ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತೃಪೂರ್ಣ’ ಯೋಜನೆಗೆ ಅಡ್ಡ ಬಂದ ‘ಜಾತಿ

Last Updated 11 ಅಕ್ಟೋಬರ್ 2017, 6:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗರ್ಭಿಣಿಯರು ಮತ್ತು ಬಾಣಂತಿಯರನ್ನು ‘ಮಾತೃಪೂರ್ಣ’ ಯೋಜನೆಯ ಭೋಜನಕ್ಕೆ ಕರೆ ತರಲು ತಳ ಸಮುದಾಯದ ಕಾರ್ಯಕರ್ತೆ, ಸಹಾಯಕಿಯರು ಗೋಗರೆದರೂ ಜಾತಿಯ ಕಾರಣಕ್ಕಾಗಿ ಫಲಾನುಭವಿಗಳು ಅಂಗನವಾಡಿಗಳತ್ತ ತಲೆ ಹಾಕುತ್ತಿಲ್ಲ!

ಜಿಲ್ಲೆಯಲ್ಲಿ 1,961 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 350ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ  ‘ಜಾತಿ’ಯ ಕಾರಣಕ್ಕೆ ಫಲಾನುಭವಿಗಳು ಊಟಕ್ಕೆ ಬರುತ್ತಿಲ್ಲ ಎನ್ನಲಾಗಿದೆ. ಅಡುಗೆ ಮಾಡಿ ಫಲಾನುಭವಿಗಳಿಗೆ ಕಾದು ಕೊನೆಗೆ ತಿಪ್ಪೆಗೆ ಎಸೆಯುತ್ತಿರುವ ಕಾರಣ ಕೆಲವರು ‘ಮಾತೃಪೂರ್ಣ’ ಅಡುಗೆ ಸಿದ್ಧಪಡಿಸುವುದನ್ನೇ ಕೈ ಬಿಟ್ಟಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 365 ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು 343 ಪರಿಶಿಷ್ಟ ಪಂಗಡಕ್ಕೆ (ಎಸ್‌.ಟಿ) ಸೇರಿದವರು ಅಂಗನವಾಡಿಗಳಲ್ಲಿ ಕಾರ್ಯಕರ್ತೆ, ಸಹಾಯಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ವರ್ಗದ ಕಾರ್ಯಕರ್ತೆಯರು ಇರುವ ಅಂಗನವಾಡಿಗಳಲ್ಲಿ ಕನಿಷ್ಠ ನಾಲ್ಕೈದು ಫಲಾನುಭವಿಗಳಾದರೂ ಊಟಕ್ಕೆ ಬರುತ್ತಿದ್ದಾರೆ. ಆದರೆ ಎಸ್‌.ಸಿ ಮತ್ತು ಎಸ್‌ಟಿಯವರು ಇರುವ ಬಹುತೇಕ ಅಂಗನವಾಡಿಗಳಿಗೆ ಯಾರೂಬ್ಬರು ಬರುತ್ತಿಲ್ಲ.

’ಅನೇಕ ಕಡೆಗಳಲ್ಲಿ ಫಲಾನುಭವಿಗಳು ಈ ‘ಜಾತಿ ಕಾರಣ’ವನ್ನು ಮುಚ್ಚಿಟ್ಟು ಬೇರೆ ನೆಪಗಳನ್ನು ಹೇಳಿ ಊಟಕ್ಕೆ ಬರುತ್ತಿಲ್ಲ. ಇಂತಹ ಕಡೆಗಳೆಲ್ಲ ಬಹುಪಾಲು ಫಲಾನುಭವಿಗಳು ‘ನಮಗೆ ಮೊದಲಿನಂತೆ ಪೌಷ್ಟಿಕಾಂಶ ಪದಾರ್ಥಗಳ ಬ್ಯಾಗ್‌ ನೀಡಿ’ ಎಂದು ಒತ್ತಾಯಿಸುತ್ತಿದ್ದಾರೆ.

‘ನಮ್ಮ ಕೇಂದ್ರ ವ್ಯಾಪ್ತಿಯಲ್ಲಿ 15 ಫಲಾನುಭವಿಗಳಿದ್ದಾರೆ. ನಾನು ಮತ್ತು ಸಹಾಯಕಿ ಇಬ್ಬರೂ ಪರಿಶಿಷ್ಟ ಜಾತಿಗೆ ಸೇರಿದ್ದೇವೆ. ಆದ್ದರಿಂದ ಒಬ್ಬರೂ ಅಂಗನವಾಡಿಗೆ ಊಟಕ್ಕೆ ಬರುತ್ತಿಲ್ಲ. ಅಡುಗೆ ಮಾಡಿಟ್ಟು, ಸಂಜೆವರೆಗೆ ಕಾದು ನಂತರ ಅದನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ತೋರಿಸಿ ಆಚೆಗೆ ಹಾಕುತ್ತಿದ್ದೇವೆ’ ಎಂದು ತಾಲ್ಲೂಕಿನ ಚಿಕ್ಕಕಾಡಿಗೇನಹಳ್ಳಿ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಅಳಲು ತೋಡಿಕೊಂಡರು.

ಶ್ರೀರಾಮಪುರದ ಎರಡು ಅಂಗನವಾಡಿಗಳ ವ್ಯಾಪ್ತಿಯಲ್ಲಿ 22 ಫಲಾನುಭವಿಗಳು ಇದ್ದಾರೆ. ಈ ಎರಡೂ ಕೇಂದ್ರಗಳಲ್ಲಿ ಸಹಾಯಕಿಯರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಕಾರ್ಯಕರ್ತೆಯರು, ಸಹಾಯಕಿಯರು ಮನೆ ಮನೆಗೆ ತೆರಳಿ ದುಂಬಾಲು ಬಿದ್ದರೂ ಫಲಾನುಭವಿಗಳು ಊಟಕ್ಕೆ ಬರಲು ಒಪ್ಪುತ್ತಿಲ್ಲ.

‘ಅ.2 ರಂದು ಮಾತೃಪೂರ್ಣ ಯೋಜನೆಗೆ ಚಾಲನೆ ನೀಡುವಾಗ ಒಕ್ಕಲಿಗ ಸಮುದಾಯದ ಮಹಿಳೆಯೊಬ್ಬರ ಕೈಯಲ್ಲಿ ಅಡುಗೆ ಮಾಡಿಸಲಾಗಿತ್ತು. ಆ ದಿನ ಸಭೆಗೆ ಬಂದವರೆಲ್ಲ ಊಟ ಮಾಡಿದ್ದರು. ಆದರೆ ಮರು ದಿನದಿಂದ ಯಾರೊಬ್ಬರೂ ಬರುತ್ತಿಲ್ಲ. ಸಾಮಾನ್ಯ ವರ್ಗದ ಮಹಿಳೆಯರ ಕೈಯಿಂದ ಅಡುಗೆ ಮಾಡಿಸಿದರೂ ಫಲಾನುಭವಿಗಳು ಊಟ ನಿರಾಕರಿಸುತ್ತಿದ್ದಾರೆ’ ಎಂದು ಶ್ರೀರಾಮಪುರ ನಿವಾಸಿ ಚಂದ್ರಶೇಖರ್‌ ಹೇಳಿದರು.

‘ಉದ್ಘಾಟನೆ ದಿನ 7 ಫಲಾನುಭವಿಗಳು ಬಂದಿದ್ದರು. ಮರು ದಿನ ಒಬ್ಬ ಗರ್ಭಿಣಿ ಬಂದು ಊಟ ಮಾಡಿದ್ದರು. ಅವರು ಮನೆಗೆ ತೆರಳಿದಾಗ ಹೊಟ್ಟೆ ನೋವು ಎಂದು ಹೇಳಿದರು. ಅವರ ಮನೆಯವರು ಸಿಕ್ಕಾಪಟ್ಟೆ ಬೈದಿದ್ದಾರೆ. ಈಗ ಅವರೂ ಬರುತ್ತಿಲ್ಲ. ಈ ವಿಚಾರಗಳನ್ನೆಲ್ಲ ನಾವು ಸೂಪರ್‌ವೈಸರ್‌ ಗಮನಕ್ಕೆ ತಂದು ಸದ್ಯ ಅಡುಗೆ ಮಾಡುವುದನ್ನೇ ನಿಲ್ಲಿಸಿದ್ದೇವೆ’ ಎಂದು ಕುಪ್ಪಹಳ್ಳಿ ಅಂಗನವಾಡಿ ಕಾರ್ಯಕರ್ತೆ ತ್ರಿವೇಣಿ ತಿಳಿಸಿದರು.

‘ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಧ್ಯೇಯೋದ್ದೇಶಗಳನ್ನು ಮರೆತು ಇಂತಹ ಅವೈಜ್ಞಾನಿಕ ಯೋಜನೆ ಜಾರಿಗೊಳಿಸಲಾಗಿದೆ.  ಇದು ಜನಪರ ಯೋಜನೆಯಲ್ಲ’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳ ತಾಲ್ಲೂಕು ಘಟಕದ ಅಧ್ಯಕ್ಷೆ ಪಿ.ಎಸ್.ಗಾಯತ್ರಿದೇವಿ ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ, ಪಂಗಡದ ಕಾರ್ಯಕರ್ತೆಯರ ವಿವರ
ತಾಲ್ಲೂಕು ಎಸ್‌.ಸಿ         ಎಸ್‌.ಟಿ
ಚಿಕ್ಕಬಳ್ಳಾಪುರ 53         28
ಚಿಂತಾಮಣಿ 90            75
ಶಿಡ್ಲಘಟ್ಟ 45                35
ಗೌರಿಬಿದನೂರು 70       80
ಬಾಗೇಪಲ್ಲಿ 90             96
ಗುಡಿಬಂಡೆ 17             29
ಒಟ್ಟು 365                 343

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT