ಶೇ 80ರಷ್ಟು ಕಾಲೇಜುಗಳಲ್ಲಿ ಮೂಲಸೌಕರ್ಯವೇ ಇಲ್ಲ

ಶುಕ್ರವಾರ, ಮೇ 24, 2019
28 °C

ಶೇ 80ರಷ್ಟು ಕಾಲೇಜುಗಳಲ್ಲಿ ಮೂಲಸೌಕರ್ಯವೇ ಇಲ್ಲ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಮಾನ್ಯತೆ ಪಡೆದಿರುವ ಶೇ 80ರಷ್ಟು ಕಾಲೇಜುಗಳಲ್ಲಿ ಅಗತ್ಯ ಮೂಲಸೌಕರ್ಯವಿಲ್ಲದೆ, ಯುಜಿಸಿ ಮಾನ್ಯತೆಯಿಂದ ಹೊರಗುಳಿದಿವೆ.

‘ಯುಜಿಸಿಯಿಂದ 2 (ಎಫ್‌), 12 (ಬಿ) ಹಾಗೂ ನ್ಯಾಕ್‌ ಮಾನ್ಯತೆ ನೀಡಲಾಗುತ್ತದೆ. ಇದರಲ್ಲಿ 12 (ಬಿ) ಮಾನ್ಯತೆ ಇಲ್ಲದ ಕಾಲೇಜಿಗೆ ಸಂಶೋಧನಾ ಅನುದಾನ ಹಾಗೂ ಪ್ರಾಧ್ಯಾಪಕರಿಗೆ ಬೋಧನಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಜರಾಗಲು ಅವಕಾಶ ಇರುವುದಿಲ್ಲ. ಹಾಗಾಗಿ ಕಾಲೇಜು ಅಭಿವೃದ್ಧಿ ಪರಿಷತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕ ಪ್ರೊ. ವಿ.ನಾಗೇಶ್‌ ಬೆಟ್ಟಕೋಟೆ ತಿಳಿಸಿದರು.

‘ಯುಜಿಸಿ ಮಾನ್ಯತೆ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ, ಬೋಧಕರಿಗೆ ಏನೆಲ್ಲ ಅನುಕೂಲವಾಗುತ್ತದೆ, ಮಾನ್ಯತೆ ಪಡೆಯಲು ಯಾವ ರೀತಿ ಅಭಿವೃದ್ಧಿ ಕೈಗೊಳ್ಳಬೇಕು ಎಂದು ತಿಳಿಸಲು ಪರಿಷತ್ತಿನ ವತಿಯಿಂದ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದೇವೆ.’

‘ಇದೇ ಮೊದಲ ಬಾರಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದ್ದೇವೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ತರಬೇತಿ ನಡೆಸಲು ಉದ್ದೇಶಿಸಿದ್ದೇವೆ. ಒಟ್ಟು 400 ಜನರಿಗೆ ತರಬೇತಿ ನೀಡುವ ಯೋಜನೆ ಇದೆ. ಪ್ರಾಂಶುಪಾಲರಿಗೆ ಈ ತರಬೇತಿ ಇರುತ್ತದೆ. ಮೊದಲು

ನೋಂದಣಿ ಮಾಡಿಕೊಂಡವರಿಗೆ ಅವಕಾಶ ನೀಡುತ್ತೇವೆ’ ಎಂದು ತಿಳಿಸಿದರು.

‘ಒಂದು ಕಾಲೇಜಿಗೆ ಯುಜಿಸಿ ಮಾನ್ಯತೆ ದೊರೆಯಬೇಕಾದರೆ, ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಅನುಪಾತ ಸರಿಯಾಗಿರಬೇಕು. ಹಾಜರಾತಿ ಇರಬೇಕು. ಲೈಂಗಿಕ ಕಿರುಕುಳ ತಡೆ ಘಟಕ, ಕಾಯಂ ಬೋಧಕ ಸಿಬ್ಬಂದಿ, ಉತ್ತಮ ಕಟ್ಟಡ, ಶೌಚಾಲಯ ವ್ಯವಸ್ಥೆಗಳು ಸರಿಯಾಗಿ ಇರಬೇಕು. ಇವುಗಳನ್ನು ಪರಿಶೀಲಿಸಿ ಉತ್ತಮ ಕಾಲೇಜುಗಳನ್ನು ಯುಜಿಸಿ ಮಾನ್ಯತೆಗೆ ಶಿಫಾರಸು ಮಾಡುತ್ತೇವೆ. ಕಾಲೇಜು ಮತ್ತು ಯುಜಿಸಿ ನಡುವೆ ಕೊಂಡಿಯಾಗಿ ಕಾಲೇಜು ಅಭಿವೃದ್ಧಿ ಪರಿಷತ್ತು ಕಾರ್ಯ ನಿರ್ವಹಿಸುತ್ತದೆ’ ಎಂದು ವಿವರಿಸಿದರು.

‘ಖಾಸಗಿ ಕಾಲೇಜುಗಳು ಹಣ ಪಡೆಯುವುದು ಹೇಗೆ ಎಂದು ಯೋಚಿಸುತ್ತಿವೆಯೇ ಹೊರತು ಸೌಕರ್ಯ ಒದಗಿಸುವ ಕಾಳಜಿ ಹೊಂದಿಲ್ಲ. ಇದರಿಂದ ಶೇ 80ರಷ್ಟು ಖಾಸಗಿ ಕಾಲೇಜುಗಳು ಯುಜಿಸಿ ಮಾನ್ಯತೆ ಪಡೆದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರು ಇಲ್ಲದೆ, ಆಡಳಿತಾತ್ಮಕ ವಿಚಾರಗಳಲ್ಲೇ ಸಿಬ್ಬಂದಿ ಮುಳುಗಿ ಹೋಗಿದ್ದಾರೆ. ಹಾಗಾಗಿ ಸಾಕಷ್ಟು ಸರ್ಕಾರಿ ಕಾಲೇಜುಗಳು ಯುಜಿಸಿ ಅನುದಾನ ವಂಚಿತವಾಗಿವೆ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಎರಡು ಕಾಲೇಜುಗಳ ಮಾನ್ಯತೆ ರದ್ದು: 2016–17ನೇ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಎರಡು ಕಾಲೇಜುಗಳ ಮಾನ್ಯತೆರದ್ದು ಮಾಡಿದೆ. ಮೇನಲ್ಲಿ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಬಿಟಿಎಂ ಕಾಲೇಜಿನ ಮಾನ್ಯತೆ ರದ್ದುಪಡಿಸಲು ತೀರ್ಮಾನಿಸಲಾಗಿತ್ತು. ‘ಇತ್ತೀಚೆಗೆ ಮತ್ತೊಂದು ಬಿ.ಇಡಿ ಕಾಲೇಜು ಮಾನ್ಯತೆ ನವೀಕರಿಸಲು ಅರ್ಜಿ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ನಂತರ ಅದರ ಮಾನ್ಯತೆಯನ್ನು ರದ್ದುಪಡಿಸಲಾಗಿದೆ’ ಎಂದು ಸಿಂಡಿಕೇಟ್‌ ಸದಸ್ಯರೊಬ್ಬರು ತಿಳಿಸಿದರು.

ಒಂದು ಸರ್ಕಾರಿ ಕಾಲೇಜಿಗೆ ಎ+ ಮಾನ್ಯತೆ

ನಗರದಲ್ಲಿರುವ ಒಟ್ಟು 20 ಸರ್ಕಾರಿ, 4 ಬಿಬಿಎಂಪಿ ಹಾಗೂ 30 ಅನುದಾನಿತ ಕಾಲೇಜುಗಳ ಪೈಕಿ ಒಂದು ಸರ್ಕಾರಿ ಕಾಲೇಜಿಗೆ ಎ+ನ್ಯಾಕ್‌ ಮಾನ್ಯತೆ ದೊರೆತಿದೆ. 596 ಖಾಸಗಿ ಕಾಲೇಜುಗಳ ಪೈಕಿ 117 ಕಾಲೇಜುಗಳಿಗೆ ಯುಜಿಸಿ ಮಾನ್ಯತೆ ದೊರಕಿದೆ.

ಬಿ.ಇಡಿ, ದೈಹಿಕ ಶಿಕ್ಷಣ ಮತ್ತು ಪದವಿ ಕಾಲೇಜುಗಳು ಸೇರಿ ಒಟ್ಟು 650 ಕಾಲೇಜುಗಳು ಬೆಂಗಳೂರು ವಿಶ್ವವಿದ್ಯಾಲಯದಡಿ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry