ಗುರುವಾರ , ಸೆಪ್ಟೆಂಬರ್ 19, 2019
26 °C

ಕೆರೆ ಕೋಡಿಬಿದ್ದು ಮನೆಗಳಿಗೆ ನುಗ್ಗಿದ ನೀರು

Published:
Updated:

ಯಳಂದೂರು: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಕೆಸ್ತೂರು ಗ್ರಾಮದ ಕೆರೆ ಕೋಡಿಬಿದ್ದು ಜನ ವಸತಿ ಪ್ರದೇಶಗಳು ಜಲಾವೃತವಾಗಿ, ಮನೆಗಳಿಗೆ ನೀರು ನುಗ್ಗಿ, ಗೋಡೆಗಳಿಗೆ ಹಾನಿಯಾಗಿದೆ. ದಿಢೀರನೆ ನೀರು ನುಗ್ಗಿದ ಪರಿಣಾಮ ಜನರು ಪರಿತಪಿಸುವಂತಾಗಿದೆ.

‘ಇತ್ತೀಚಿಗೆ ಕೆರೆಗೆ ನೀರು ತುಂಬಿಸಲಾಗಿತ್ತು. ಅಲ್ಲದೇ, ರಾತ್ರಿ ಸುರಿದ ಮಳೆಯಿಂದಾಗಿ ಕೋಡಿ ಬಿದ್ದು ಹೆಚ್ಚುವರಿ ನೀರು ರಭಸವಾಗಿ ಹೊರಹರಿದಿದೆ. ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಮನೆಗಳತ್ತಾ ನೀರು ನುಗ್ಗಿದೆ. ಹೀಗಾಗಿ ನಮ್ಮ ಮನೆಯ ಗೋಡೆ ಕುಸಿದಿದೆ. ರಾತ್ರಿ ಪೂರ ನೆಂಟರ ಮನೆಯಲ್ಲಿ ಕಳಿಯುವಂತೆ ಆಗಿದೆ’ ಎನ್ನುತ್ತಾರೆ ಚಿಕ್ಕರಂಗಶೆಟ್ಟಿ.

‘ಸುತ್ತಲ ಜಮೀನಿಗೆ ನಮ್ಮ ಮನೆಯ ಮುಂದಿರುವ ತೂಬಿನಿಂದಲೇ ನೀರು ಹರಿಸಬೇಕು. ಆದರೆ, ಇದನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಅವಾಂತರಕ್ಕೆ ಕಾರಣವಾಗಿದೆ. ಈ ಬಗ್ಗೆ ದೂರು ನೀಡಿದರೂ ನಿರ್ಲಕ್ಷಿಸಿದ ಕಾರಣ ತಗ್ಗು ಪ್ರದೇಶಗಳ ಮನೆಗಳು ನೀರಿನಲ್ಲಿ ಮುಳುಗುವಂತೆ ಆಗಿದೆ. ಹೀಗಾಗಿ ಉಪ್ಪಾರ ಮತ್ತು ದಲಿತ ಕಾಲೊನಿಗಳ ಕೆಲ ಮನೆಗಳು ಜಲಾವೃತವಾದವು’ ಎನ್ನುತ್ತಾರೆ ಗ್ರಾಮದ ಮಹೇಶ್.

ಶಾಸಕ ಭೇಟಿ: ಶಾಸಕ ಎಸ್. ಜಯಣ್ಣ ಸೋಮವಾರ ಭೇಟಿ ನೀಡಿ, ಜೆಸಿಬಿ ಯಂತ್ರದ ಮೂಲಕ ಕಾಲುವೆ ದುರಸ್ಥಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗೋಡೆ ಕುಸಿದಿರುವ ಮನೆಗಳಿಗೆ ಪರಿಹಾರ ನೀಡಬೇಕೆಂದು ಸೂಚಿಸಿದ ಅವರು, ದಲಿತ ಬಡಾವಣೆಯ ಪ್ರದೇಶಗಳಿಗೂ ನೀರು ನುಗ್ಗಿದೆ. ಇಲ್ಲಿನ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ನೀರಾವರಿ ಇಲಾಖೆಯಿಂದ ₹30 ಲಕ್ಷ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಜೆ. ಯೋಗೇಶ್, ತಹಶೀಲ್ದಾರ್ ಕೆ. ಚಂದ್ರಮೌಳಿ, ಉಪ ತಹಶೀಲ್ದಾರ್ ವೈ.ಎಂ. ನಂಜಯ್ಯ, ತಾಪಂ. ಕಾರ್ಯನಿರ್ವಹಕ ಅಧಿಕಾರಿ ಡಾ. ಪ್ರಕಾಶ್, ಮುಖಂಡರಾದ ಸಿದ್ದರಾಜು, ಮಧು, ನಾಗರಾಜು, ಮುಡಿಗುಂಡ ಶಾಂತರಾಜು ಇತರರು ಇದ್ದರು.

ಪಿಡಿಒಗೆ ಗ್ರಾಮಸ್ಥರ ಘೇರಾವ್: ಶಾಸಕರೊಂದಿಗೆ ಸ್ಥಳ ಪರಿಶೀಲನೆ ಮಾಡಲು ಬಂದಿದ್ದ ಕೆಸ್ತೂರು ಪಿಡಿಒಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ಸೋಮವಾರ ನಡೆಯಿತು.

ಕಾಲುವೆಯಲ್ಲಿ ಹೂಳು ತುಂಬಿದ್ದು ಅದನ್ನು ತೆರವುಗೊಳಿಸುವಂತೆ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಆದರೆ, ಅವರ ನಿರ್ಲಕ್ಷ್ಯದಿಂದ ಸರಾಗವಾಗಿ ನೀರು ಹರಿಯದೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಬೀದಿ ಚರಂಡಿಯ ಹೂಳು ತೆಗೆಸಿಲ್ಲ ಇದಕ್ಕೆಲ್ಲಾ ಅಧಿಕಾರಿಯೇ ಹೊಣೆ ಎಂದು ದೂರಿದರು.

Post Comments (+)