ಶನಿವಾರ, ಸೆಪ್ಟೆಂಬರ್ 21, 2019
24 °C

ಚೆಕ್‌ಡ್ಯಾಂನಲ್ಲಿ ಕೊಚ್ಚಿಹೋದ ಆಟೊ ಚಾಲಕ

Published:
Updated:
ಚೆಕ್‌ಡ್ಯಾಂನಲ್ಲಿ ಕೊಚ್ಚಿಹೋದ ಆಟೊ ಚಾಲಕ

ಕನಕಪುರ: ತಾಲ್ಲೂಕಿನಲ್ಲಿ ಬುಧವಾರ ಧಾರಾಕಾರ ಮಳೆ ಸುರಿದಿದ್ದು, ಈ ವೇಳೆ ಕಗ್ಗಲಹಳ್ಳಿಯ ಏಡುಮಡು ಚೆಕ್‌ಡ್ಯಾಂನಲ್ಲಿ ಆಟೊ ಚಾಲಕ ಸಂತೋಷ್‌ ಕುಮಾರ್‌ (25) ಎಂಬುವರು ಕೊಚ್ಚಿಹೋಗಿದ್ದಾರೆ. ಅವರ ಶವ ಗುರುವಾರ ಪತ್ತೆಯಾಗಿದೆ.

ಬೆಂಗಳೂರಿನ ಬನಶಂಕರಿ ಎರಡನೇ ಹಂತದ ನಿವಾಸಿ ಸಂತೋಷ್‌, ನಾಲ್ವರು ಸ್ನೇಹಿತರೊಂದಿಗೆ ಈಜಾಡಲೆಂದು ಬುಧವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಚೆಕ್‌ಡ್ಯಾಂಗೆ ಹೋದಾಗ ಈ ಅವಘಡ ಸಂಭವಿಸಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

‘ಡ್ಯಾಂ ಕೆಳಭಾಗದಲ್ಲಿ ನಿಂತು ಸ್ನೇಹಿತರೆಲ್ಲ ಮೀನು ಹಿಡಿಯುತ್ತಿದ್ದರು. ಮಳೆಯಿಂದಾಗಿ ಡ್ಯಾಂನಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿತ್ತು. ಅದನ್ನು ಸ್ನೇಹಿತರ‍‍್ಯಾರೂ ಗಮನಿಸಿರಲಿಲ್ಲ. ಕೆಲ ನಿಮಿಷದಲ್ಲಿ ಆ ನೀರಿನ ರಭಸಕ್ಕೆ ನಾಲ್ವರೂ ಸ್ನೇಹಿತರು ಕೊಚ್ಚಿಹೋಗಿದ್ದರು. ಅವರಲ್ಲಿ ಮೂವರು ಅಪಾಯದಿಂದ ಪಾರಾಗಿ ದಡಕ್ಕೆ ಬಂದಿದ್ದರು. ಆದರೆ, ಸಂತೋಷ್‌ ವಾಪಸ್‌ ಬಂದಿರಲಿಲ್ಲ. ಸ್ನೇಹಿತರು ಎಷ್ಟೇ ಹುಡುಕಾಡಿದರೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ’ ಎಂದು ಕಗ್ಗಲೀಪುರ ಠಾಣೆಯ ಪೊಲೀಸರು ತಿಳಿಸಿದರು.

‘ಸ್ಥಳೀಯರು ನೀಡಿದ್ದ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸಿದೆವು. ಬುಧವಾರ ರಾತ್ರಿವರೆಗೂ ಶವ ಸಿಕ್ಕಿರಲಿಲ್ಲ. ಗುರುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ದಡದ ಬಳಿ ಶವವಿರುವುದು ಗೊತ್ತಾಯಿತು. ಅದನ್ನು ಹೊರತೆಗೆದು ಸಂಬಂಧಿಕರಿಗೆ ತೋರಿಸಿದಾಗ, ಆ ಶವ ಸಂತೋಷ್‌ ಅವರದ್ದು ಎಂದು ಗುರುತು ಹಿಡಿದರು’ ಎಂದರು.

‘ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಸಂತೋಷ್‌ ಅವರನ್ನು ತಾಯಿಯೇ ಬೆಳೆಸಿದ್ದರು. ಮುಂದಿನ ವರ್ಷ ಅವರಿಗೆ ಮದುವೆ ಮಾಡಬೇಕು ಎಂದು ತಾಯಿ ಅಂದುಕೊಂಡಿದ್ದರು. ಅಷ್ಟರಲ್ಲಿ ಈ ದುರ್ಘಟನೆ ನಡೆದಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

Post Comments (+)