ಎರಡನೇ ಟಿ–20 ಪಂದ್ಯ; ಆಸ್ಟ್ರೇಲಿಯಾಗೆ ಶರಣಾದ ಕೊಹ್ಲಿ ಪಡೆ

ಬುಧವಾರ, ಜೂನ್ 19, 2019
31 °C

ಎರಡನೇ ಟಿ–20 ಪಂದ್ಯ; ಆಸ್ಟ್ರೇಲಿಯಾಗೆ ಶರಣಾದ ಕೊಹ್ಲಿ ಪಡೆ

Published:
Updated:
ಎರಡನೇ ಟಿ–20 ಪಂದ್ಯ; ಆಸ್ಟ್ರೇಲಿಯಾಗೆ ಶರಣಾದ ಕೊಹ್ಲಿ ಪಡೆ

ಗುವಾಹಟಿ: ಎಡಗೈ ವೇಗಿ ಜೇಸನ್‌ ಬೆನ್‌ಡಾರ್ಫ್ ಅವರ ಪ್ರಬಲ ದಾಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳು ನಲುಗಿದರು.ನಂತರ ಬೌಲರ್‌ಗಳು ಕೂಡ ಕೈಚೆಲ್ಲಿದರು. ಇದರ ಪರಿಣಾಮ ಆಸ್ಟ್ರೇಲಿಯಾಗೆ ಎರಡನೇ ಟಿ–20 ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಇಲ್ಲಿನ ಬರ್ಸಪಾರ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಪ್ರವಾಸಿ ತಂಡ ಎಂಟು ವಿಕೆಟ್‌ಗಳಿಂದ ಜಯ ಸಾಧಿಸಿತು. ಹೊಸ ಅಂಗಣದಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ಭಾರತದ ಗೆಲ್ಲಬೇಕು ಎಂಬ ನಿರೀಕ್ಷೆ ಹೊತ್ತು ಬಂದಿದ್ದ ಕ್ರಿಕೆಟ್ ಪ್ರಿಯರು ನಿರಾಸೆಗೆ ಒಳಗಾದರು.

119 ರನ್‌ಗಳ ಜಯದ ಗುರಿ ಆಸ್ಟ್ರೇಲಿಯಾ ಸವಾಲೆನಿಸಲೇ ಇಲ್ಲ. ಆ್ಯರನ್ ಫಿಂಚ್ ಮತ್ತು ನಾಯಕ ಡೇವಿಡ್ ವಾರ್ನರ್ ಅವರನ್ನು ಕ್ರಮವಾಗಿ ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬೂಮ್ರಾ ಔಟ್‌ ಮಾಡಿದರೂ ನಂತರ ಭಾರತದ ಬೌಲರ್‌ಗಳ ಆಟ ನಡೆಯಲಿಲ್ಲ. ಮೊಯಿಸಸ್ ಹೆನ್ರಿಕ್‌ (ಔಟಾಗದೇ 62; 46 ಎ, 4 ಸಿ, 4 ಬೌಂ) ಮತ್ತು ಟ್ರಾವಿಸ್ ಹೆಡ್‌ (ಔಟಾಗದೇ 48, 34 ಎ, 1 ಸಿ, 5 ಬೌಂ) ಅವರ ಅಮೋಘ ಬ್ಯಾಟಿಂಗ್ ಮುಂದೆ ಭಾರತದ ದಾಳಿ ಸಪ್ಪೆಯಾಯಿತು. ಏಕದಿನ ಸರಣಿಯಲ್ಲಿ ಸೋತು ಮೊದಲ ಟಿ–20 ಪಂದ್ಯದಲ್ಲೂ ಪರಾಭವಗೊಂಡ ಆಸ್ಟ್ರೇಲಿಯಾಗೆ ಈ ಜಯ ಸಮಾಧಾನ ತಂದಿತು. ತಂಡದ ಸರಣಿ ಜಯದ ಆಸೆಯೂ ಜೀವಂತವಾಗಿ ಉಳಿಯಿತು.

ಕುಸಿತ ಕಂಡ ಭಾರತದ ಬ್ಯಾಟಿಂಗ್ ಪಡೆ

ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆರಿಸಿಕೊಂಡಿತು. ಏಕದಿನ ಕ್ರಿಕೆಟ್‌ನಲ್ಲಿ ಪೂರ್ಣ ಆಧಿಪತ್ಯ ಸ್ಥಾಪಿಸಿದ್ದ ಭಾರತದ ಬ್ಯಾಟ್ಸ್‌ಮನ್‌ಗಳು ವಿಶ್ವಾಸದಿಂದಲೇ ಅಂಗಣಕ್ಕೆ ಇಳಿದರು. ಆದರೆ ಯಾರಿಗೂ ನಿರೀಕ್ಷಿತ ಆಟ ಆಡಲು ಆಗಲಿಲ್ಲ. ಎಡಗೈ ವೇಗಿ ಜೇಸನ್‌ ಬ್ರೆನ್‌ ಡಾರ್ಫ್‌ ಅವರ ದಾಳಿಗೆ ನಲುಗಿದ ತಂಡ ಗಳಿಸಿದ್ದು ಕೇವಲ 118 ರನ್‌.

ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿದರು. ಬ್ರೆನ್ ಡಾರ್ಫ್‌ ಅವರು ಹಾಕಿದ ಈ ಓವರ್‌ನ ಮೂರನೇ ಎಸೆತದಲ್ಲೂ ಬೌಂಡರಿ ಸಿಡಿಸಿದರು. ಆದರೆ ಮುಂದಿನ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಇನ್‌ಸ್ವಿಂಗ್ ಎಸೆತ ರೋಹಿತ್ ಅವರ ಪ್ಯಾಡಿಗೆ ಬಡಿದಾಗ ಔಟ್ ನೀಡಲು ಅಂಪೈರ್‌ ಹಿಂಜರಿಯಲಿಲ್ಲ. ಮರು ಪರಿಶೀಲನೆಗೆ ರೋಹಿತ್ ಮುಂದಾದರೂ ಇನ್ನೊಂದು ತುದಿಯಲ್ಲಿದ್ದ ಶಿಖರ್ ಧವನ್ ಬೇಡ ಎಂದು ಸೂಚಿಸಿದರು.

ಎಂಟು ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗೆ ಬಂದ ನಾಯಕ ವಿರಾಟ್ ಕೊಹ್ಲಿ ಈ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ತಮ್ಮದೇ ಎಸೆತದಲ್ಲಿ ಕ್ಯಾಚ್‌ ಪಡೆದುಕೊಂಡ ಬ್ರೆನ್‌ ಡಾರ್ಫ್‌ ಸಂಭ್ರಮದ ಅಲೆಯಲ್ಲಿ ಮಿಂದರು.

ಮನೀಷ್ ಪಾಂಡೆ ಕೂಡ ಆರಂಭದಲ್ಲಿ ಬೌಂಡರಿ ಗಳಿಸಿ ಮಿಂಚಿದರು. ಆದರೆ ಏಳು ಎಸೆತ ಎದುರಿಸಿದ ಅವರು ಬ್ರೆನ್‌ ಡಾರ್ಫ್‌ ಬೌಲಿಂಗ್‌ನಲ್ಲಿ ಔಟಾದರು. ನೇರ ಎಸೆತವನ್ನು ಅಂದಾಜಿಸುವಲ್ಲಿ ಎಡವಿದ ಪಾಂಡೆ ವಿಕೆಟ್‌ ಕೀಪರ್‌ ಟಿಮ್ ಪೈನೆ ಅವರಿಗೆ ಸುಲಭ ಕ್ಯಾಚ್ ನೀಡಿ ಮರಳಿದರು.

ಸಂಕಷ್ಟದ ಕೂಪದಲ್ಲಿ ಬಿದ್ದ ತಂಡವನ್ನು ಮೇಲೆತ್ತಲು ಶಿಖರ್ ಧವನ್‌ ಮತ್ತು ಕೇದಾರ್ ಜಾಧವ್ ನಡೆಸಿದ ಶ್ರಮವೂ ವ್ಯರ್ಥವಾಯಿತು. ತಂಡದ ಮೊತ್ತ 27 ಆಗುವಷ್ಟರಲ್ಲಿ ಶಿಖರ್ ಧವನ್ ಕೂಡ ಬ್ರೆನ್ ಡಾರ್ಫ್‌ಗೆ ಬಲಿಯಾದರು. ಧವನ್ ಅವರನ್ನು ನಾಯಕ ಡೇವಿಡ್‌ ವಾರ್ನರ್ ಅವರ ಮುಷ್ಠಿಯಲ್ಲಿ ಬಂಧಿಯಾಗಿಸಿದ ಡಾರ್ಫ್‌ ಸಂತಸದಲ್ಲಿ ಕೇಕೆ ಹಾಕಿದರು.

ನಂತರ ಕೇದಾರ್‌ ಜಾಧವ್‌ ಮತ್ತು ಮಹೇಂದ್ರ ಸಿಂಗ್ ದೋನಿ 33 ರನ್ ಸೇರಿಸಿ ಇನಿಂಗ್ಸ್‌ಗೆ ಬಲ ತುಂಬುವ ಭರವಸೆ ಮೂಡಿಸಿದರು. ಕೇದಾರ್ ಜಾಧವ್‌ 27 ಎಸೆತಗಳಲ್ಲಿ 27 ರನ್‌ (1 ಸಿ, 3 ಬೌಂ) ಗಳಿಸಿ ತಂಡದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದರು. ಆದರೆ ಇವರಿಬ್ಬರು ಏಳು ರನ್‌ಗಳ ಅಂತರದಲ್ಲಿ ಔಟಾಗುವುದರೊಂದಿಗೆ ಭಾರತ ಭರವಸೆಯನ್ನೇ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದವರು ಹಾರ್ದಿಕ್ ಪಾಂಡ್ಯ. ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿ ತಂಡದ ಕೈ ಹಿಡಿದಿದ್ದ ಪಾಂಡ್ಯ ಇಲ್ಲೂ ಉತ್ತಮ ಬ್ಯಾಟಿಂಗ್ ಮಾಡಿದರು. 23 ಎಸೆತಗಳಲ್ಲಿ 25 ರನ್‌ ಗಳಿಸಿದರು. ಸಂದರ್ಭಕ್ಕೆ ತಕ್ಕಂತೆ ಬೌಲರ್‌ಗಳನ್ನು ಎದುರಿಸಿದ ಅವರ ಇನಿಂಗ್ಸ್‌ನಲ್ಲಿ ಒಂದು ಬೌಂಡರಿ ಕೂಡ ಇಲಿಲಿಲ್ಲ. ಒಂದು ಸಿಕ್ಸರ್ ಸಿಡಿಸಿ ಮಿಂಚಿದರು. ಅಂತಿಮ ಓವರ್‌ಗಳಲ್ಲಿ ಕುಲದೀಪ್ ಯಾದವ್ ಗಳಿಸಿದ 16 ರನ್‌ಗಳು ತಂಡದ ಮೊತ್ತ 200 ರನ್‌ ದಾಟಲು ನೆರವಾಯಿತು.

ಭಾರತದ ಏಳು ಮಂದಿ ಬ್ಯಾಟ್ಸ್‌ಮನ್‌ಗಳು ಎರಡಂಕಿ ಕಾಣದೆ ವಾಪಸಾದರು. ಇನಿಂಗ್ಸ್‌ನಲ್ಲಿ ಇದ್ದ ಬೌಂಡರಿಗಳ ಸಂಖ್ಯೆ ಒಂಬತ್ತು ಮಾತ್ರ. ಕೇವಲ ಎರಡು ಸಿಕ್ಸರ್‌ಗಳು ಸಿಡಿದಿದ್ದವು.

ಸಂಕ್ಷಿಪ್ತ ಸ್ಕೋರ್‌

ಭಾರತ: 20 ಓವರ್‌ಗಳಲ್ಲಿ 118ಕ್ಕೆ ಆಲೌಟ್‌ (ಕೇದಾರ್ ಜಾಧವ್ 27, ಹಾರ್ದಿಕ್‌ ಪಾಂಡ್ಯ 25; ಜೇಸನ್‌ ಬ್ರನ್‌ ಡಾರ್ಫ್‌ 21ಕ್ಕೆ4); ಆಸ್ಟ್ರೇಲಿಯಾ: 15.3 ಓವರ್‌ಗಳಲ್ಲಿ 2ಕ್ಕೆ122 (ಮೊಯ್ಸಸ್ ಹೆನ್ರಿಕ್‌ 62, ಟ್ರಾವಿಸ್ ಹೆಡ್‌ 48). ಫಲಿತಾಂಶ: ಆಸ್ಟ್ರೇಲಿಯಾಗೆ 8 ವಿಕೆಟ್‌ಗಳ ಜಯ; 3 ಪಂದ್ಯಗಳ ಸರಣಿ 1–1ರಲ್ಲಿ ಸಬಬಲ. ಮುಂದಿನ ಪಂದ್ಯ: ಅಕ್ಟೋಬರ್‌ 13ರಂದು ಹೈದರಾಬಾದ್‌ನಲ್ಲಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry