ಗುರುವಾರ , ಸೆಪ್ಟೆಂಬರ್ 19, 2019
26 °C

ಜಿಂಕೆಯ ಅಂತರಂಗ...

Published:
Updated:
ಜಿಂಕೆಯ ಅಂತರಂಗ...

‘ಡಮರುಗ’ಗೊತ್ತು ಇದೇನ್ರಿ ನಿಮ್ಮ ಹೆಸರಿನ ಜತೆಗೆ ಉರುಡುಗ?

ಹೋ... ಅದಾ... ಉರುಡುಗ ಅನ್ನೋದು ನಮ್ಮೂರು. ನನ್ನದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಉರುಡುಗ ಅನ್ನೋ ಹಳ್ಳಿ. ನಾನು ಮಲೆನಾಡಿನ ಹುಡುಗಿ.

ಏನೇನು ಓದಿಕೊಂಡಿದ್ದೀರಿ?

ನಾನು ಬಿ.ಎಸ್ಸಿ ಪದವೀಧರೆ. ಓದಿದ್ದು  ಮಂಗಳೂರಿನಲ್ಲಿ. ಮುಂದೆ ಎಂ.ಎಸ್ಸಿ ಮಾಡಬೇಕೆಂಬ ಆಸೆ ಇದೆ.

ನೀವು ಕನ್ನಡದ ಆಲಿಯಾ ಭಟ್ ಅಂತೆ ಹೌದಾ?

ಅಯ್ಯಮ್ಮಾ. ದಯವಿಟ್ಟು ಹಾಗೇ ಕರೀಬೇಡಿ. ಈಗಂತೂ ಎಲ್ಲರೂ ಇದೇ ಪ್ರಶ್ನೆ ಕೇಳ್ತಾರೆ. ನೋಡಲು ಸ್ವಲ್ಪ ಹಾಗೆ ಇದ್ದೀನಿ ಅಂತ ಹಾಗೇ ಕರೀತಾರೆ ಅಷ್ಟೇ. ಆಲಿಯಾ ನನಗೂ ಇಷ್ಟ. ಆದರೆ, ದಯವಿಟ್ಟು ಅವಳ ಪೆದ್ದುತನದ ಜತೆಗೆ ಹೋಲಿಕೆ ಮಾತ್ರ ಮಾಡಬೇಡಿ ಪ್ಲೀಸ್‌...

ಇಷ್ಟು ಚಂದ ಕಾಣ್ತೀರಿ, ಏನು ನಿಮ್ಮ ಸೌಂದರ್ಯದ ಗುಟ್ಟು?

ನಾನಂತೂ ಡಯಟ್‌, ವರ್ಕೌಟ್ ಮಾಡೋಳೂ ಅಲ್ಲ. ಮೊದಲಿನಿಂದ್ಲೂ ಸಖತ್ ತಿಂಡಿಪೋತಿ. ಚಿಕನ್ ಅಂದ್ರೆ ಪಂಚಪ್ರಾಣ. ಮೊದಲೆಲ್ಲಾ ಮೇಕಪ್ ಇಲ್ಲದೇ ಇರ್ತಾ ಇದೆ. ಈಗೀಗ ಅಮ್ಮನ ಮಾತು ಕೇಳಿ ಹೊರಗೆ ಹೋಗುವಾಗ ಮೇಕಪ್ ಮಾಡಿಕೊಳ್ತೀನಿ. ನಾನು ಮೂಲತಃ ಕ್ರೀಡಾಪಟು. ಆಗೆಲ್ಲಾ ಯಾವುದಕ್ಕೂ ಕಾಳಜಿ ಮಾಡ್ತಾ ಇರಲಿಲ್ಲಾ. ಈಗ ನಟಿಯಾಗಿ ಚರ್ಮ ಮತ್ತು ದೇಹದ ಅಂಗಸೌಷ್ಠವ ಕಾಪಾಡಿಕೊಳ್ಳಬೇಕಿದೆ.

ಸೀರಿಯಲ್–ಸಿನಿಮಾ ಎರಡರ ನಡುವಿನ ವ್ಯತ್ಯಾಸವೇನು?

ಧಾರಾವಾಹಿಗಳು ಒಂಥರಾ ಸರ್ಕಾರಿ ನೌಕರಿ ಇದ್ದಂತೆ. ಬೆಳಿಗ್ಗೆ ಶೂಟಿಂಗ್‌ಗೆ ಹೋದರೆ ಮತ್ತೆ ವಾಪಸ್ ಬರೋದು ಸಂಜೆಗೆ. ಆದರೆ, ಸಿನಿಮಾ ಹಾಗಲ್ಲ. ಅಲ್ಲಿ ಬೆಳೆಯಲು ಹೆಚ್ಚು ಅವಕಾಶಗಳಿರುತ್ತವೆ. ನಾನು ಸಿನಿಮಾಗೆ ಬರಲು ಇದೂ ಒಂದು ಕಾರಣ.

‘ಹುಲಿ’ ಜತೆಗೆ ಈ ಜಿಂಕೆ ಸೇರಿದ್ದು ಹೇಗೆ?

ನೀವು ಹೀಗೆಲ್ಲಾ ಪ್ರಶ್ನೆ ಕೇಳಿದ್ರೆ ಉತ್ತರ ಹೇಳೋಕೆ ಕಷ್ಟವಾಗುತ್ತೆ. ‘ಹುಲಿರಾಯ’ದ ನಿರ್ದೇಶಕ ಅರವಿಂದ್ ಕೌಶಿಕ್ ಚಿತ್ರಕಥೆ ಹೇಳಿದಾಗ, ಎರಡನೇ ಮಾತಿಲ್ಲದೇ ಸಿನಿಮಾಕ್ಕೆ ಒಪ್ಪಿಕೊಂಡೆ. ಅಷ್ಟೇ ನೋಡಿ, ಬೆಳ್ಳಿತೆರೆಗೆ ನನ್ನ ಪಯಣ ಶುರುವಾಗಿಯೇ ಬಿಡ್ತು.

ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ನಿಮ್ಮನ್ನು ನೋಡಿಕೊಂಡ ಕ್ಷಣ ಹೇಗಿತ್ತು?

ಅಷ್ಟು ದೊಡ್ಡ ಸ್ಕ್ರೀನ್‌ ನಲ್ಲಿ ನನ್ನನ್ನು ನಾನು ನೋಡಿಕೊಂಡು ಖುಷಿಪಟ್ಟೆ. ಸಿನಿಮಾದ ಪ್ರೀಮಿಯರ್‌ ನೋಡಿದಾಗಲೇ ಖುಷಿಯಾಗಿತ್ತು. ಥಿಯೇಟರ್‌ನಲ್ಲಿ ನೋಡಿದಾಗ ಖುಷಿ ಮತ್ತಷ್ಟು ಹೆಚ್ಚಾಯಿತು. ನಿಜ ಹೇಳಬೇಕೆಂದರೆ ಆ ಕ್ಷಣದಲ್ಲಿ ಸಿನಿಮಾ ಜಡ್ಜ್ ಮಾಡಲು ಆಗಲಿಲ್ಲ. ನನ್ನ ಪಾತ್ರ ಯಾವಾಗ ಬರುತ್ತೆ? ಹೇಗೆ ಕಾಣ್ತೀನಿ ಅನ್ನೋದನ್ನೇ ಕಾಯುತ್ತಿದ್ದೆ.

ಹುಲಿ ಜತೆಗಿನ ಒಡನಾಟ ಹೇಗಿತ್ತು?

ಈ ಸಿನಿಮಾದಲ್ಲಿ ಬಾಲು ನಾಗೇಂದ್ರ ಅವರೇ ಕೇಂದ್ರ. ಅವರಂತೂ ಅಪ್ಪಟ ಕಾಡುಮನುಷ್ಯನಂತೆಯೇ ನಟಿಸಿದ್ದಾರೆ. ಅಷ್ಟೇ ಅಲ್ಲ, ಸೆಟ್‌ನಲ್ಲೂ ಅವರು ಹಾಗೇ ಇರ್ತಾ ಇದ್ರು. ಅವರ ಪಾತ್ರದ ಬಗ್ಗೆ ಅವರಿಗೆ ಅಷ್ಟೊಂದು ತಲ್ಲೀನತೆ ಇತ್ತು. ಚಿತ್ರೀಕರಣದ ಮೂರ್ನಾಲ್ಕು ದಿನ ಹೊಂದಿಕೊಳ್ಳಲು ಕಷ್ಟವಾಯಿತು. ಆಮೇಲೆ ಇಷ್ಟವಾಯಿತು.

 ‘ಹುಲಿರಾಯ’ನಿಗೆ ಹೇಗಿದೆ ಪ್ರತಿಕ್ರಿಯೆ?

ಸಿನಿಮಾ ನೋಡಿದವರು ತುಂಬಾ ಖುಷಿ ಪಟ್ಟಿದ್ದಾರೆ. ನನ್ನ ಪುಟ್ಟ ಪಾತ್ರವನ್ನೂ ಇಷ್ಟಪಟ್ಟಿದ್ದಾರೆ. ಪ್ರಯೋಗಾತ್ಮಕ ಚಿತ್ರದ ಮೂಲಕ ನಾಯಕಿಯಾಗಿದ್ದು ಖುಷಿ ಅನಿಸ್ತು. ಚಿಕ್ಕ ಪಾತ್ರವಾದರೂ ವೀಕ್ಷಕರು ಗುರುತಿಸುವಂತಾಗಿದೆ. ಇದಕ್ಕಿಂತ ಇನ್ನೇನು ಬೇಕು. ಅವಕಾಶ ನೀಡಿದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಧನ್ಯವಾದ. ‘ಹುಲಿರಾಯ’ ಮನಸಿಗೆ ಇಷ್ಟವಾದ ಮತ್ತು ಹತ್ತಿರವಾದ ಸಿನಿಮಾ.

ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ...

ಖ್ಯಾತ ಸಿನಿಮಾಟೋಗ್ರಫರ್ ಅಶೋಕ್ ಕಶ್ಯಪ್ ಅವರ ’ಧ್ವಜ’ ಸಿನಿಮಾದಲ್ಲಿ ನಟಿಸ್ತಾ ಇದೀನಿ. ಹೊಸ ನಟ ರವಿ ಈ ಸಿನಿಮಾದಲ್ಲಿದ್ದಾರೆ. ಅವರದ್ದು ದ್ವಿಪಾತ್ರ. ಒಂದು ಪಾತ್ರಕ್ಕೆ ನಟಿ ಪ್ರಿಯಾಮಣಿ ನಾಯಕಿಯಾದರೆ, ಮತ್ತೊಂದು ಪಾತ್ರಕ್ಕೆ ನಾನು ನಾಯಕಿ.

‘ಫೇಸ್ ಟು ಫೇಸ್’ ಎನ್ನುವ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದೀನಿ. ಉಪೇಂದ್ರ ಅವರ ಬಳಿ ಅಸೋಸಿಯೇಟ್ ಆಗಿದ್ದ ಸಂದೀಪ್ ಜನಾರ್ದನ್ ಈ ಸಿನಿಮಾದ ನಿರ್ದೇಶಕ.

Post Comments (+)