ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ್ದ ತಲ್ಲೂರು ಕೆರೆ ಬಹುತೇಕ ಭರ್ತಿ: ಮರುಕಳಿಸಿದ ಜೀವಕಳೆ

Last Updated 11 ಅಕ್ಟೋಬರ್ 2017, 7:42 IST
ಅಕ್ಷರ ಗಾತ್ರ

ಕುಷ್ಟಗಿ: ವರ್ಷದ ಹಿಂದೆ ಹೂಳು ತುಂಬಿ, ಕುರುಚಲು ಗಿಡಗಳಿಂದ ಕೂಡಿದ್ದ ಯಲಬುರ್ಗಾ ತಾಲ್ಲೂಕಿನ ತಲ್ಲೂರು ಕೆರೆ ಬಹುತೇಕ ಭರ್ತಿಯಾಗಿದೆ. ಕೆರೆಯಲ್ಲಿ ಸ್ಪಾಟ್‌ಬಿಲ್ ಡಕ್ ಪಕ್ಷಿಗಳು ಸೇರಿದಂತೆ ಇತರ ಪಕ್ಷಿಗಳ ಕಲರವ ಮನೆ ಮಾಡಿದ್ದು, ದನಗಾಹಿಗಳು ಕರೆ ದಂಡೆಯಲ್ಲಿ ನೀರಾಟ ಆಡಿ ಪುಳಕಗೊಳ್ಳುತ್ತಿದ್ದಾರೆ.

96 ಎಕರೆ ವಿಸ್ತೀರ್ಣದ ಕೆರೆಯಲ್ಲಿ ₹60-70 ಲಕ್ಷ ವೆಚ್ಚದಲ್ಲಿ ಸುಮಾರು 20 ಎಕರೆಯಲ್ಲಿ ಹೂಳು ತೆಗೆಯಲಾಗಿದೆ. ಅದರಲ್ಲಿ ಅಂದಾಜು 12 ಎಕರೆ ಪ್ರದೇಶದಲ್ಲಿ (ಕೆರೆ ಮಧ್ಯೆ) 8-12 ಅಡಿ ಆಳದವರೆಗೆ ಹೂಳು ತೆಗೆಯಲಾಗಿದೆ.

ಎರಡು ತಿಂಗಳಿನಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೆರೆ ಭರ್ತಿಯಾಗುತ್ತಿರುವುದು ‘ಯಶೋಮಾರ್ಗ ಫೌಂಡೇಷನ್‌’ ಪ್ರಯತ್ನಕ್ಕೆ ದೊರೆತ ಫಲ ಎಂದು ರೈತರು ಹೇಳುತ್ತಾರೆ.

ಹಿಂಗಾರು ಹಂಗಾಮಿನಲ್ಲಿ ಈ ಭಾಗದಲ್ಲಿ ಉತ್ತಮವಾಗಿ ಮಳೆಯಾಗಿದೆ. ಸುತ್ತಲಿನ ಹಳ್ಳ, ತೊರೆಗಳ ನೀರು ತಲ್ಲೂರು ಕೆರೆ ಸೇರುತ್ತಿದೆ. ಇನ್ನು ಒಂದೆರಡು ಮಳೆಯಾದರೆ ಕೆರೆ ಕೋಡಿ ಬೀಳುತ್ತದೆ ಎಂಬ ವಿಶ್ವಾಸ ಜಲಕಾರ್ಯಕರ್ತ ವೀರಣ್ಣ ತೋಟದ ಅವರದ್ದು.

ಕೆರೆಯಲ್ಲಿ ಸದ್ಯ ಶೇಕಡ 80ರಷ್ಟು ನೀರು ಸಂಗ್ರಹವಾಗಿದೆ. ಹೂಳು ತೆಗೆಯದಿದ್ದರೆ ಅಲ್ಪಪ್ರಮಾಣದಲ್ಲಿ ನೀರು ನಿಂತು, ಕೋಡಿ ಮೂಲಕ ಹರಿದು ಪೋಲಾಗುತ್ತಿತ್ತು. ಸಂಗ್ರಹವಾಗಿರುವ ನೀರಿಗಿಂತ ಎರಡು–ಮೂರು ಪಟ್ಟು ನೀರು ಅಂತರ್ಜಲ ಸೇರಿದೆ. ಸುತ್ತಲಿನ ಕೊಳವೆಬಾವಿಗಳಲ್ಲಿ ಜೀವಸೆಲೆ ಬಂದಿದೆ. ಇನ್ನೂ ಮೂರು ವರ್ಷಗಳವರೆಗೆ ಕೆರೆಯಲ್ಲಿ ನೀರು ಇರುತ್ತದೆ’ ಎನ್ನುತ್ತಾರೆ ಹೂಳು ತೆಗೆಯುವ ಉಸ್ತುವಾರಿಯಲ್ಲಿ ಒಬ್ಬರಾದ ಜಲಕಾರ್ಯಕರ್ತ ರಮೇಶ ಬಳೂಟಗಿ.

‘ಯಶ್ ಅವರ ಪ್ರಯತ್ನದ ಫಲವಾಗಿ ನಮ್ಮೂರ ಕೆರೆಗೆ ಜೀವಕಳೆ ಬಂದಿದೆ. ಬತ್ತಿದ್ದ ಕೊಳವೆಬಾವಿಗಳಲ್ಲಿ ನೀರು ಬಂದಿದೆ’ ಎಂದು ಮದ್ಲೂರು, ತಲ್ಲೂರು ಗ್ರಾಮಗಳ ಕೆಲ ರೈತರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು. ಚಿತ್ರನಟ ಯಶ್ ಅವರ ‘ಯಶೋಮಾರ್ಗ’ ಫೌಂಡೇಶನ್ ಕೆರೆ ಹೂಳೆತ್ತಲು ತಲ್ಲೂರು ಕೆರೆಯನ್ನು ಆಯ್ಕೆಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT