ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು

ಜೀವಭಯದಲ್ಲಿ ವಾಹನ ಸವಾರರು * ಮೇಲ್ಸೇತುವೆಯಿಂದ ಇಳಿದ ತಕ್ಷಣ ಗುಂಡಿಗಳ ದರ್ಶನ
Last Updated 9 ಅಕ್ಟೋಬರ್ 2017, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆ, ದೊಡ್ಡ ಗಾತ್ರದ ಗುಂಡಿಗಳಿಂದಾಗಿ ಆಗಾಗ್ಗೆ ಸಂಭವಿಸುವ ಅಪಘಾತಗಳು, ಜೀವಭಯದಲ್ಲಿ ವಾಹನ ಓಡಿಸುವ ಸವಾರರು, ಸಂಚಾರ ದಟ್ಟಣೆಯ ಕಿರಿಕಿರಿ, ಪಾದಚಾರಿಗಳಿಗೆ ದೂಳಿನ ಮಜ್ಜನ...

ಇವು ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಜ್ಞಾನಭಾರತಿವರೆಗೆ ಕಂಡುಬರುವ ದೃಶ್ಯಗಳು. ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ಮೆಟ್ರೊ ರೈಲು ಮಾರ್ಗವನ್ನು ನಿರ್ಮಿಸುತ್ತಿದ್ದು, ಇದಕ್ಕಾಗಿ ಎರಡೂ ಕಡೆಗಳಲ್ಲಿ ಸರ್ವೀಸ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ.

ನಾಯಂಡಹಳ್ಳಿ ಜಂಕ್ಷನ್‌ ಮೇಲ್ಸೇತುವೆಯಿಂದ ಇಳಿದ ತಕ್ಷಣ ಗುಂಡಿಗಳ ದರ್ಶನವಾಗುತ್ತದೆ. ಪಂತರಪಾಳ್ಯದ ಬಳಿ ಮೆಟ್ರೊ ರೈಲು ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಇದರ ಪಕ್ಕದಲ್ಲೇ ಸರ್ವೀಸ್‌ ರಸ್ತೆ ಇದ್ದು, ಡಾಂಬರು ಕಾಣದಷ್ಟು ಹದಗೆಟ್ಟಿದೆ. ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ರಾಜರಾಜೇಶ್ವರಿ ನಗರ ಗೋಪುರದವರೆಗೂ ಇದೇ ಪರಿಸ್ಥಿತಿ ಇದೆ. ಇಲ್ಲಿಂದ ಜ್ಞಾನಭಾರತಿ ಕ್ಯಾಂಪಸ್‌ ಮುಖ್ಯದ್ವಾರದವರೆಗೆ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ.

ಕೆಂಗೇರಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲೂ ಗುಂಡಿಗಳದ್ದೇ ಕಾರುಬಾರು. ಪಂತರಪಾಳ್ಯದ ಬಳಿ ರಸ್ತೆಯ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಮೃತ್ಯುವಿಗಾಗಿ ಬಾಯ್ದೆರೆದುಕೊಂಡಂತೆ ಗುಂಡಿಗಳಿವೆ. ಈ ಭಾಗದಲ್ಲಿ ವಾಹನ ಸವಾರರು ಪ್ರಾಣಭಯದಲ್ಲಿ ಸಂಚರಿಸುವಂತಾಗಿದೆ.

ಸಂಚಾರ ದಟ್ಟಣೆ ಸಮಸ್ಯೆ: ಈ ರಸ್ತೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ದಟ್ಟಣೆ ಅವಧಿಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಈ ವೇಳೆ ವಾಹನಗಳು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯ. ಈಗ ರಸ್ತೆ ಗುಂಡಿಗಳಿಂದಾಗಿ ವಾಹನಗಳು ಆಮೆಗತಿಯಲ್ಲಿ ಸಂಚರಿಸುತ್ತವೆ. ಒಂದು ಕಿ.ಮೀ ಕ್ರಮಿಸಲು ಕನಿಷ್ಠ 15 ನಿಮಿಷಗಳು ಹಿಡಿಯುತ್ತವೆ. ಪಂತರಪಾಳ್ಯದಿಂದ ರಾಜರಾಜೇಶ್ವರಿ ನಗರ ಗೋಪುರ ಸಿಗ್ನಲ್‌ ದಾಟುವುದು ಸವಾರರಿಗೆ ದುಸ್ತರವೆನಿಸುತ್ತದೆ.

ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ: ನಾಯಂಡಹಳ್ಳಿ ಜಂಕ್ಷನ್‌ ಮೇಲ್ಸೇತುವೆಯ ರಸ್ತೆಯಲ್ಲೂ ಗುಂಡಿಗಳು ಬಿದ್ದಿವೆ. ರಸ್ತೆ ಬಿರುಕುಗಳು ಹೆಚ್ಚಾಗಿವೆ. ಕೂಡಲೇ ಡಾಂಬರು ಹಾಕದಿದ್ದರೆ, ಮತ್ತಷ್ಟು ಗುಂಡಿಗಳು ಬೀಳುವ ಸಾಧ್ಯತೆ ಇದೆ.

ಮೇಲ್ಸೇತುವೆ ಗುಂಡಿಮುಕ್ತ: ಮೈಸೂರು ರಸ್ತೆ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಮೇಲೆ ಇತ್ತೀಚೆಗೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ವೃದ್ಧ ದಂಪತಿ ಮೃತಪಟ್ಟಿದ್ದರು. ಮೇಲ್ಸೇತುವೆಯಲ್ಲಿ ಬಿದ್ದ ಗುಂಡಿಯಿಂದಾಗಿಯೇ ಅಪಘಾತ ಸಂಭವಿಸಿದೆ ಎಂಬ ಆರೋಪವೂ ಕೇಳಿಬಂದಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು, ಮೇಲ್ಸೇತುವೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿದ್ದಾರೆ.

‘ಪಂತರಪಾಳ್ಯದ ಬಳಿ ಭಾನುವಾರ ಬೆಳಿಗ್ಗೆ 10.30ಕ್ಕೆ ಅಪಘಾತ ನಡೆಯಿತು. ಈ ವೇಳೆ ಮಹಿಳೆಯೊಬ್ಬರು ಮೃತಪಟ್ಟರು. ಇದರಿಂದ ಎರಡು ಬಾರಿ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು. ಈ ಘಟನೆಯಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಧ್ಯಾಹ್ನ 12.30ರವರೆಗೂ ವಾಹನ ದಟ್ಟಣೆ ಕಡಿಮೆ ಆಗಿರಲಿಲ್ಲ. ಕೆಲಸಕ್ಕೆ ಹೋಗುವವರಿಗೆ ಹೆಚ್ಚಿನ ತೊಂದರೆ ಉಂಟಾಗಿತ್ತು’ ಎಂದು ಸ್ಥಳೀಯ ನಿವಾಸಿ ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊ ರೈಲು ಮಾರ್ಗ ನಿರ್ಮಾಣದಿಂದಾಗಿ ರಸ್ತೆ ಹದಗೆಟ್ಟಿದೆ. ಎರಡು ತಿಂಗಳಿಂದ ಮಳೆ ಬರುತ್ತಿದೆ. ಇದರಿಂದ ರಸ್ತೆಗಳು ಮತ್ತಷ್ಟು ಹಾಳಾಗಿವೆ. ಗುಂಡಿಗಳಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಿಸಬೇಕು’ ಎಂದು ಜಗದೀಶ್‌ ಒತ್ತಾಯಿಸಿದರು.

‘ರಸ್ತೆಯಲ್ಲಿ ದೂಳು ಹೆಚ್ಚಾಗಿದೆ. ಈ ಭಾಗದಲ್ಲಿನ ಜನ ರಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆಸ್ತಮಾ ರೋಗಿಗಳಿಗೆ ಮತ್ತಷ್ಟು ತೊಂದರೆ ಉಂಟಾಗುತ್ತಿದೆ’ ಎಂದು ಪಂತರಪಾಳ್ಯದ ಲಲಿತಾ ಅಳಲು ತೋಡಿಕೊಂಡರು.

ವಾಹನ ಸಂಚಾರ ನಿರ್ಬಂಧಕ್ಕೆ ಆಕ್ಷೇಪ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಯಿಂದಾಗಿ ವಾಹನ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ನಮ್ಮ ಕಷ್ಟ ಮುಖ್ಯಮಂತ್ರಿ ಅವರಿಗೆ ಗೊತ್ತಾಗುವುದಿಲ್ಲ. ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿದರೆ ಗುಂಡಿ ಬೀಳುವುದಿಲ್ಲ. ಅವೈಜ್ಞಾನಿಕ ಕಾಮಗಾರಿಯೇ ಈ ಅವ್ಯವಸ್ಥೆಗೆ ಕಾರಣ’ ಎಂದು ಆಟೊ ಚಾಲಕ ಶ್ರೀನಿವಾಸ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT