ಸರ್ಕಾರಿ ಶಾಲೆಯಲ್ಲಿ ಹೆಚ್ಚಿದ ಮಕ್ಕಳ ಸಂಖ್ಯೆ

ಶನಿವಾರ, ಮೇ 25, 2019
32 °C

ಸರ್ಕಾರಿ ಶಾಲೆಯಲ್ಲಿ ಹೆಚ್ಚಿದ ಮಕ್ಕಳ ಸಂಖ್ಯೆ

Published:
Updated:
ಸರ್ಕಾರಿ ಶಾಲೆಯಲ್ಲಿ ಹೆಚ್ಚಿದ ಮಕ್ಕಳ ಸಂಖ್ಯೆ

ಭಾಲ್ಕಿ: ಖಾಸಗಿ ಶಾಲೆಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಪ್ರತಿವರ್ಷ ಕ್ಷೀಣಿಸುತ್ತಿದೆ. ಆದರೆ, ತಾಲ್ಲೂಕಿನ ಡೋಣಗಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಪರಿಶ್ರಮದ ಫಲವಾಗಿ ಶಾಲೆಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ತಾಲ್ಲೂಕು ಕೇಂದ್ರದಿಂದ 8 ಕಿ.ಮೀ ದೂರದಲ್ಲಿರುವ ಈ ಶಾಲೆಯಲ್ಲಿ ಕಳೆದ ವರ್ಷ 1ರಿಂದ 7 ನೇ ತರಗತಿ ವರೆಗೆ 160 ವಿದ್ಯಾರ್ಥಿಗಳು ಇದ್ದರು. ಈ ವರ್ಷ ಮಕ್ಕಳ ಸಂಖ್ಯೆ 181ಕ್ಕೆ ಹೆಚ್ಚಿದೆ.

‘ಕಳೆದ ಮೇ ತಿಂಗಳಿನಲ್ಲಿ ಶಿಕ್ಷಕರು ತಂಡ ರಚಿಸಿಕೊಂಡು ಗ್ರಾಮದ ಎಲ್ಲ ಮನೆಗಳಿಗೆ ಭೇಟಿ ನೀಡಿ ಶಾಲೆಯಲ್ಲಿ ನೀಡುತ್ತಿರುವ ಗುಣಾತ್ಮಕ ಶಿಕ್ಷಣದ ಬಗೆಗೆ ಶಿಕ್ಷಕರಿಗೆ ಮನವರಿಕೆ ಮಾಡಿದ್ದರು. ಹೀಗಾಗಿ ಪಾಲಕರು ನಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿದ್ದಾರೆ’ ಎಂದು ಮುಖ್ಯಶಿಕ್ಷಕ ಜೀವನ ಬೇದ್ರೆ, ಶಾಂತಕುಮಾರ ಬಿರಾದರ ತಿಳಿಸುತ್ತಾರೆ.

‘ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳ ವಯಸ್ಸಿಗೆ ಮೀರಿದ ಭಾರವನ್ನು ಹೊರುವ ಶಾಲಾ ಬ್ಯಾಗ್‌ನ್ನು ಹೊತ್ತುಕೊಂಡು ಶಾಲೆಗೆ ಬರುವಷ್ಟರಲ್ಲಿಯೇ ಮಕ್ಕಳು ಸುಸ್ತು ಆಗಿ ಬಿಡುತ್ತಾರೆ. ಆದರೆ, ಈ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಭಾರವನ್ನು ಕಡಿಮೆ ಮಾಡಲಾಗಿದೆ. ಬಹುವರ್ಗದ, ಬಹುಹಂತದ ಕಲಿಕೆ, ಸ್ವಕಲಿಕೆ ಎನ್ನುವ ತತ್ವಗಳನ್ನು ಆಧಾರವಾಗಿಟ್ಟುಕೊಂಡು ಶಿಕ್ಷಣ ನೀಡುತ್ತಿದ್ದಾರೆ. ನಲಿ–ಕಲಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಾರೆ.

‘1ರಿಂದ 3ನೇ ತರಗತಿ ವರೆಗಿನ ನಲಿ–ಕಲಿ ವಿಭಾಗದಲ್ಲಿ 79 ಮಕ್ಕಳು ಇದ್ದಾರೆ. ನಲಿ–ಕಲಿ, ಶಿಶು ಮತ್ತು ಶಿಕ್ಷಕ ಸ್ನೇಹಿಯಾಗಿದೆ. ಮಕ್ಕಳಿಗೆ ಚಟುವಟಿಕೆ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ’ ಎನ್ನುತ್ತಾರೆ ಶಿಕ್ಷಕಿ ಪದ್ಮಾವತಿ ಕುಶನೂರ ಹಾಹೂ ಕನ್ನಮ್ಮ ಮೇತ್ರೆ.

‘ಮಕ್ಕಳ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಲಾಗುತ್ತದೆ. ಇದರ ಫಲವಾಗಿ ಈಚೆಗೆ ತಾಲ್ಲೂಕಿನ ಭಾತಂಬ್ರಾದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಬಾಲಕರ ಕಬಡ್ಡಿಯಲ್ಲಿ, ಪ್ರತಿಭಾ ಕಾರಂಜಿಯ ಕೋಲಾಟದಲ್ಲಿ ಪೂಜಾ ಸಂಭಾಜಿ, ಸಾಕ್ಷಿ ನಾಮದೇವ, ರಾಣಿ ಅರ್ಜುನ, ದೀಪಿಕಾ ಸಂಜುಕುಮಾರ, ರಾಧಿಕಾ ರಾಜಕುಮಾರ, ಮುಸಕಬಿ ಜಹಾಂಗೀರ್‌, ಕನ್ನಡ ಮತ್ತು ಹಿಂದಿ ಕಂಠ ಪಾಠದಲ್ಲಿ ವಿಜಯಲಕ್ಷ್ಮಿ ಸಿದ್ರಾಮ್‌, ಸಾಕ್ಷಿ ನಾಮದೇವ, ಅಭಿನಯಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ ಸ್ಪರ್ಧೆಗಳಲ್ಲಿ ಸಪ್ನಾ ಶಿವಪುತ್ರ, ಅಂಬಿಕಾ ಶಿವಪ್ಪ, ಸೋನಿಕಾ ವಿಜಯಕುಮಾರ, ಛದ್ಮವೇಶದಲ್ಲಿ ಪೂರ್ಣಿಕಾ ತಿಪ್ಪಯ್ಯ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ ಎಂದು ಗಂಗಾಧರ ಬಂಬುಳಗೆ ಹೇಳುತ್ತಾರೆ.

ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಬಿರಾದಾರ ಅವರು ತಮ್ಮ ಖರ್ಚಿನಲ್ಲಿ ಎಲ್ಲ ಮಕ್ಕಳಿಗೆ ಟೈ, ಗುರುತಿನಚೀಟಿ, ಬೆಲ್ಟ್‌ ವಿತರಿಸಿದ್ದಾರೆ. ಇಂಗ್ಲಿಷ್‌ ಶಿಕ್ಷಕರ ಕೊರತೆ ಇರುವ ಕಾರಣ ಸ್ಪಲ್ಪ ತೊಂದರೆ ಆಗಿದೆ. ಇಂಗ್ಲಿಷ್‌ ಶಿಕ್ಷಕರ ನೇಮಕ ಹಾಗೂ ನೀರಿನ ಸಮಸ್ಯೆ ನಿವಾರಿಸದರೆ ಇನ್ನಷ್ಟು ಅನುಕೂಲ ಆಗಲಿದೆ ಎನ್ನುತ್ತಾರೆ ಶಾಲಾ ಸಿಬ್ಬಂದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry