ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕತೆ ಇದ್ದರೆ ಜಮೀರ್ ರಾಜೀನಾಮೆ ನೀಡಲಿ

Last Updated 10 ಅಕ್ಟೋಬರ್ 2017, 6:08 IST
ಅಕ್ಷರ ಗಾತ್ರ

ಹಾಸನ: ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ಮೊದಲು ಜಮೀರ್‌ ಅಹಮದ್ ರಾಜೀನಾಮೆ ನೀಡಲಿ ಎಂದು ಶಾಸಕ ಎಚ್‌.ಡಿ.ರೇವಣ್ಣ ಸವಾಲು ಹಾಕಿದರು. ‘ಕಾಂಗ್ರೆಸ್‌ ಸೇರಲು ಡಿಸೆಂಬರ್‌ವರೆಗೂ ಕಾಯುವ ಅವಶ್ಯಕತೆ ಇಲ್ಲ. ಇನ್ನು ಜೆಡಿಎಸ್‌ ಅನ್ನ ತಿನ್ನುತ್ತಿದ್ದಾರೆ. ಪಕ್ಷದಿಂದ ಶಾಸಕರಾಗಿರುವ ಕಾರಣ ಮೊದಲು ರಾಜೀನಾಮೆ ನೀಡಿ ನಂತರ ನನ್ನ ವಿರುದ್ಧ ಬಾಣ, ಬಿರುಸು ಬಿಡಲಿ. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಹಾಕಿದಾಗಲೇ ರಾಜೀನಾಮೆ ನೀಡಬೇಕಿತ್ತು.

ನನ್ನ ವಿರುದ್ಧ ಮೀಟರ್‌ ತೋರಿಸುವುದು ಬೇಡ, ಕಾಂಗ್ರೆಸ್‌ ಮೀಟರ್‌ ಕಮ್ಮಿ ಆಗಿದೆ. ಅಲ್ಲಿ ತೋರಿಸಲಿ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ವಾಗ್ದಾಳಿ ನಡೆಸಿದರು. ‘ನಾವು ಯಾರಿಗೂ ಟೋಪಿ ಹಾಕುವುದಿಲ್ಲ. ನಮಗೆ ಟೋಪಿ ಹಾಕಿದರೆ ಹಾಕಿಸಿಕೊಳ್ಳುವವರು.

ಕುಮಾರಸ್ವಾಮಿಗೆ ಟೋಪಿ ಹಾಕಿದ್ದು ಜಮೀರ್‌. ತಾಕತ್ತು ಇದ್ದರೆ ಅವರ ಹುಟ್ಟೂರು ಕುಣಿಗಲ್‌ನಲ್ಲಿ ಸ್ಪರ್ಧಿಸಲಿ. ನಾನು ನನ್ನ ಹುಟ್ಟೂರು ಹೊಳೆನರಸೀಪುರದಲ್ಲಿ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರದ ಜನರು ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ಯಡಿಯೂರಪ್ಪ ಅವರೇ ಸ್ವಂತ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿರುವಾಗ ನಾನು ಏಕೆ ಬದಲಿಸಲಿ’ ಎಂದು ಜಮೀರ್‌ಗೆ ತಿರುಗೇಟು ನೀಡಿದರು.

‘ಮಂತ್ರಿ ಮಾಡಿದ ಕುಮಾರಸ್ವಾಮಿಗೆ ಮೋಸ ಮಾಡಿದವರನ್ನು ಪರಮೇಶ್ವರ್ ಸೇರಿಸಿಕೊಳ್ಳುವ ಮುನ್ನ ಯೋಚಿಸಬೇಕಿತ್ತು. ಪಂಚಾಯಿತಿ ಸದಸ್ಯನಾಗಲು ಆಗುತ್ತಿರಲಿಲ್ಲ. ಅಂತಹವರನ್ನು ಗೌಡರು ಶಾಸಕರಾಗಿ ಮಾಡಿದರು. ಜೆಡಿಎಸ್‌ ಕಾರ್ಖಾನೆ ಇದ್ದಂತೆ.

ಇಲ್ಲಿ ತಯಾರು ಮಾಡಿದವರನ್ನು ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ. ರೋಷನ್‌ ಬೇಗ್‌, ಸಿ.ಎಂ.ಇಬ್ರಾಹಿಂ, ಯು.ಟಿ.ಖಾದರ್‌, ಜಾಫರ್‌ ಷರೀಫ್‌ ಅವರಿಂದ ಮುಸ್ಲಿಂ ಮತ ಸೆಳೆಯಲು ಆಗುವುದಿಲ್ಲವೆಂದು ಜಮೀರ್‌ನನ್ನು ಸೇರಿಸಿಕೊಳ್ಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಅವರ ನಿರ್ಧಾರವೇ ಅಂತಿಮ. ರೇವಣ್ಣ, ಕುಮಾರಸ್ವಾಮಿ ನಡುವೆ ಹೊಂದಾಣಿಕೆ ಇದೆ. ಆಪರೇಷನ್‌ ಕಮಲ ಮಾಡಲು ಹೋದ ಬಿಜೆಪಿ 140 ಸ್ಥಾನದಿಂದ 40ಕ್ಕೆ ಕುಸಿಯಿತು. ಅದೇ ಗತಿ ಕಾಂಗ್ರೆಸ್‌ಗೂ ಬರಲಿದೆ. ಸೋನಿಯಾ ಗಾಂಧಿ ,ರಾಹುಲ್ ಗಾಂಧಿಗೆ
ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಸ್ಲಿಂರ ವಿಷಯ ಮಾತನಾಡಿದರೆ ಏನೋ ಮಾಡುತ್ತಾರಂತೆ. ನನ್ನದು ಸ್ವಾತಿ ನಕ್ಷತ್ರ. ಲಕ್ಷ್ಮೀ ನರಸಿಂಹ ಸ್ವಾಮಿ ಅನುಗ್ರಹ ಇದೆ. ನನಗೆ ಯಾವುದೇ ಮಾಟ, ಮಂತ್ರ ಮಾಡಿದರೂ ಅವರಿಗೆ ತಿರುಗುಬಾಣವಾಗುತ್ತದೆ’ ಎಂದು ಎಚ್ಚರಿಸಿದರು.

‘ಜೆಡಿಎಸ್ ಕೆರೆ ಅಂತ ಸಮುದ್ರ (ಕಾಂಗ್ರೆಸ್‌) ದಲ್ಲಿ ಈಜಲು ಹೋಗಿದ್ದಾರೆ. ಕೆರೆಯಲ್ಲಿ ಕೊರವ, ಗಿರ್ವ ಇರುತ್ತೆ, ಸಮುದ್ರದಲ್ಲಿ ಸೀಗ್ಡಿಯಂತ ಕಾಸ್ಟ್ಲಿ ಮೀನು ಸಿಗುತ್ತೆ ಅಂತ ಹೋಗಿದ್ದಾರೆ. ಇದನ್ನೆಲ್ಲಾ ರಾಹುಲ್, ಸೋನಿಯಾ ಅವರು ಕೂಲಿಂಗ್‌ ಗ್ಲಾಸ್ ಹಾಕಿಕೊಂಡು ನೋಡಲಿ’ ಎಂದು ಲೇವಡಿ ಮಾಡಿದರು. ಗೋಷ್ಠಿಯಲ್ಲಿ ಶಾಸಕ ಸಿ.ಎನ್‌.ಬಾಲಕೃಷ್ಣ, ಎಚ್‌ಡಿಸಿಸಿ ಬ್ಯಾಂಕ್‌ ಸತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT