ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹28 ಕೋಟಿ ವೆಚ್ಚಕ್ಕೆ ಆರ್ಥಿಕ ಇಲಾಖೆ ಆಕ್ಷೇಪ?

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಆಚರಣೆ ವಿಷಯ ವಿಧಾನಸಭಾ ಸಚಿವಾಲಯ ಮತ್ತು ಸಚಿವ ಸಂಪುಟದ ಮಧ್ಯೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಪರಸ್ಪರ ಸಂಘರ್ಷಕ್ಕೆ ಕಾರಣವಾಗಿದೆ.

ವಜ್ರ ಮಹೋತ್ಸವ ಇದೇ 25 ಮತ್ತು 26ರಂದು ಎರಡು ದಿನ ನಡೆಯಲಿದ್ದು, ಕಾರ್ಯಕ್ರಮಕ್ಕೆ ₹ 28 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ವಿಧಾನಸಭೆ ಸಚಿವಾಲಯ ನೇರವಾಗಿ ಆರ್ಥಿಕ ಇಲಾಖೆಗೆ ಕಳುಹಿಸಿದೆ. ಆದರೆ, ಆರ್ಥಿಕ ಇಲಾಖೆ ಈಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮಧ್ಯೆ, ಜಂಟಿ ಅಧಿವೇಶನ ಕರೆಯಲು ಸಚಿವ ಸಂಪುಟ ಸಭೆಯ ಒಪ್ಪಿಗೆಯನ್ನೇ ಪಡೆದಿಲ್ಲ. ಅದಕ್ಕೂ ಮೊದಲೇ ಕೋಳಿವಾಡ ಮತ್ತು ಶಂಕರಮೂರ್ತಿ ತಾವಾಗಿಯೇ ನಿರ್ಧಾರ ಕೈಗೊಂಡು ರಾಷ್ಟ್ರಪತಿ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಾರ್ಯಕ್ರಮದ ಅಂದಾಜು ವೆಚ್ಚ ಕುರಿತು ಸಲ್ಲಿಕೆಯಾದ ಪ್ರಸ್ತಾವನೆ ಸಂಬಂಧ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌,  ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಮಾಮೋಚನೆ ನಡೆಸಿದ್ದಾರೆ. ಆದರೆ, 10 ದಿನಗಳ ಅಧಿವೇಶನಕ್ಕೆ ₹ 7 ಕೋಟಿಯಿಂದ ₹ 8 ಕೋಟಿಯಷ್ಟು ಮಾತ್ರ ವೆಚ್ಚವಾಗುತ್ತದೆ. ಹೀಗಿರುವಾಗ 2 ದಿನಗಳ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಮೊತ್ತ ಅಗತ್ಯವಿದೆಯೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.

‘ವಜ್ರಮಹೋತ್ಸವ ಕುರಿತು ಬುಧವಾರ ನಡೆದ ಸಂಪುಟ ಸಭೆಯಲ್ಲೂ ಅನೌಪಚಾರಿಕವಾಗಿ ಚರ್ಚೆಯಾಗಿದೆ. ಕಾರ್ಯಕ್ರಮ ಆಯೋಜಿಸುವ ವಿಷಯದಲ್ಲಿ ಕೋಳಿವಾಡ ಮತ್ತು ಡಿ.ಎಚ್‌. ಶಂಕರಮೂರ್ತಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಕೆಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು’ ಎಂದು ಮೂಲಗಳು ಹೇಳಿವೆ.

ಆದರೆ, ಸಾಂಪ್ರದಾಯಿಕವಾಗಿ ಜಂಟಿ ಅಧಿವೇಶನ ಕರೆಯಲು ಸಚಿವ ಸಂಪುಟದ ಒಪ್ಪಿಗೆ ಅಗತ್ಯ ಇಲ್ಲ. ಸಭಾಧ್ಯಕ್ಷರು ಮತ್ತು ಸಭಾಪತಿ ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳಬಹುದು ಎಂದು ವಿಧಾನಸಭಾ ಸಚಿವಾಲಯದ ಮೂಲಗಳು ತಿಳಿಸಿವೆ.

ಸಚಿವಾಲಯದ ಅಧಿಕಾರಿಗಳನ್ನು ಹೊರಗಿಟ್ಟು ಬೆರಳೆಣಿಕೆಯಷ್ಟು ಮಂದಿ ವಜ್ರಮಹೋತ್ಸವ ಹೆಸರಿನಲ್ಲಿ ಕಾರುಬಾರು ನಡೆಸುತ್ತಿದ್ದಾರೆ ಎಂಬ ಆಕ್ಷೇಪಗಳೂ ವಿಧಾನಸೌಧದಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT