ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಜಯದ ಮೇಲೆ ವಿರಾಟ್–ವಾರ್ನರ್ ಕಣ್ಣು

‘ಮುತ್ತಿನ ನಗರಿ’ಯಲ್ಲಿ ರೋಚಕ ಹಣಾಹಣಿ ನಿರೀಕ್ಷೆ: ಹೈದರಾಬಾದ್‌ನಲ್ಲಿ ಮೊದಲ ಪಂದ್ಯ
Last Updated 13 ಅಕ್ಟೋಬರ್ 2017, 15:30 IST
ಅಕ್ಷರ ಗಾತ್ರ

ಹೈದರಾಬಾದ್‌: ಗುವಾಹಟಿಯ ಸೋಲಿಗೆ ತಿರುಗೇಟು ನೀಡಲು ಕಾತರಾಗಿರುವ ಭಾರತ ತಂಡದ ಆಟಗಾರರು ಶುಕ್ರವಾರ ಆಸ್ಟ್ರೇಲಿಯಾ ಎದುರಿನ ನಿರ್ಣಾಯಕ ಟ್ವೆಂಟಿ– 20 ಪಂದ್ಯದಲ್ಲಿ ಜಯದ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.

1–1ರಲ್ಲಿ ಸಮಬಲವಾಗಿರುವ ಸರಣಿಯನ್ನು ಜಯಿಸುವ ತಂಡ ಯಾವುದು ಎಂಬ ಕುತೂಹಲಕ್ಕೆ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ತೆರೆಬೀಳಲಿದೆ. ಗುವಾಹಟಿಯ ಹೊಸ ಅಂಗಳದಲ್ಲಿ ಭಾರತ ತಂಡ ಎಡವಿತ್ತು. ಆ ಪಂದ್ಯದಲ್ಲಿ ಆತಿಥೇಯ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕಳಪೆ ಸಾಮರ್ಥ್ಯ ತೋರಿತ್ತು.

ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ ಬಳಿಕ ಜಿದ್ದಿಗೆ ಬಿದ್ದವರಂತೆ ಮಧ್ಯಮ ಕ್ರಮಾಂಕದ ಆಟಗಾರರು ಕೂಡ ಪೆವಿಲಿಯನ್ ಸೇರಿದ್ದರು. ವಿರಾಟ್ ಕೊಹ್ಲಿ ಟ್ವೆಂಟಿ–20 ಮಾದರಿಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಸೊನ್ನೆ ಸುತ್ತಿದ್ದರು. ಮಹೇಂದ್ರ ಸಿಂಗ್ ದೋನಿ ಕೂಡ ಮೊದಲ ಬಾರಿಗೆ ಸ್ಟಂಪ್ಡ್ ಆಗಿದ್ದರು. ಕೇದಾರ್ ಜಾಧವ್ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಅಲ್ಪಮಟ್ಟಿಗೆ ಚೇತರಿಕೆ ನೀಡಿದ್ದರು.

ಪಂದ್ಯದಲ್ಲಿ ಬೌಲರ್‌ಗಳ ಸಾಧನೆ ಕೂಡ ಅಷ್ಟಕಷ್ಟೇ ಇತ್ತು.  ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್‌ ಕೂಡ ಪರಿಣಾಮಕಾರಿಯಾಗಿರಲಿಲ್ಲ. ಮೊಸೆಸ್ ಹೆನ್ರಿಕ್ಸ್‌ (62) ಹಾಗೂ ಟ್ರಾವಿಸ್ ಹೆಡ್‌ (48) ಅವರ ಆಟವನ್ನು ತಡೆಯಲು ಭಾರತದ ಬೌಲರ್‌ಗಳು ವಿಫಲರಾಗಿದ್ದರು. ಈ ಜೋಡಿ ಮೂರನೇ ವಿಕೆಟ್ ಜತೆಯಾಟದಲ್ಲಿ 109 ರನ್ ಕಲೆಹಾಕಿತ್ತು. ಆದರೆ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದ ಜಸ್‌ಪ್ರೀತ್‌ ಬೂಮ್ರಾ ಸಮಾಧಾನಕರ ಸಾಧನೆ ಮಾಡಿದ್ದರು.

ಎಂಟು ವಿಕೆಟ್‌ಗಳಿಂದ ಎರಡನೇ ಪಂದ್ಯ ಗೆದ್ದುಕೊಂಡಿದ್ದ ಆಸ್ಟ್ರೇಲಿಯಾ ತಂಡ ವಿಶ್ವಾಸದ ಬುಗ್ಗೆಯಾಗಿದೆ. ಏಕದಿನ ಸರಣಿಯ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ವಾರ್ನರ್ ಬಳಗಕ್ಕೆ ಸಿಕ್ಕಿರುವ ಅವಕಾಶ ಇದಾಗಿದೆ. ಮೊದಲ ಪಂದ್ಯದಲ್ಲಿ ಆ್ಯರನ್ ಫಿಂಚ್ ಅಂಗಳದಲ್ಲಿ ಮಿಂಚು ಹರಿಸಿದ್ದರು. ತಂಡದ ಪರ ಅವರು ಏಕಾಂಗಿ ಹೋರಾಟ ನಡೆಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಹೆನ್ರಿಕ್ಸ್ ಹಾಗೂ ಟ್ರಾವಿಸ್ ಬ್ಯಾಟಿಂಗ್ ಶಕ್ತಿಗೆ ಬಲ ತುಂಬಿದ್ದರು.

ಏಕದಿನ ಪಂದ್ಯಗಳಲ್ಲಿ ಮಿಂಚಿದ್ದ ನೇಥನ್ ಕಾಲ್ಟರ್ ನೈಲ್‌ ಟ್ವೆಂಟಿ–20ಯ ಎರಡೂ ಪಂದ್ಯಗಳಿಂದ ಕೇವಲ ಎರಡು ವಿಕೆಟ್ ಮಾತ್ರ ಕಬಳಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಜೇಸನ್ ಬೆನ್‌ ಡ್ರಾಫ್‌ 21 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿ ಭಾರತ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದರು. ಅಂಗಳದಲ್ಲಿ ಮೋಡಿ ಮಾಡಿದ್ದ ಅವರು ಆಸ್ಟ್ರೇಲಿಯಾ ತಂಡಕ್ಕೆ ಜಯದ ಕಾಣಿಕೆ ನೀಡಿದರು. ಅಲ್ಲದೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.

ಭಾರತಕ್ಕೆ ತವರಿನಲ್ಲಿ ಟ್ವೆಂಟಿ –20 ಸರಣಿ ಗೆಲುವು ಪ್ರತಿಷ್ಠೆಯ ಪ್ರಶ್ನೆ ಆಗಿದೆ. ಈ ಪಂದ್ಯ ಗೆಲ್ಲಲು ನಾಯಕ ಕೊಹ್ಲಿ ಶತಾಯಗತಾಯ ಪ್ರಯತ್ನ ಮಾಡುವುದು ಖಚಿತ. ಆದ್ದರಿಂದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಬೌಲಿಂಗ್‌ ವಿಭಾಗದಲ್ಲಿ ಅಕ್ಷರ್ ಪಟೇಲ್‌ಗೆ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಶೀಘ್ರದಲ್ಲಿಯೇ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿರುವ ಎಡಗೈ ಮಧ್ಯಮವೇಗಿ ಆಶಿಶ್ ನೆಹ್ರಾ ಅವರಿಗೂ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಹಿಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಿ ವಿಶ್ವಾಸದಲ್ಲಿರುವ ಹನ್ನೊಂದರ ಬಳಗವನ್ನೇ ಆಸ್ಟ್ರೇಲಿಯಾ ಮುಂದುವರಿಸುವ ಸಾಧ್ಯತೆ ಇದೆ.

ಪಿಚ್‌ ವಿವರ
ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣ ಬ್ಯಾಟಿಂಗ್‌ಗೆ ಹೆಚ್ಚು ನೆರವು ನೀಡಲಿದೆ. ಈ ಅಂಗಳದಲ್ಲಿ ಪ್ರಬಲ ತಂಡಗಳು ಸೆಣಸಲಿರುವ ಕಾರಣ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಇಲ್ಲಿ ನಡೆದಿದ್ದ ಐಪಿಎಲ್‌ ಪಂದ್ಯಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಆಡಿದ್ದರು. ಆದರೆ ಮೊದಲ ಬಾರಿಗೆ ಇಲ್ಲಿ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ನಡೆಯಲಿದೆ.

ಮಳೆ ಅಡ್ಡಿ
ಹೈದರಾಬಾದ್‌ನಲ್ಲಿಯೂ ಕೆಲ ದಿನಗಳಿಂದ ಮಳೆಯಾಗುತ್ತಿರುವ ಕಾರಣ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ.‌

ಟಾಸ್‌ ನಿರ್ಣಾಯಕ
ಆಸ್ಟ್ರೇಲಿಯಾ ಎದುರು ಟಾಸ್ ಜಯಿಸಿದ ಬಹುತೇಕ ಏಕದಿನ ಹಾಗೂ ಟಿ–20 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡಕ್ಕೆ ಅಂತಿಮ ಪಂದ್ಯದಲ್ಲೂ ಟಾಸ್ ನಿರ್ಣಾಯಕ ಎನಿಸಿದೆ.

ತಂಡಗಳು ಇಂತಿವೆ: ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್ ಶರ್ಮಾ, ಮನೀಷ್ ಪಾಂಡೆ, ಮಹೇಂದ್ರ ಸಿಂಗ್‌ ದೋನಿ, ಕೇದಾರ್ ಜಾಧವ್‌, ಹಾರ್ದಿಕ್ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಕುಲ್‌ದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಆಶಿಶ್ ನೆಹ್ರಾ, ದಿನೇಶ್ ಕಾರ್ತಿಕ್‌, ಕೆ.ಎಲ್. ರಾಹುಲ್‌, ಅಕ್ಷರ್ ಪಟೇಲ್‌

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್‌ (ನಾಯಕ), ಜೇಸನ್ ಬೆನ್‌ ಡ್ರಾಫ್‌, ಡಾನ್ ಕ್ರಿಶ್ಚಿಯನ್‌, ನೇಥನ್ ಕಾಲ್ಟರ್ ನೈಲ್‌ , ಆ್ಯರನ್ ಫಿಂಚ್‌, ಟ್ರಾವಿಸ್ ಹೆಡ್‌, ಮೊಸೆಸ್‌ ಹೆರ್ನಿಕ್ಸ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಟಿಮ್ ಪೇನ್, ಕೇನ್ ರಿಚರ್ಡ್ಸ್‌ನ್‌, ಆ್ಯಡಮ್ ಜಂಪಾ, ಮಾರ್ಕಸ್‌ ಸ್ಟೋನಿಸ್‌, ಆ್ಯಂಡ್ರೂ ಟೈ.

ಪಂದ್ಯ ಆರಂಭ: ಸಂಜೆ 7.00.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

*
‘ದೆಹಲಿಯಲ್ಲಿ ನಡೆಯುವ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಪಂದ್ಯದ ವೇಳೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ನಾನು ಇದೇ ಅಂಗಳದಲ್ಲಿ ಮೊದಲ ರಣಜಿ ಪಂದ್ಯ ಆಡಿದ ನೆನಪುಗಳು ಇವೆ’.
–ಆಶಿಶ್‌ ನೆಹ್ರಾ,
ಭಾರತ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT