ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾಕ್ಕೆ ಸುರಳಿ ರೋಗ: ಆತಂಕ

Last Updated 11 ಅಕ್ಟೋಬರ್ 2017, 6:54 IST
ಅಕ್ಷರ ಗಾತ್ರ

ಡಂಬಳ: ಸತತ ಮಳೆ ಹಾಗೂ ಹೆಚ್ಚಿನ ತೇವಾಂಶದಿಂದ ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ ಆವರಿಸಿರುವ ಬೆನ್ನಲ್ಲೇ, ಹೋಬಳಿಯಲ್ಲಿ ಬಳ್ಳಿ ಶೇಂಗಾಕ್ಕೆ ಸುರಳಿ ಪಿಚ್ಚಿ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.

ಮುಂಗಾರಿನಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿ ಅನುಭವಿಸಿದ್ದ ರೈತರು, ಈಗ ಹಿಂಗಾರಿನಲ್ಲಿ ಅಧಿಕ ಮಳೆಯಿಂದಾಗಿ ಬೆಳೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಡಂಬಳ ಗ್ರಾಮದ ರೈತ ಮಳಪ್ಪ ಜೊಂಡಿ ಅವರು ಆರು ಎಕರೆ ಮಸಾರಿ ಜಮೀನಿನಲ್ಲಿ ಬಳ್ಳಿ ಶೇಂಗಾ ಬಿತ್ತನೆ ಮಾಡಿದ್ದು ಉತ್ತಮವಾಗಿ ಬೆಳೆ ಬಂದಿದೆ. ಇನ್ನೇನು ಎರಡು ತಿಂಗಳು ಕಳೆದರೆ ಕಟಾವು ಮಾಡಬಹುದಾಗಿದ್ದ ಶೇಂಗಾಕ್ಕೆ ಈಗ ಸುರಳಿ ಪಿಚ್ಚಿ ರೋಗ ಕಾಣಿಸಿಕೊಂಡಿದ್ದು, ಬೆಳೆ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

‘ಬಿತ್ತನೆ ಬೀಜ, ಗೊಬ್ಬರ, ಆಳಿನ ಖರ್ಚು ಸೇರಿ ಏಕರೆಗೆ ಅಂದಾಜು ₹ 20 ಸಾವಿರ ಖರ್ಚಾಗಿದೆ. ರೋಗ ನಿಯಂತ್ರಣಕ್ಕೆ ಬರದಿದ್ದರೆ ಸಂಪೂರ್ಣ ಬೆಳೆ ನಾಶವಾಗುತ್ತದೆ. ಹಾಕಿದ ಬಂಡವಾಳವೂ ಕೈಗೆ ಬರುವುದಿಲ್ಲ, ಏನು ಮಾಡಬೇಕೆಂದು ತೋಚದಾಗಿದೆ’ ಎಂದು ಮಳಪ್ಪ ಜೊಂಡಿ ಆತಂಕ ವ್ಯಕ್ತಪಡಿಸಿದರು.

ಡೋಣಿ, ಡೋಣಿತಾಂಡ, ಹಿರೇವಡ್ಡಟ್ಟಿ, ಹಾರೂಗೇರಿ, ಚಿಕ್ಕವಡ್ಡಟ್ಟಿ, ಗುಡ್ಡದಬೂದಿಹಾಳ, ಕೆಲೂರ, ಶಿಂಗಟಾರಾಯನಕೇರಿ ತಾಂಡ ಸೇರಿದಂತೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದ ಬಳ್ಳಿ ಶೇಂಗಾಕ್ಕೆ ಈ ರೋಗ ವ್ಯಾಪಿಸಿದೆ. ಸುರಳಿ ಪಿಚ್ಚಿ ರೋಗದಿಂದಾಗಿ, ಬಳ್ಳಿಗಳು ಬಾಡುತ್ತಿದ್ದು, 50ರಿಂದ 70 ಕಾಯಿ ಬಿಡಬೇಕಾಗಿದ್ದ ಶೇಂಗಾ ಬಳ್ಳಿಯಲ್ಲಿ ಕೇವಲ 20ರಿಂದ 25 ಕಾಯಿ ಮಾತ್ರ ಇದೆ. ಎಲೆ ಒಣಗಿ ಒಂದೊಂದಾಗಿ ಉದುರುತ್ತಿದೆ.

‘ಬಳ್ಳಿ ಶೇಂಗಾಕ್ಕೆ ಈ ರೋಗ ತಗುಲಿದರೆ, ಬೆಳೆ ಹೋಗಲಿ, ಜಾನುವಾರುಗಳಿಗೆ ಮೇವು ಸಹಿತ ಉಳಿಯುವುದಿಲ್ಲ. ಎಲೆಗಳೆಲ್ಲಾ ಒಣಗಿ ಉದುರಿ ಹೋಗುತ್ತವೆ’ ಎಂದು ಈ ಪ್ರದೇಶಗಳಲ್ಲಿ ಶೇಂಗಾ ಬಿತ್ತನೆ ಮಾಡಿದ್ದ ರೈತರು ಬೇಸರ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳಿಂದ ಸತತ ಬರಕ್ಕೆ ತುತ್ತಾಗಿದ್ದ ರೈತರು, ಈ ಬಾರಿ ಉತ್ತಮ ಹಿಂಗಾರು ಮಳೆ ಲಭಿಸಿದ್ದರಿಂದ ಬ್ಯಾಂಕ್ ಹಾಗೂ ಕೈಲ ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿದ್ದರು. ಆದರೆ, ರೋಗ ತಗುಲಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT