ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗರಹಳ್ಳಿ: ಅಕ್ರಮ ಗಣಿಗಾರಿಕೆ ತಡೆಗೆ ಆಗ್ರಹ

Last Updated 13 ಅಕ್ಟೋಬರ್ 2017, 7:35 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಅಕ್ರಮ ಗಣಿಗಾರಿಕೆ ತಡೆ, ಚರಂಡಿ ಕಾಮಗಾರಿ, ಉಪ್ಪುತೋಡು-ಕಂಬಿಬಾಣೆ ರಸ್ತೆ ಕಾಮಗಾರಿ ಮುಂದುವರೆಸಿ, ಮಾತೃಪೂರ್ಣ ಯೋಜನೆ ಜಾರಿಗೆ ಗುರುವಾರ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಜನರು ಆಗ್ರಹಪಡಿಸಿದರು.

ಕೊಡಗರಹಳ್ಳಿ ಗ್ರಾಮ ಪಂಚಾಯಿತಿ 2017–18ನೇ ಸಾಲಿನ ಗ್ರಾಮಸಭೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಇ.ಅಬ್ಬಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿ ಕಲ್ಲೂರುವಿನಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಅತೀ ಭಾರದ ಗ್ರಾನೈಟ್‌ಗಳ ಸಾಗಣೆಯಿಂದ ರಸ್ತೆಗಳು ಹದಗೆಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದರು.

ಗಣಿಗಾರಿಕೆ ತಡೆಯಬೇಕು ಎಂದು ಗ್ರಾಮಸ್ಥ ನಾಣಯ್ಯ, ಮಾಜಿ ಗ್ರಾ.ಪಂ.ಅಧ್ಯಕ್ಷ ಕ್ಲೈವಾ ಪೊನ್ನಪ್ಪ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಅಬ್ಬಾಸ್ ಅವರು, ಅಕ್ರಮ ಗಣಿಗಾರಿಕೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪೊಲೀಸ್ ಇಲಾಖೆಯೇ ಕಾನೂನುಕ್ರಮ ಕೈಗೊಳ್ಳಬೇಕು. ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಗ್ರಾಮಸ್ಥರ ಜೊತೆಗೂಡಿ ಪ್ರತಿಭಟನೆ ನಡೆಸಬೇಕಾದಿತು ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಕ್ಲೈವಾ ಪೊನ್ನಪ್ಪ ಎಚ್ಚರಿಕೆ ನೀಡಿದರು. ಸುಂಟಿಕೊಪ್ಪ ಸೆಸ್ಕ್ ಎಂಜಿನಿಯರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಜೆಇ ರಮೇಶ್, ಈಗಾಗಲೇ ಕೊಡಗರಹಳ್ಳಿಯ ಸ್ಕೂಲ್‌ ಬಾಣೆಯಲ್ಲಿ ಟ್ರಾನ್ಸ್‌ ಫಾರಂ ಅಳವಡಿಸುವುದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದರು.
ಕೊಡಗರಹಳ್ಳಿ-ಉಪ್ಪುತೋಡು ಕಾಂಕ್ರೀಟ್ ರಸ್ತೆ ಕಾಮಗಾರಿ ಚುರುಕಿಗೆ ಗ್ರಾಮಸ್ಥರಾದ ರಾದಾಕೃಷ್ಣ ಮತ್ತು ಸುಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕಿ ಭಾಗೀರಥಿ, ಗ್ರಾಮಸ್ಥರು ತ್ಯಾಜ್ಯವನ್ನು ಶಾಲೆ ಆವರಣದಲ್ಲಿ ಹಾಕಲಾಗುತ್ತಿದೆ ಎಂದು ಗಮನಸೆಳೆದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್, ಮಳೆಯಿಂದಾಗಿ ಕೆಲವೆಡೆ ರಸ್ತೆ ಕಾಮಗಾರಿ ನಿಂತಿದೆ. ಮಳೆ ನಿಂತ ಕೂಡಲೇ ಆರಂಭಿಸುವುದಾಗಿ ತಿಳಿಸಿದರು.

ಪಿಡಿಒ ನಂದೀಶ್‌ಕುಮಾರ್, ಕಾರ್ಯದರ್ಶಿ ಅಂಬುಜಾದೇವಿ, ತಾ.ಪಂ.ಸದಸ್ಯೆ ಎಚ್.ಡಿ.ಮಣಿ, ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಾ, ನೋಡಲ್ ಅಧಿಕಾರಿ ಪಿ.ಎಸ್.ಬೋಪಯ್ಯ, ಗ್ರಾ.ಪಂ.ಸದಸ್ಯರಾದ ಸಲೀಂ, ಸುಮಿತ್ರಾ, ಶಾಲಿನಿ, ಲಲಿತಾ, ಜಯಲಕ್ಷ್ಮಿ, ವಸಂತಾ, ಎನ್.ಡಿ.ನಂಜಪ್ಪ, ನೀರಾವರಿ ಇಲಾಖೆಯ ಜಗದೀಶ್, ಗುತ್ತಿಗೆದಾರ ಇಬ್ರಾಹಿಂ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT