ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಿನ್ನತೆ ವಿರುದ್ಧ ಗೆದ್ದುಬಂದೆ; ನೀವೂ ಹೊರಬನ್ನಿ’

ಪಲ್ಲಾಗಟ್ಟೆ, ಬಿಳಿಚೋಡು ಗ್ರಾಮಕ್ಕೆ ನಟಿ ದೀಪಿಕಾ ಪಡುಕೋಣೆ ಭೇಟಿ
Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದಾವಣಗೆರೆ: ಮುಂಬೈನಲ್ಲಿ ಮೂರು ವರ್ಷಗಳ ಹಿಂದೆ ವಿಚಿತ್ರ ಮನೋವೇದನೆ ಅನುಭವಿಸಿದೆ. ಕೆಲವು ದಿನ ಯಾರಿಗೂ ಮುಖ ತೋರಿಸಲಿಲ್ಲ. ಶೂಟಿಂಗ್‌ನಲ್ಲೂ ಭಾಗವಹಿಸಲಿಲ್ಲ. ಅದು ಸಾಮಾನ್ಯವಾದ ದುಃಖವಾಗಿರಲಿಲ್ಲ. ವೈದ್ಯರನ್ನು ಸಂಪರ್ಕಿಸಿದಾಗ ಖಿನ್ನತೆ ಎಂದು ತಿಳಿಯಿತು. ಚಿಕಿತ್ಸೆ ಪಡೆದು ಖಿನ್ನತೆ ವಿರುದ್ಧ ಹೋರಾಡಿ ಹೊರಬಂದೆ. ನನ್ನಂತೆಯೇ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವು ನೀಡಲು ಇಲ್ಲಿಗೆ ಬಂದಿದ್ದೇನೆ....

ಹೀಗೆ, ಬಾಲಿವುಡ್‌ ನಟಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ ಮಾನಸಿಕ ಒತ್ತಡದಿಂದ ಮುಕ್ತವಾಗಿ ಹೊಸಬದುಕು ಕಟ್ಟಿಕೊಂಡ ಬಗೆಯನ್ನು ಕನ್ನಡದಲ್ಲಿ ವಿವರಿಸಿದಾಗ ಕಾರ್ಯಕ್ರಮದಲ್ಲಿದ್ದವರೆಲ್ಲ ತದೇಕಚಿತ್ತರಾಗಿ ಕೇಳಿದರು.

ಸಂಸ್ಥೆಯ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ಇಲ್ಲಿನ ಪಲ್ಲಾಗಟ್ಟೆ ಹಾಗೂ ಬಿಳಿಚೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೀಪಿಕಾ ಭೇಟಿ ನೀಡಿದರು. ಈ ವೇಳೇ ಅಲ್ಲಿನ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಮಾನಸಿಕ ಅಸ್ವಸ್ಥತೆಗೆ ಒಳಗಾದವರ ಕುಟುಂಬದ ಜತೆ ಸಂವಾದ ನಡೆಸಿ ಧೈರ್ಯ ತುಂಬಿದರು.

‘ಸಂಶೋಧನೆಯ ಪ್ರಕಾರ ದೇಶದ ಜನಸಂಖ್ಯೆಯ ಶೇ 15ರಷ್ಟು ಮಂದಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಮನೋವೈದ್ಯರ ಹಾಗೂ ತಜ್ಞರ ಕೊರತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಟಿಎಲ್‌ಎಲ್‌ಎಲ್‌ಎಫ್‌ ಫೌಂಡೇಷನ್‌ ಖಿನ್ನತೆಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ಶ್ರಮಿಸುತ್ತಿದೆ’ ಎಂದು ದೀಪಿಕಾ ಹೇಳಿದರು.

‘ಯೂ ಆರ್ ನಾಟ್ ಅಲೋನ್‌’ ಎಂಬ ಘೋಷವಾಕ್ಯದಡಿ ಹಲವು ರಾಜ್ಯಗಳಲ್ಲಿ ಶಾಲಾ ಮಕ್ಕಳು, ಶಿಕ್ಷಕರಿಗೆ ಮಾನಸಿಕ ಒತ್ತಡ ಹಾಗೂ ಭಯವನ್ನು ಹೋಗಲಾಡಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಅದೇ ರೀತಿ ‘ಟುಗೆದರ್ ಅಗೇನಸ್ಟ್‌  ಡಿಪ್ರೆಷನ್‌’, ‘ದುಬಾರಾ ಪೂಚೊ’, ‘ಕಮ್ಯುನಿಟಿ ಮೆಂಟಲ್‌ ಹೆಲ್ತ್‌’ ಕಾರ್ಯಕ್ರಮಗಳಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಾನಸಿಕ ಖಿನ್ನತೆ ವಿರುದ್ಧ ಹೋರಾಡುತ್ತಿರುವ ಎನ್‌ಜಿಒಗಳ ಜತೆ ಒಪ್ಪಂದ ಮಾಡಿಕೊಂಡು ಆರ್ಥಿಕ ನೆರವು ನೀಡಲಾಗುತ್ತಿದೆ ಎಂದೂ ದೀಪಿಕಾ ಸಂಸ್ಥೆಯ ಕಾರ್ಯಗಳನ್ನು ವಿವರಿಸಿದರು.

ಇದೇವೇಳೆ ಜಗಳೂರು ತಾಲ್ಲೂಕಿನಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸುವಾಗ ಎದುರಾದ ಸಮಸ್ಯೆಗಳು ಹಾಗೂ ಸಮರ್ಥವಾಗಿ ಸವಾಲುಗಳನ್ನು ಎದುರಿಸಿದ ಬಗೆಯನ್ನು ಆಶಾ ಕಾರ್ಯಕರ್ತೆಯರು ವಿವರಿಸಿದರು. ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ದೀಪಿಕಾ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಬಳಿಕ ಬಿಳಿಚೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ಅವರು, ಮಾನಸಿಕ ಅಸ್ವಸ್ಥರ ಕುಟುಂಬಗಳ ಜತೆ ಸಂವಾದ ನಡೆಸಿದರು. ಖಿನ್ನತೆಯಿಂದ ಹೊರಬಂದ ಬಗೆ, ನೆರೆಹೊರೆಯವರ ನಿಂದನೆ, ಚಿಕಿತ್ಸೆ ಪಡೆದು ಬದುಕಿನಲ್ಲಾದ ಬದಲಾವಣೆಗಳನ್ನು ವೇದಿಕೆಯಲ್ಲಿ ಹಂಚಿಕೊಳ್ಳಲಾಯಿತು. ಸರ್ಕಾರದ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಂದರ್ಭ ದೀಪಿಕಾ ತಾಯಿ ಉಜಾಲಾ, ಸಹೋದರಿ ಅನಿಷಾ ಪಡುಕೋಣೆ, ಟಿಎಲ್‌ಎಲ್‌ಎಫ್‌ ಸಂಸ್ಥೆಯ ಅನಾ ಚಾಂಡಿ, ನೀನಾ ನಾಯರ್, ಡಾ.ಶ್ಯಾಂ ಭಟ್‌, ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗರಾಜ್‌, ಎಪಿಡಿ ಸಂಸ್ಥೆಯ ಎ.ಎಲ್‌.ಜನಾರ್ದನ್‌, ಸುರೇಶ್‌ ಅವರೂ ಇದ್ದರು.

‘ದೀಪೀಕಾ ಬಂದವಳಂತೆ’

ದೀಪಿಕಾ ಪಡುಕೋಣೆ ಜಗಳೂರಿಗೆ ಭೇಟಿ ನೀಡುವ ವಿಷಯ ಅಲ್ಲಿನ ಗ್ರಾಮಸ್ಥರಿಗೇ ತಿಳಿದಿರಲಿಲ್ಲ. ತಾಲ್ಲೂಕಿಗೆ ಭೇಟಿ ಕೊಟ್ಟ ನಂತರವಷ್ಟೇ ಹಲವು ಗ್ರಾಮಗಳಿಗೆ ಸುದ್ದಿ ಹರಡಿತು. ನಮ್ಮೂರಿಗೆ ದೀಪಿಕಾ ಬಂದವಳಂತೆ ಎಂದು ನಟಿಯನ್ನು ನೋಡಲು ಜನರ ದಂಡೇ ಜಮಾಯಿಸಿತು. ಹತ್ತಿರ ನಿಂತು ಫೋಟೊ ತೆಗೆಸಿಕೊಳ್ಳಲು ಅವಕಾಶ ಸಿಗದ ಕಾರಣ ದೂರದಲ್ಲೇ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT