ಸಂಗೀತೋತ್ಸವ, ತಬಲಾ ವಾದಕನಿಗೆ ಸನ್ಮಾನ

ಗುರುವಾರ , ಜೂನ್ 27, 2019
30 °C

ಸಂಗೀತೋತ್ಸವ, ತಬಲಾ ವಾದಕನಿಗೆ ಸನ್ಮಾನ

Published:
Updated:
ಸಂಗೀತೋತ್ಸವ, ತಬಲಾ ವಾದಕನಿಗೆ ಸನ್ಮಾನ

ಸಾಮಾನ್ಯವಾಗಿ ನಗರದ ಎಲ್ಲ ಸಂಗೀತ ಶಾಲೆಗಳು ತಮ್ಮ ಸಂಗೀತ ಸಂಸ್ಥೆಯ ವಾರ್ಷಿಕೋತ್ಸವವನ್ನು ಪ್ರತೀ ವರ್ಷ ನಡೆಸಿ ಮಕ್ಕಳ ಪ್ರತಿಭೆಗಳನ್ನು ಒರೆಗೆ ಹಚ್ಚುವ ಕೆಲಸ ಮಾಡುತ್ತವೆ. ವರ್ಷವಿಡೀ ಕಲಿತ ನಾದವಿದ್ಯೆಯ ಅನಾವರಣ ವೇದಿಕೆ ಮೇಲೆ ಆಗುವುದು ಇದರಿಂದ ಸಾಧ್ಯ.

ತ್ಯಾಗರಾಜನಗರದಲ್ಲಿರುವ ಗುರು ಸಮರ್ಥ ಸಂಗೀತ ವಿದ್ಯಾಲಯ ಇದೇ ಭಾನುವಾರ (ಅ.15) ತನ್ನ ಸಂಸ್ಥೆಯ 15ನೇ ವಾರ್ಷಿಕೋತ್ಸವ ಮತ್ತು ಹಿರಿಯ ವಿದ್ವಾಂಸರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಜಯನಗರದ ಜೆಎಸ್‌ಎಸ್‌ ಸಭಾಂಗಣದಲ್ಲಿ ನಡೆಸಲು ಸಜ್ಜಾಗಿದೆ.

ಈ ಸಲ ತಬಲಾ ವಾದನದಲ್ಲಿ ಸಾಕಷ್ಟು ಸಾಧನೆ ಮಾಡಿದ ಹಿರಿಯ ವಾದಕ ಪಂ. ಎಂ. ನಾಗೇಶ್‌ ಅವರನ್ನು ಸನ್ಮಾನಿಸಲಾಗುವುದು. ಜತೆಗೆ ವಿದ್ಯಾಲಯದ ಮಕ್ಕಳ ತಬಲಾ ವಾದನವೂ ಅನುರಣಿಸಲಿದೆ. ಸಂಗೀತ ಕಛೇರಿಗಳೂ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿದೆ.

ತಬಲಾ ಗುರು ವಿದ್ವಾನ್‌ ಅಮೃತೇಶ್‌ ಕುಲಕರ್ಣಿ ಅವರು ಹಲವಾರು ವರ್ಷಗಳಿಂದ ನಗರದ ಮಕ್ಕಳಲ್ಲಿ ತಬಲಾ ವಾದನದ ರುಚಿ ಹುಟ್ಟಿಸಿದ್ದಾರೆ. ಹಾಗೇ ನೂರಾರು ಪುಟಾಣಿಗಳು ಇವರ ಗರಡಿಯಲ್ಲಿ ಧಾ ಧಿನ್‌ ಧಿನ್‌ ಧಾ.. ನುಡಿಸಲು ಖುಷಿ ಪಡುತ್ತಿದ್ದಾರೆ. ಹಲವು ಮಕ್ಕಳು ತಬಲಾದ ವಿವಿಧ ಪರೀಕ್ಷೆಗಳನ್ನು ಪಾಸಾಗಿ ವಾದನದಲ್ಲಿ ಅಕಡೆಮಿಕ್‌ ಸಾಮರ್ಥ್ಯವನ್ನೂ ಮೆರೆದಿದ್ದಾರೆ.

ಈ ವಿದ್ಯಾಲಯದಲ್ಲಿ ತಬಲಾ ನುಡಿಸಾಣಿಕೆಯನ್ನು ಅಮೃತೇಶ್‌ ಕಲಿಸುತ್ತಿದ್ದರೆ ಇವರ ಪತ್ನಿ ಉಮಾ ಕುಲಕರ್ಣಿ ಹಿಂದೂಸ್ತಾನಿ ಸಂಗೀತ, ವಚನ ಸಂಗೀತ, ದೇವರನಾಮಗಳನ್ನು ಆಸಕ್ತರಿಗೆ ಹೇಳಿಕೊಡುತ್ತಿದ್ದಾರೆ. ಹೀಗಾಗಿ ತಬಲಾದ ಜತೆಗೆ ಸಂಗೀತದ ನಾದವೂ ಇಲ್ಲಿ ನಿತ್ಯವೂ ಕಿವಿಗಿಂಪು ನೀಡುತ್ತಿದೆ.

‘ನಮ್ಮ ವಿದ್ಯಾಲಯದ ಮಕ್ಕಳು ತಬಲಾದಲ್ಲಿ ಹೆಚ್ಚು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ನಗರದ ವಿವಿಧ ಸಂಗೀತ ಕಾರ್ಯಕ್ರಮಗಳಲ್ಲಿ ತಮ್ಮ ಕೈಚಳಕ ತೋರುತ್ತಿದ್ದಾರೆ. ಉತ್ತಮ ಗುಣಮಟ್ಟದ ತಬಲಾ ಶಿಕ್ಷಣ ಮಕ್ಕಳಿಗೆ ಸಿಗುವ ಕಾರಣ ಕಲಿಯುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಒಟ್ಟಿನಲ್ಲಿ ಏಕಾಗ್ರತೆ, ಸದ್ಭಾವನೆ, ಸಂಗೀತಾಸಕ್ತಿ ಮೂಡಿಸುವುದು ನನ್ನ ಉದ್ದೇಶ’ ಎಂದು ಹೇಳುತ್ತಾರೆ ಅಮೃತೇಶ್‌ ಕುಲಕರ್ಣಿ.

ತಬಲಾ ನಾದ ಸಾಧಕ ಪಂ. ಎಂ. ನಾಗೇಶ್‌ ತಬಲಾ ವಾದನದಲ್ಲಿ ಚಿರಪರಿಚಿತ ಹೆಸರು. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ನಾಗೇಶ್‌ ತಬಲಾ ವಾದನವನ್ನು ಪಂ.ಪುಟ್ಟರಾಜ ಗವಾಯಿಗಳಲ್ಲಿ ಅಭ್ಯಾಸ ಮಾಡಿದವರು. ಬಳಿಕ ಪಂ.ಶೇಷಗಿರಿ ಹಾನಗಲ್‌ ಅವರ ಬಳಿಯೂ ಲಯವಾದ್ಯದ ತಾಂತ್ರಿಕ ಅಂಶಗಳನ್ನು ಕಲಿತವರು. ಜತೆಗೆ ಗಾಯನವನ್ನು ದಿ.ಪಂ. ಆರ್‌. ಶೇಷಾದ್ರಿ ಗವಾಯಿಗಳಲ್ಲಿ ಕಲಿತವರು. ಆಕಾಶವಾಣಿ ಕಲಾವಿದರಾಗಿರುವ ಇವರು ಸರ್ಕಾರ ನಡೆಸುವ ತಬಲಾ ವಿದ್ವತ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದವರು.

ಹಲವು ಸಂಗೀತ ಕಛೇರಿಗಳಲ್ಲಿ ತಬಲಾ ಸಾಥಿ ನೀಡಿದ ಇವರು ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ ಭಾಗವಹಿಸಿದ್ದಾರೆ. ಮೈಸೂರು ದಸರಾ, ಹಂಪಿ ಉತ್ಸವ, ಹೊಯ್ಸಳ ಉತ್ಸವ, ಕದಂಬೋತ್ಸವ, ಸಹ್ಯಾದ್ರಿ ಉತ್ಸವ, ಕುಂದಗೋಳ ಉತ್ಸವ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲೂ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ದೆಹಲಿ, ಮುಂಬಯಿ, ಪುಣೆ, ಚೆನ್ನೈಗಳಲ್ಲೂ ತಬಲಾ ವಾದನ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ. ನೂರಾರು ಚಲನಚಿತ್ರ ಗೀತೆಗಳ ಗಾಯನಕ್ಕೆ ತಬಲಾ ವಾದನ ನುಡಿಸಿದ ಹೆಗ್ಗಳಿಕೆಯೂ ಇವರಿಗಿದೆ.

ಗುರು ಸಮರ್ಥ ಸಂಗೀತ ವಿದ್ಯಾಲಯದ ವಾರ್ಷಿಕ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆಗೆ ಭಾಜನರಾಗಲಿರುವ ನಾಗೇಶ್‌ ಹಲವಾರು ವಿದ್ಯಾರ್ಥಿಗಳನ್ನೂ ತಬಲಾ ವಾದನದಲ್ಲಿ ಪಳಗಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry