ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯಾಮರಣ ಕೋರಿ ಯುವಕನಿಂದ ರಾಷ್ಟ್ರಪತಿಗೆ ಪತ್ರ

ಕೆಎಸ್‌ಎಸ್‌ಒಯು ಮಾನ್ಯತೆ ರದ್ದುಪಡಿಸಿದ ಯುಜಿಸಿ
Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ಮಾನ್ಯತೆ ರದ್ದಾಗಿರುವ ಹಿನ್ನೆಲೆಯಲ್ಲಿ ಹತಾಶರಾಗಿರುವ ಯುವಕ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕೆ.ಅಣ್ಣಹಳ್ಳಿ ಗ್ರಾಮದ ಕೃಷಿಕ ಕುಟುಂಬದ ಎ.ಎಸ್‌.ನಂದೀಶ 2014– 15ರಲ್ಲಿ ಕೆಎಸ್‌ಒಯುವಿನಲ್ಲಿ ಅರ್ಥಶಾಸ್ತ್ರ ಸ್ನಾತಕೊತ್ತರ ಪದವಿಗೆ ಸೇರಿದ್ದು, ಪ್ರಥಮ ವರ್ಷದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂಕಪಟ್ಟಿಯನ್ನೂ ಪಡೆದುಕೊಂಡಿದ್ದಾರೆ. ಈ ಅಂಕಪಟ್ಟಿಯ ಆಧಾರದ ಮೇಲೆ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲೂ (ಕೆ–ಸೆಟ್‌) ತೇರ್ಗಡೆಯಾಗಿದ್ದಾರೆ.

ಆದರೆ, 2015–16ರಲ್ಲಿ 2ನೇ ವರ್ಷ ವ್ಯಾಸಂಗ ಮಾಡುತ್ತಿದ್ದಾಗ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿ.ವಿ ಮಾನ್ಯತೆಯನ್ನು ರದ್ದುಪಡಿಸಿದೆ. ಮಾನ್ಯತೆ ರದ್ದಾದ ನಂತರವೂ ವಿ.ವಿ ಪರೀಕ್ಷೆಯನ್ನೂ ನಡೆಸಿದೆ. ಆದರೆ, ಅಂಕಪಟ್ಟಿಯನ್ನು ನೀಡಿಲ್ಲ. ಇದರಿಂದಾಗಿ ಕೆ–ಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, 2ನೇ ವರ್ಷದ ಎಂ.ಎ ಅಂಕಪಟ್ಟಿ ಅಥವಾ ಸ್ನಾತಕೋತ್ತರ ಪದವಿ ಪ್ರಮಾಣಪತ್ರವನ್ನು ನೀಡಲು ಸಾಧ್ಯವಾಗದೆ ಕೆ–ಸೆಟ್‌ ಪ್ರಮಾಣಪತ್ರ ದೊರೆತಿಲ್ಲ.

ಶಿಕ್ಷಕರಾಗಬೇಕು ಎಂಬ ಕನಸು ಕಟ್ಟಿದ್ದ ನಂದೀಶ ಅವರು ಇದರಿಂದ ಹತಾಶರಾಗಿದ್ದಾರೆ. ‘ಬಡ ರೈತ ಕುಟುಂಬದಿಂದ ಬಂದಿರುವ ನನಗೆ ಇದರಿಂದ ಅತೀವ ನಷ್ಟವಾಗಿದೆ. ಶಿಕ್ಷಣದಿಂದ ಮಾತ್ರ ಜೀವನ ನಡೆಸಲು ಸಾಧ್ಯ ಎಂಬ ನಂಬಿಕೆಗೆ ಕೊಡಲಿ ಪೆಟ್ಟು ಬಿದ್ದಿದೆ. ಇದರಿಂದ ಕುಟುಂಬ ನಿರ್ವಹಣೆ ಕನಸಿನ ವಿಚಾರವಾಗಿದ್ದು, ನನಗೆ ಹಾಗೂ ನನ್ನ ಕುಟುಂಬಕ್ಕೆ ದಯಾಮರಣಕ್ಕೆ ಅವಕಾಶ ನೀಡಿ’ ಎಂದು ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

‘ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ಆರ್ಥಿಕ ಚೈತನ್ಯ ನನಗಿರಲಿಲ್ಲ. ಆದರೂ, ವೃತ್ತಿ ಗಳಿಸಬೇಕಾದರೆ ಪದವಿ ಅನಿವಾರ್ಯ ಎಂಬ ಕಾರಣಕ್ಕೆ ಕೆಎಸ್‌ಒಯುನಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದೆ. ಯುಜಿಸಿ ಹಾಗೂ ಕೆಎಸ್‌ಒಯು ಅಧಿಕಾರಿಗಳ ವಿದ್ಯಾರ್ಥಿ ವಿರೋಧಿ ನೀತಿಯಿಂದ ನನ್ನಂತ ಅನೇಕ ಯುವಕರಿಗೆ ಎಲ್ಲೂ ಉದ್ಯೋಗ ಸಿಗದಂತಾಗಿದೆ. ನನ್ನ ಕನಸು ನುಚ್ಚು ನೂರಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ತಲೆಕೆಳಗಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಭಾರತದ ಸಂವಿಧಾನದ ಅನುಚ್ಛೇದ 21ರ ಪ್ರಕಾರ ಉನ್ನತವಾದ ಜೀವನವನ್ನು ಅನುಭವಿಸುವ ಅವಕಾಶದಿಂದ ಯುಜಿಸಿ ಮತ್ತು ಕೆಎಸ್ಒಯು ನನ್ನನ್ನು ವಂಚಿಸಿವೆ. ಆದರೆ, ಈ ಸಂಸ್ಥೆಗಳ ವಿರುದ್ಧ ಹೋರಾಡಲು ಆರ್ಥಿಕ ಶಕ್ತಿಯಿಲ್ಲ. ಬಡತನದ ವಿರುದ್ಧ ಹೋರಾಡಲೂ ಅಶಕ್ತನಾಗಿದ್ದೇನೆ. ಕೆಎಸ್‌ಒಯುಗೆ ಮಾನ್ಯತೆ ಇಲ್ಲದೇ ಇರುವ ಕಾರಣ ನನ್ನ ಜೀವನ ಕಮರಿ ಹೋಯಿತು. ನನಗೆ ನ್ಯಾಯ ದೊರಕಿಸಿಕೊಡಬೇಕು; ಇಲ್ಲವಾದರೆ ದಯಾಮರಣಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಅವರು ಕೋರಿದ್ದಾರೆ.

ಪ್ರಧಾನಮಂತ್ರಿಗೂ ಪ್ರತಿ: ರಾಷ್ಟ್ರಪತಿಗೆ ‍ಪತ್ರ ಬರೆದಿರುವ ನಂದೀಶ, ಪತ್ರದ ಪ್ರತಿಯನ್ನು ಪ್ರಧಾನ ಮಂತ್ರಿಗೂ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT