6

ಮರಾ ಮರಾ ಮರಾಮರಾಮ ರಾಮ ರಾಮ!

Published:
Updated:
ಮರಾ ಮರಾ ಮರಾಮರಾಮ ರಾಮ ರಾಮ!

ವಾಲ್ಮೀಕಿ ಮಹರ್ಷಿಯ ಜೀವನದ ಬಗ್ಗೆ ರಾಮಾಯಣದಲ್ಲಿ ವಿವರಗಳು ಇಲ್ಲ. ಉತ್ತರಕಾಂಡದಲ್ಲಿ ಒಂದೆಡೆ ರಾಮನಲ್ಲಿ ವಾಲ್ಮೀಕಿ ತನ್ನನ್ನು ಪ್ರಚೇತಸನ ಮಗ ಎಂದು ಕರೆದುಕೊಂಡಿದ್ದಾನೆ (‘ಪ್ರಚೇತಸೋsಹಂ ದಶಮಃ ಪುತ್ರೋ ರಾಘವನಂದನ’). ಭಾರ್ಗವಗೋತ್ರದವನು – ಎನ್ನುವ ಒಕ್ಕಣೆಯೂ ರಾಮಾಯಣದಲ್ಲಿಯೇ ಬಂದಿದೆ. ಭಾಗವತಪುರಾಣದ ಪ್ರಕಾರ ವಾಲ್ಮೀಕಿಯ ತಂದೆ ವರುಣ, ತಾಯಿ ಚರ್ಷಣೀ. ವಿಷ್ಣುಪುರಾಣದ ಪ್ರಕಾರ ವಾಲ್ಮೀಕಿಯ ಮೊದಲನೆಯ ಹೆಸರು ಋಕ್ಷ. ಇಪ್ಪತ್ತನಾಲ್ಕನೆಯ ಚತುರ್ಯುಗದಲ್ಲಿ ವಾಲ್ಮೀಕಿಯೇ ವೇದವ್ಯಾಸನಾಗಿದ್ದವನಂತೆ.

ವಾಲ್ಮೀಕಿ ಮಹರ್ಷಿಯನ್ನು ಕುರಿತು ಕಥೆಯೊಂದು ಜನರಲ್ಲಿ ಪ್ರಚಲಿತವಾಗಿದೆಯಷ್ಟೆ. ವಾಲ್ಮೀಕಿ ಮೊದಲು ಬೇಡನಾಗಿದ್ದವನು; ಪರಮ ಕ್ರೂರಿ; ಕೊಲೆಗಡುಕ. ಅವನು ನಾರದರಿಂದ ರಾಮನಾಮದ ಉಪದೇಶವನ್ನು ಪಡೆದು, ತಪಸ್ಸಿನಿಂದ ಮಹರ್ಷಿಯಾದ. ಇದು ಪ್ರಚಲಿತ ಕಥೆ. ಈ ವಿಷಯವಾಗಿ ಡಿವಿಜಿಯವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು:

‘ಹರಿಕಥೆ ಮಾಡುವವರು – ಬಹುಶಃ ಕನ್ನಡಿಗರು – ವಾಲ್ಮೀಕಿಯನ್ನು ಕುರಿತು ಕಟ್ಟಿರುವ ಒಂದು ಕಥೆ ಪ್ರಚಾರದಲ್ಲಿದೆ. ವಾಲ್ಮೀಕಿ ಹೇಗೊ ಕಳ್ಳರ ಸಹವಾಸದಲ್ಲಿ ಬಿದ್ದು, ದಾರಿಹೋಕರನ್ನು ಹಿಡಿದು ಬಡಿದು ಸುಲಿಗೆ ಮಾಡಿ ಹೊಟ್ಟೆಹೊರಕೊಳ್ಳುತ್ತಿದ್ದ. ಒಂದು ದಿನ ನಾರದರು ಅವನ ಕೈಗೆ ಸಿಕ್ಕಿಬಿದ್ದಾಗ ಅವನಲ್ಲಿ ಕನಿಕರವುಳ್ಳವರಾಗಿ, ಅವನು ಮಾಡುತ್ತಿದ್ದ ಪಾಪವನ್ನು ಅವನ ತಿಳಿವಳಿಕೆಗೆ ತಂದು, ಅವನು ಪಾಶ್ಚಾತ್ತಾಪ ಪಟ್ಟು ಕ್ಷಮೆ ಬೇಡಿದಾಗ ಅವನಿಗೆ ಒಂದು ಮರವನ್ನು ತೋರಿಸಿ ‘ಇದನ್ನು ನಂಬಿ ಜಪಿಸು’ ಎಂದು ಉಪದೇಶಿಸಿದರು. ಅವನು ಅದರಂತೆ ‘ಮರಾ ಮರಾ’ ಎಂದು ಜಪಿಸುತ್ತಿದ್ದಾಗ ‘ರಾಮ ರಾಮ’ ಎಂದು ಅವನ ಮನಸ್ಸಿಗೆ ಹೊಳೆಯಿತಂತೆ! ಹಾಗೆ ಅವನು ರಾಮನನ್ನು ಧ್ಯಾನಿಸಿದ್ದರಿಂದ ಅವನಿಗೆ ರಾಮನು ಪ್ರತ್ಯಕ್ಷನಾದ. ಬಳಿಕ ಅವನು ರಾಮಾಯಣದ ಕವಿಯಾದ. ಇದು ಕಥೆ.’

(‘ಶ್ರೀಮದ್ವಾಲ್ಮೀಕಿ ರಾಮಾಯಣಮ್‌ – ಬಾಲಕಾಂಡಃ’; ಕನ್ನಡ ಅನುವಾದ: ಎನ್. ರಂಗನಾಥ ಶರ್ಮಾ. ಮುನ್ನುಡಿ: ಡಿವಿಜಿ)

ಈ ಕಥೆಗೆ ಡಿವಿಜಿಯವರು ಮಾಡಿರುವ ವಿಶ್ಲೇಷಣೆಯೂ ಉಲ್ಲೇಖಾರ್ಹವಾಗಿದೆ: ‘ವಾಲ್ಮೀಕಿಯೂ ನಾರದರೂ ಮಾತನಾಡಿದ್ದು ಯಾವ ಭಾಷೆಯಲ್ಲಿ? ಸಂಸ್ಕೃತದಲ್ಲಾದರೆ ಆ ಭಾಷೆಯಲ್ಲಿ ವೃಕ್ಷಕ್ಕೆ ‘ಮರ’ ಎಂಬ ಪರ್ಯಾಯ ಪದವಿಲ್ಲ. ಬೆಳೆದ ಗಿಡ ಎಂಬರ್ಥದಲ್ಲಿ ‘ಮರ’ ಎಂಬ ಮಾತಿರುವುದು ಕನ್ನಡದಲ್ಲಿ, ತಮಿಳಿನಲ್ಲಿ; ತೆಲುಗಿನಲ್ಲಲ್ಲ, ಹಿಂದಿಯಲ್ಲಿಯೂ ಅಲ್ಲ. ವಾಲ್ಮೀಕಿ ನಾರದರು ಕನ್ನಡಿಗರೋ, ತಮಿಳರೋ? ಕಥೆಯನ್ನು ಕಥೆಯೆಂದುಕೊಂಡು ಅಲ್ಲಿಗೆ ಬಿಡಬಹುದು’.

ಹರಿಕಥೆ ಮಾಡುವವರ ಕಥೆ ಎಂದು ಡಿವಿಜಿಯವರು ಹೇಳಿರುವ ಕಥೆಗೆ ಮೂಲವನ್ನು ‘ಆನಂದರಾಮಾಯಣ’ದಲ್ಲಿ ನೋಡಬಹುದು.

ಆನಂದರಾಮಾಯಣದಲ್ಲಿ ಬರುವ ಕಥೆ ಸಂಕೀರ್ಣವಾಗಿದೆ. ಇದರ ತಾತ್ಪರ್ಯವನ್ನು ಹೀಗೆ ಸಂಗ್ರಹಿಸಬಹುದು:

ಕ್ರೂರಿಯಾಗಿದ್ದ ಬೇಡನೊಬ್ಬನಿದ್ದ. ಅವನು ಒಂದು ದಿನ ಸಪ್ತರ್ಷಿಗಳನ್ನೇ ತಡೆದು, ಬೆದರಿಸಿ, ದರೋಡೆಗೆ ಮುಂದಾದ. ‘ನಿಮ್ಮಲ್ಲಿರುವುದನ್ನೆಲ್ಲ ನನಗೆ ಕೊಡಿ; ಇಲ್ಲವಾದರೆ ನಿಮ್ಮನ್ನು ಕೊಲ್ಲುವೆ’ ಎಂದು ಬೆದರಿಸಿದ. (ಸಪ್ತರ್ಷಿಗಳ ಬಳಿ ಎಂಥ ಬೆಲೆ ಬಾಳುವ ವಸ್ತುಗಳನ್ನು ಆ ಬೇಡ ಕಂಡನೋ!) ಆಗ ಋಷಿಗಳು ಹೇಳಿದರಂತೆ – ‘ನಮ್ಮಲ್ಲಿರುವುದನ್ನೆಲ್ಲ ನಾವು ನಿನಗೆ ಕೊಡಲು ಸಿದ್ಧ. ಆದರೆ ಅದಕ್ಕೂ ಮೊದಲು ನೀನೊಂದು ಕೆಲಸವನ್ನು ಮಾಡಬೇಕು. ಮನೆಗೆ ಹೋಗಿ, ನಿನ್ನ ಹೆಂಡತಿ–ಮಕ್ಕಳನ್ನು ಅವರು ನಿನ್ನ ಪಾಪ–ಪುಣ್ಯಗಳನ್ನು ಹಂಚಿಕೊಳ್ಳುವರೆ ಎಂದು ಕೇಳು’ ಎಂದರು. ಅದರಂತೆ ಆ ಬೇಡ ಮನೆಗೆ ಹೋಗಿ ಕೇಳಲಾಗಿ, ಹೆಂಡತಿ–ಮಕ್ಕಳು ‘ನಾವು ಏಕಾದರೂ ನಿನ್ನ ಪಾಪ–ಪುಣ್ಯಗಳನ್ನು ಹಂಚಿಕೊಳ್ಳೋಣ. ನೀನು ತರುವ ಸಂಪಾದನೆಯಷ್ಟೆ ನಮ್ಮ ಪಾಲು’ ಎಂದರಂತೆ. ಈ ಮಾತನ್ನು ಕೇಳಿ ಬೇಡನಿಗೆ ಆಘಾತವಾಯಿತು. ಜೀವನದ ಬಗ್ಗೆ ಅರಿವೂ ಮೂಡಿತು. ಅವನ ಸ್ಥಿತಿಯನ್ನು ಕಂಡು ಋಷಿಗಳಿಗೂ ಕನಿಕರ ಉಂಟಾಯಿತು. ಅವರು ಅವನಿಗೆ ‘ರಾಮ’ ಎಂಬ ಮಂತ್ರವನ್ನೇ, ವ್ಯುತ್ಕ್ರಮವಾಗಿ, ಎಂದರೆ ಹಿಂದುಮುಂದಾಗಿ, ಉಪದೇಶಿಸಿದರು. ಬೇಡ ನಿರಂತರವಾಗಿ ಈ ಮಂತ್ರವನ್ನು ಜಪಿಸುತ್ತಿದ್ದ. ಇದೇ ‘ರಾಮ ರಾಮ’ ಎಂದಾಗಿ, ರಾಮನಾಮದ ದೆಸೆಯಿಂದ ಅವನ ಪಾಪವೆಲ್ಲ ನಾಶವಾಯಿತು. ಅಲುಗಾಡದೆ ಎಷ್ಟೋ ವರ್ಷಗಳು ಅವನು ಒಂದೇ ಸ್ಥಳದಲ್ಲಿ ಕುಳಿತಿದ್ದ ಕಾರಣದಿಂದಾಗಿ ಅವನ ಮೇಲೆ ದೊಡ್ಡ ಹುತ್ತವೇ ಬೆಳೆಯಿತು. ಎಷ್ಟೋ ಸಮಯದ ಬಳಿಕ ಅದೇ ಕಡೆಗೆ ಸಪ್ತರ್ಷಿಗಳು ಬಂದರು. ಬೇಡನ ಮೇಲೆ ಬೆಳೆದಿದ್ದ ಹುತ್ತವನ್ನು ಕಂಡು ಅವರಿಗೆ ಹಿಂದಿನ ಸಂಗತಿಗಳು ನೆನಪಿಗೆ ಬಂದವು. ಆ ಬೇಡನನ್ನು ಉದ್ದೇಶಿಸಿ ‘ಇನ್ನು ತಪಸ್ಸು ಸಾಕು, ಹೊರಗೆ ಬಾ’ ಎನ್ನಲು ಅವನು ಹಾಗೇ ಹೊರಗೆ ಬಂದ. ಹುತ್ತವನ್ನು ಸಂಸ್ಕೃತದಲ್ಲಿ ‘ವಲ್ಮೀಕ’ ಎನ್ನುತ್ತಾರೆ. ವಲ್ಮೀಕದಿಂದ ಮರುಹುಟ್ಟನ್ನು ಪಡೆದ ಆ ಬೇಡನೇ ‘ವಾಲ್ಮೀಕಿ’ ಆದ.

ಇಷ್ಟೂ ವಿವರಗಳಲ್ಲಿ ನಾವು ಗಮನಿಸಬೇಕಾದದ್ದು, ವಾಲ್ಮೀಕಿ ಮಹರ್ಷಿಯ ಬಗ್ಗೆ ಇರುವ ಎಲ್ಲ ವಿವರಗಳೂ ವಾಲ್ಮೀಕಿ ರಾಮಾಯಣದ ಆನಂತರದ ಕಾಲಕ್ಕೆ ಸೇರಿದವು. ಇವೆಲ್ಲವೂ ವಾಲ್ಮೀಕಿ ರಾಮಾಯಣದ ಮಹತ್ತಿನಿಂದ ಹುಟ್ಟಿಕೊಂಡ ರೂಪಕಗಳೇ ಹೌದು.

ವಾಚ್ಯಾರ್ಥದಲ್ಲಿ ಇವನ್ನು ಗ್ರಹಿಸಿದರೆ ಸ್ವಾರಸ್ಯವಿರದು. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತಿತೇನು; ಪುರುಷೋತ್ತಮನ ಆ ಅಂಥ ರೂಪ–ರೇಖೆ?’ ಗೋಪಾಲಕೃಷ್ಣ ಅಡಿಗರ ಈ ಸಾಲು ಈ ಎಲ್ಲ ರೂಪಕಗಳ ಪ್ರತಿನಿಧಿಯಾಗಿ ನಿಲ್ಲುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry