. ಅವರೇ ಇದನ್ನು ನಿರ್ವಹಣೆ ಮಾಡಬೇಕು. ಅವರಿಗೆ ಹಸ್ತಾಂತರಿಸಿರುವ ಎಲ್ಲ ರಸ್ತೆಗಳಿಗೆ ಡಾಂಬರು ಹಾಕುವಂತೆ ಖರೋಲ ಅವರಿಗೆ ಸೂಚಿಸಿದ್ದೇನೆ’ ಎಂದರು.

‘ಗುಂಡಿಯಿಂದ ಅಪಘಾತ ಸಂಭವಿಸಿಲ್ಲ’: ‘ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಹಾಗೂ ಪಂತರಪಾಳ್ಯದ ಬಳಿ ಸಂಭವಿಸಿದ ಎರಡು ಅಪಘಾತಗಳಿಗೆ ಗುಂಡಿಗಳು ಕಾರಣವಲ್ಲ. ದ್ವಿಚಕ್ರ ವಾಹನಗಳಿಗೆ ಬಸ್‌ ಹಾಗೂ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದು ಈ ಅವಘಡಗಳು ಸಂಭವಿಸಿವೆ’ ಎಂದು ಜಾರ್ಜ್‌ ಸಮರ್ಥಿಸಿಕೊಂಡರು.

‘ರಸ್ತೆ ಗುಂಡಿಯಿಂದ ಮೃತಪಟ್ಟಿದ್ದಾರೆ ಎಂದರೆ ಮೃತರ ಕುಟುಂಬದವರಿಗೆ ವಿಮಾ ಕಂಪೆನಿಗಳು ಹಣ ನೀಡುವುದಿಲ್ಲ’ ಎಂದರು.

‘ನಗರದಲ್ಲಿ 16 ಸಾವಿರ ಗುಂಡಿಗಳಿವೆ. ಇವುಗಳನ್ನು ಸಮರೋಪಾದಿಯಲ್ಲಿ ಮುಚ್ಚಲು ಈಗಾಗಲೇ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT