ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿ– ಕಾನೂನಿಗೆ ತಿದ್ದುಪಡಿ ಅವಶ್ಯ

Last Updated 12 ಅಕ್ಟೋಬರ್ 2017, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕಳಪೆ ಕಾಮಗಾರಿಯಿಂದ ರಸ್ತೆ ಗುಂಡಿಬಿದ್ದು ಅಪಘಾತ ಸಂಭವಿಸಿ, ಜನರು ಮೃತಪಟ್ಟರೆ ಗುತ್ತಿಗೆದಾರರ ವಿರುದ್ಧವೂ ಕ್ರಮ ಕೈಗೊಳ್ಳಲು ಕಾನೂನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ’ ಎಂದು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತೆ ಡಿ.ರೂಪಾ ಅಭಿಪ್ರಾಯಪಟ್ಟರು.

ಕೆಂಗೇರಿ ಸಮೀಪದ ಆರ್.ವಿ.ತಾಂತ್ರಿಕ ಕಾಲೇಜು ಮತ್ತು ರಾಜ್ಯ ರಸ್ತೆ ಸುರಕ್ಷತೆ ವಿಭಾಗ ನಗರದಲ್ಲಿ ಗುರುವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ರಸ್ತೆ ಗುಂಡಿಯಿಂದ ಅಪಘಾತಕ್ಕೀಡಾಗಿ ಜನರು ಜೀವ ಕಳೆದುಕೊಂಡರೆ, ಸದ್ಯದ ಕಾನೂನಿನಲ್ಲಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕಾನೂನಿಗೆ ತಿದ್ದುಪಡಿ ತಂದು, ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ’ ಎಂದರು.

‘ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ವಾಹನ ಪಾರ್ಕಿಂಗ್‌ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಜತೆಗೆ ಸಂಚಾರ ಒತ್ತಡದಿಂದ ಮುಕ್ತರಾಗಬಹುದು. ಯುವ ಸಮೂಹ ಸಂಚಾರ ನಿಯಮ ಪಾಲಿಸುವ ಮೂಲಕ, ಅಪಘಾತ ತಡೆಗೆ ಕೈಜೋಡಿಸಬೇಕು’ ಎಂದರು.

ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ಡಿಜಿಪಿ ರೂಪ್‌ ಕುಮಾರ್ ದತ್ತ, ‘ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿ, ವಾಹನ ಚಲಾಯಿಸಿದಾಗ ಅಪಘಾತ ತಡೆಗಟ್ಟಬಹುದು. ಅಪಘಾತ ತಡೆಗಾಗಿ ರೂಪಿಸಿರುವ ತಾಂತ್ರಿಕ ವಿಭಾಗ, ಕಾನೂನು ಅರಿವು ಅನುಷ್ಠಾನ ಮಂಡಳಿ ಹಾಗೂ ರಸ್ತೆ ಸುರಕ್ಷತೆಯ ಜಾಗೃತಿ ಶಿಕ್ಷಣ ವಿಭಾಗವು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಅಪಘಾತ ಪ್ರಮಾಣ ಗಣನೀಯವಾಗಿ ತಗ್ಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಚಾರ ನಿಯಮ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ರಾಜ್ಯ ರಸ್ತೆ ಸುರಕ್ಷತೆ ವಿಭಾಗದ ನಿರ್ದೇಶಕ ನರೇಂದ್ರ ಹೋಳ್ಕರ್, ಎಸಿಇ ಚಾಲನಾ ಹಾಗೂ ರಸ್ತೆ ಸುರಕ್ಷತಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಶುತೋಷ್ ಆತ್ರೆ, ಪ್ರಾಂಶುಪಾಲ ಡಾ. ಕೆ.ಎನ್.ಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT