ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಮಡಿಲನ್ನು ತೊಯ್ದ ಹಸ್ತ ಮಳೆ

Last Updated 10 ಅಕ್ಟೋಬರ್ 2017, 6:48 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಒಳ್ಳೆ ಮಳೆಯಾಗಿದೆ. ಸೋಮವಾರ ಬೆಳಿಗ್ಗೆ ಶ್ರೀನಿವಾಸಪುರ ಸುತ್ತಮುತ್ತ ಜೋರು ಮಳೆ ಸುರಿಯಿತು. ಹಳ್ಳಕೊಳ್ಳಗಳಿಗೆ ನೀರು ಹರಿದು ಬಂದಿತು.

ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್‌ ಸಮೀಪ ಸುರಿದ ಭಾರಿ ಮಳೆಯ ಪರಿಣಾಮವಾಗಿ ಶ್ರೀನಿವಾಸಪುರ – ಕೋಲಾರ ರಸ್ತೆ ಕೆಳಗಿನ ಮೋರಿಯಲ್ಲಿ ಸುಮಾರು ಮೂರು ದಶಕಗಳ ಬಳಿಕ ನೀರು ಭೋರ್ಗರೆದು ಹರಿಯಿತು. ಸೋಮವಾರ ನಸುಕಿನಲ್ಲಿ ಮೋರಿಯಲ್ಲಿ ನೀರು ಹಿಡಿಸದೆ ರಸ್ತೆಯ ಮೇಲೂ ಹರಿಯಿತು ಎಂದು ಪ್ರತ್ಯಕ್ಷ ದರ್ಶಿಗಳು 'ಪ್ರಜಾವಾಣಿ’ಗೆ ತಿಳಿಸಿದರು.

ಚಲ್ದಿಗಾನಹಳ್ಳಿ ಗ್ರಾಮದ ಸಮೀಪದ ಗದ್ದೆ ಬಯಲಲ್ಲಿ ನಿಂತಿದ್ದ ಮಳೆ ನೀರು, ರಸ್ತೆ ಕೆಳಗಿನ ಮೋರಿಯಲ್ಲಿ ತೂರಿ ರಾಜಕಾಲುವೆ ಮೂಲಕ ಗುಮ್ಮರೆಡ್ಡಿಪುರ ಗ್ರಾಮದ ಕೆರೆಗೆ ಹರಿಯಿತು. ಈ ಎರಡೂ ಕಡೆಗಳಲ್ಲಿ ಸಮೀಪದ ಗ್ರಾಗಳ ಗ್ರಾಮಸ್ಥರು ಹಾಗೂ ದಾರಿಹೋಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಉ ಕುತೂಹಲದಿಂದ ನೀರು ಹರಿಯುವುದನ್ನು ವೀಕ್ಷಿಸಿದರು.

ಉನಿಕಿಲಿ ಗ್ರಾಮದ ಕೆರೆಯ ವಿಶಾಲವಾದ ಹಳ್ಳದಲ್ಲಿ ಬೆಳೆದಿದ್ದ ಜಂಬಿನಲ್ಲಿ ಒಂದು ಜಾತಿಯ ಸಾವಿರಾರು ಪುಟ್ಟ ಹಕ್ಕಿಗಳು ಹಲವು ವರ್ಷಗಳಿಂದ ಗೂಡು ಕಟ್ಟಿ ಮರಿ ಮಾಡುತ್ತಿದ್ದವು. ಆದರೆ ಭಾನುವಾರ ರಾತ್ರಿ ಸುರಿದ ಮಳೆಗೆ ಜಂಬು ಮುಳುಗಿ ಹೋಗಿದ್ದು, ಹಕ್ಕಿಗಳು ನೆಲೆ ಕಳೆದುಕೊಂಡಿವೆ. ಗೂಡಲ್ಲಿನ ಮೊಟ್ಟೆ ಹಾಗೂ ಮರಿಗಳು ನೀರುಪಾಲಾಗಿವೆ. ಈ ಘಟನೆಯಿಂದಾಗಿ ಪ್ರತಿ ದಿನ ಶಬ್ದಮಾಡುತ್ತ ಗುಂಪು ಗುಂಪಾಗಿ ಕ್ಷಿಪಣಿಗಳಂತೆ ಆಕಾಶಕ್ಕೆ ಹಾರುತ್ತಿದ್ದ ಹಕ್ಕಿಗಳ ಸದ್ದಡಗಿದೆ. ಇದರಿಂದ ಪಕ್ಷಿ ಪ್ರೇಮಗಳ ಮನಸ್ಸಿಗೆ ನೋವುಂಟಾಗಿದೆ.

ಇಂದಿನ ಮಳೆ ವಾತಾವರಣವನ್ನು ಗಮನಿಸಿದರೆ ಕೆರೆಗಳು ತುಂಬುವ ಲಕ್ಷಣ ಕಂಡುಬರುತ್ತಿದೆ. ಆದರೆ ಬಹುತೇಕ ಕೆರೆಗಳ ಕಟ್ಟೆಗಳು ಕೆಲವು ದಶಕಗಳಿಂದ ರಿಪೇರಿ ಕಾಣದ ಪರಿಣಾಮವಾಗಿ ಸದೃಢವಾಗಿಲ್ಲ. ಇದೂ ಸಹ ರೈತರ ಆತಂಕಕ್ಕೆ ಕಾರಣವಾಗಿದೆ.

ಕೆಲವು ಕಡೆಗಳಲ್ಲಿ ಹೊಲಗಳಲ್ಲಿ ಎತ್ತರವಾಗಿ ಬೆಳೆದಿರುವ ತೆನೆಭರಿತ ರಾಗಿ ಪೈರು ಮಳೆಯ ಹೊಡೆತಕ್ಕೆ ಸಿಕ್ಕಿ ಉರುಳಿ ಬಿದ್ದಿದೆ. ತೆನೆ ಹಂತದಲ್ಲಿ ಬೆಳೆ ಬಿದ್ದರೆ ಸರಿಯಾಗಿ ಹಾಲು ಹತ್ತುವುದಿಲ್ಲ. ಕೊಯಿಲು ಮಾಡಲು ಕಷ್ಟವಾಗುತ್ತದೆ. ಕೊಯಿಲಿಗೆ ಬಂದಾಗ ಮಳೆ ಸುರಿದರೆ ತೆನೆಯಲ್ಲಿನ ಕಾಳು ಮೊಳಕೆ ಬರುತ್ತದೆ. ಇದು ಕೃಷಿಕರನ್ನು ಚಿಂತೆಗೀಡುಮಾಡಿದೆ.

ಹಸ್ತ ಮಳೆಯನ್ನು ಸ್ಥಳೀಯವಾಗಿ ಅತ್ತಿ ಮಳೆ, ಅತ್ತೋನ ಎಂದು ಕರೆಯುತ್ತಾರೆ. ಅತ್ತಿ ಮಳೆಯಾದರೆ ಗ್ರಾಮದಲ್ಲಿ ಕುರಿ ಕಡಿದು ‘ಪೊಂಗಲಿ’ ಮಾಡುವುದು ರೂಢಿ. ಈ ಬಾರಿ ಒಳ್ಳೆ ಮಳೆಯಾಗಿರುವುದರಿಂದ ಬಹುತೇಕ ಗ್ರಾಮಗಲ್ಲಿ ರೈತರು ಸಾಂಘಿಕವಾಗಿ ಪೊಂಗಲಿ ಆಚರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT