ಗುರುವಾರ , ಜೂನ್ 17, 2021
24 °C

ಎತ್ತಿನಹೊಳೆ: ಮೂಡಿದ ಆಶಾವಾದ

ವಿ. ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಎತ್ತಿನಹೊಳೆ: ಮೂಡಿದ ಆಶಾವಾದ

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರನ್ನು ಮಳೆಗಾಲದ ಅವಧಿಯಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲೇ ಸಂಗ್ರಹಿಸಿ ಬಯಲುಸೀಮೆಯ ಜಿಲ್ಲೆಗಳಿಗೆ ಕೊಂಡೊಯ್ಯುವ ಉದ್ದೇಶದ ‘ಎತ್ತಿನಹೊಳೆ’ ಯೋಜನೆಯನ್ನು ಕರಾವಳಿ ಪ್ರದೇಶದ ಜನರ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿತ್ತು. ₹ 12,912 ಕೋಟಿ ವೆಚ್ಚದ ಯೋಜನೆಯ ಮೊದಲ ಹಂತದ ಕಾಮಗಾರಿಗಳಿಗೆ 2014ರ ಫೆಬ್ರುವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿತ್ತು. ಕಾಮಗಾರಿ ಚುರುಕಾದಂತೆ ಕರಾವಳಿ ಜನರು, ಪರಿಸರವಾದಿಗಳ ಹೋರಾಟವೂ ಚುರುಕಾಗಿತ್ತು. ಯೋಜನೆಯನ್ನು ವಿರೋಧಿಸಿ ಪರಿಸರ ಹೋರಾಟಗಾರ ಕೆ.ಎನ್‌.ಸೋಮಶೇಖರ್‌, ಹಾಸನದ ಶರತ್‌ಕುಮಾರ್‌ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಹಿಂದಿನ ಉಪ ಮೇಯರ್‌ ಪುರುಷೋತ್ತಮ ಚಿತ್ರಾಪುರ ಮೂರು ಪ್ರತ್ಯೇಕ ಅರ್ಜಿಗಳನ್ನು ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ)  ಸಲ್ಲಿಸಿದ್ದರು. ಕಾನೂನು ಹೋರಾಟದ ತೂಗುಕತ್ತಿಯ ನಡುವೆಯೇ ಜಲಸಂಪನ್ಮೂಲ ಇಲಾಖೆ ಕಾಮಗಾರಿ ಮುಂದುವರಿಸಿತ್ತು.

ಎತ್ತಿನಹೊಳೆ ಯೋಜನೆ ಮೊದಲು ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿತ್ತು. ಈಗ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಶ್ವೇಶ್ವರಯ್ಯ ಜಲ ನಿಗಮ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಸೋಮಶೇಖರ್‌ ಅವರ ಅರ್ಜಿಯನ್ನು ಅಕ್ಟೋಬರ್‌ 5ರಂದು ತಿರಸ್ಕರಿಸಿರುವ ಎನ್‌ಜಿಟಿ, ಕೆಲವು ಷರತ್ತುಗಳೊಂದಿಗೆ ಯೋಜನೆ ಅನುಷ್ಠಾನಕ್ಕೆ ಸಮ್ಮತಿ ನೀಡಿದೆ. ಇನ್ನೆರಡು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದ್ದರೂ, ‘ಕುಡಿಯುವ ನೀರು ಪೂರೈಕೆ’ಗಾಗಿ ಕೈಗೆತ್ತಿಕೊಂಡಿರುವ ಯೋಜನೆಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗದು ಎಂಬ ವಿಶ್ವಾಸದಲ್ಲಿದೆ ಜಲಸಂಪನ್ಮೂಲ ಇಲಾಖೆ. ಆದರೆ, ಬಾಕಿ ಇರುವ ಎರಡು ಅರ್ಜಿಗಳಲ್ಲಿ ತಮ್ಮ ಪರವಾದ ಆದೇಶ ಹೊರಬೀಳಬಹುದು ಎಂಬ ಆಶಾವಾದದಲ್ಲಿ ಇದ್ದಾರೆ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರು.

ಎತ್ತಿನಹೊಳೆ ಯೋಜನೆ ಜನ್ಮ ತಳೆದದ್ದು ಹೇಗೆ?

ಹಲವು ವರ್ಷಗಳಿಂದ ಭೀಕರ ಬರ ಮತ್ತು ಅಂತರ್ಜಲ ಮಟ್ಟ ಕುಸಿತದಿಂದ ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳು ತೀವ್ರವಾದ ನೀರಿನ ಕೊರತೆ ಎದುರಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನೂ ನೀರಿನ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಈ ಜಿಲ್ಲೆಗಳ ನೀರಿನ ಸಮಸ್ಯೆ ಪರಿಹಾರಕ್ಕೆ 2002ರಲ್ಲಿ ರಾಜ್ಯ ಸರ್ಕಾರದ ನೀರಾವರಿ ಸಲಹೆಗಾರರಾಗಿದ್ದ ನೀರಾವರಿ ತಜ್ಞ ಜಿ.ಎಸ್‌.ಪರಮಶಿವಯ್ಯ ವರದಿಯೊಂದನ್ನು ಸಲ್ಲಿಸಿದ್ದರು. ಈ ವರದಿಯಲ್ಲಿ ಪ್ರಸ್ತಾಪಿಸಿದ್ದ ಏಳು ಯೋಜನೆಗಳ ಪೈಕಿ ಎತ್ತಿನಹೊಳೆ ಯೋಜನೆಯೂ ಒಂದು.

ಯೋಜನೆಯಲ್ಲಿ ಏನೆಲ್ಲಾ ಇದೆ?

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರನ್ನು ಮಳೆಗಾಲದ ಅವಧಿಯಲ್ಲಿ ಸಂಗ್ರಹಿಸಿ ಪೂರ್ವ ಭಾಗಕ್ಕೆ ಹರಿಸುವುದು ಎತ್ತಿನಹೊಳೆ ಯೋಜನೆಯ ಗುರಿ. ಸಕಲೇಶಪುರ ಯೋಜನೆಯ ಕೇಂದ್ರ ಸ್ಥಾನ. ನೇತ್ರಾವತಿಯ ಉಪ ನದಿಗಳಾದ ಎತ್ತಿನಹೊಳೆ, ಕಾಡುಮನೆಹೊಳೆ, ಕೆರೆಹೊಳೆ ಮತ್ತು ಹೊಂಗದಹಳ್ಳ ಹೊಳೆಗಳಿಗೆ ಎಂಟು ಕಡೆ ಸಣ್ಣ ಅಣೆಕಟ್ಟೆಗಳನ್ನು ಕಟ್ಟಿ, ಅಲ್ಲಿ ಸಂಗ್ರಹಿಸಿದ ನೀರನ್ನು ಹರವನಹಳ್ಳಿ ವಿತರಣಾ ಕೇಂದ್ರಕ್ಕೆ ಪಂಪ್‌ ಮಾಡಲಾಗುತ್ತದೆ. ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ 233 ಕಿ.ಮೀ. ಉದ್ದದ ಕಾಲುವೆಯಲ್ಲಿ ತುಮಕೂರಿಗೆ ನೀರು ಹರಿಸಲಾಗುತ್ತದೆ. ನಂತರ ಕಾಲುವೆಗಳ ಮೂಲಕ ಬೇರೆ ಜಿಲ್ಲೆಗಳಿಗೆ ನೀರು ಹರಿಸುವುದು ಯೋಜನೆಯಲ್ಲಿ ಸೇರಿದೆ.

ನೀರಿನ ಲಭ್ಯತೆ ಎಷ್ಟಿದೆ?

ಎತ್ತಿನಹೊಳೆ ಯೋಜನೆ ಕುರಿತ ಚರ್ಚೆ ಆರಂಭವಾದ ದಿನಗಳಿಂದಲೂ ಯೋಜನೆಯ ಕೇಂದ್ರಸ್ಥಾನದಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆ ತಕರಾರುಗಳಿವೆ. ಜಲಸಂಪನ್ಮೂಲ ಇಲಾಖೆಯ ವಿಸ್ತೃತ ಯೋಜನಾ ವರದಿಯ ಪ್ರಕಾರ ಕಿರು ಅಣೆಕಟ್ಟೆಗಳನ್ನು ಕಟ್ಟುವ ಪ್ರದೇಶದಲ್ಲಿ ಮಳೆಗಾಲದ ಅವಧಿಯಲ್ಲಿ 34.26 ಟಿಎಂಸಿ ಅಡಿಗಳಿಗಿಂತಲೂ ಹೆಚ್ಚು ನೀರು ದೊರಕುತ್ತಿದೆ. ಅದರಲ್ಲಿ 24.01 ಟಿಎಂಸಿ ಅಡಿ ನೀರನ್ನು ಬಯಲುಸೀಮೆಯ ಜಿಲ್ಲೆಗಳಿಗೆ ಹರಿಸಲಾಗುತ್ತದೆ. ಆದರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ನೇತೃತ್ವದ ತಂಡದ ಅಧ್ಯಯನ ವರದಿ, ಇಲ್ಲಿ 9.55 ಟಿಎಂಸಿ ಅಡಿಗಳಷ್ಟು ನೀರು ಮಾತ್ರ ಲಭ್ಯವಿದೆ ಎಂದು ಹೇಳಿದೆ.

ಬೀಳುವ ಮಳೆ ಎಷ್ಟು?

ಲಭ್ಯವಿರುವ ನೀರಿನ ಕುರಿತು ತಕರಾರು ಇರುವಂತೆ ಎತ್ತಿನಹೊಳೆ ಯೋಜನಾ ಪ್ರದೇಶದ ಕೇಂದ್ರ ಸ್ಥಾನದಲ್ಲಿ ಬೀಳುವ ಮಳೆಯ ಪ್ರಮಾಣದ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ. ಈ ಪ್ರದೇಶದಲ್ಲಿ ಸರಾಸರಿ 6,200 ಮಿ.ಮೀ ಮಳೆ ಬೀಳುತ್ತದೆ ಎಂದು ಯೋಜನಾ ವರದಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಈ ಲೆಕ್ಕಾಚಾರಕ್ಕೆ ಆಧಾರವಾಗಿ ಪರಿಗಣಿಸಿರುವ ಮೂರು ಖಾಸಗಿ ಮಳೆಮಾಪನ ಘಟಕಗಳಲ್ಲಿ ಸರಾಸರಿ 6,030, 6,060 ಮತ್ತು 6,540 ಮಿ.ಮೀ. ಮಳೆ ದಾಖಲಾಗಿದೆ. ಆದರೆ, ಯೋಜನೆಯನ್ನು ವಿರೋಧಿಸುತ್ತಿರುವವರ ಪ್ರಕಾರ, ಜಲಸಂಪನ್ಮೂಲ ಇಲಾಖೆಯಲ್ಲಿ ಲಭ್ಯವಿರುವ 20 ವರ್ಷಗಳ ಅಂಕಿಅಂಶಗಳನ್ನು ಅವಲೋಕನ ಮಾಡಿದರೆ ಸರಾಸರಿ ಮಳೆಯ ಪ್ರಮಾಣ 3,072 ಮಿ.ಮೀ. ಮಾತ್ರ.

ವಿರೋಧ ಏಕೆ?

ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿಯ ನದಿ ಬತ್ತಿಹೋಗಲಿದೆ ಎಂಬುದು ಕರಾವಳಿಯ ಜನರ ಆತಂಕ. ಯೋಜನಾ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ ಮತ್ತು ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆಯೇ ತಕರಾರು ಎತ್ತುತ್ತಿರುವ ಕರಾವಳಿ ಜನರು,ಈ ಯೋಜನೆಯಿಂದ ನೇತ್ರಾವತಿ ನದಿ ಪೂರ್ಣ ಪ್ರಮಾಣದಲ್ಲಿ ಬರಿದಾಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಇಲ್ಲಿನ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಕೈಗಾರಿಕೆಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನವನ್ನು ಈ ಯೋಜನೆ ಬಲಿಪಡೆಯುತ್ತದೆ ಎಂಬುದು ಅವರ ಆರೋಪ. ಇದರ ಜೊತೆಯಲ್ಲೇ ಯೋಜನೆಯ ಅನುಮೋದನೆ ಮತ್ತು ಅನುಷ್ಠಾನದಲ್ಲಿ ಜಿಲ್ಲೆಯ ಇಬ್ಬರು ಹಿರಿಯ ರಾಜಕಾರಣಿಗಳು ಮುಂಚೂಣಿಯಲ್ಲಿರುವುದು ವಿರೋಧದ ಕಾವು ಮತ್ತಷ್ಟು ಹೆಚ್ಚಲು ಕಾರಣ. ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಿದ್ದರು. ಚಿಕ್ಕಬಳ್ಳಾಪುರ ಕ್ಷೇತ್ರದ ಈಗಿನ ಸಂಸದ ಎಂ.ವೀರಪ್ಪ ಮೊಯಿಲಿ ಯೋಜನೆ ಜಾರಿಗೆ ಒತ್ತಡ ಹೇರಿದ ಪ್ರಮುಖರು. ಹೀಗಾಗಿ ವಿರೋಧಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣದ ನಂಟೂ ಇದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.