ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಕ್ಷೇತ್ರಕ್ಕೆ ಸಮೃದ್ಧ ನೀರಿನ ಭಾಗ್ಯ!

Last Updated 14 ಅಕ್ಟೋಬರ್ 2017, 6:17 IST
ಅಕ್ಷರ ಗಾತ್ರ

ಕಡೂರು: ಪಟ್ಟಣದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್‌ ಬಳಕೆ ಮಾಡುವ ಮೂಲಕ ಸಸ್ಯಕ್ಷೇತ್ರಕ್ಕೆ ಸಮೃದ್ಧ ನೀರು ಸಿಗುವಂತೆ ಮಾಡುವ ಚಿಂತನೆಗೆ ಸಾಮಾಜಿಕ ಅರಣ್ಯ ಇಲಾಖೆ ಮುಂದಾಗಿದೆ. ಕೆ.ಎಂ.ರಸ್ತೆಯಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯಕ್ಷೇತ್ರ ನೀರಿಲ್ಲದೆ ಒಣಗುತ್ತಿದೆ. ಇದ್ದ ಒಂದು ಕೊಳವೆ ಬಾವಿ ಬತ್ತಿ ಹೋಗಿ ಹಲವು ತಿಂಗಳುಗಳೇ ಕಳೆದಿವೆ. ಲಕ್ಷಾಂತರ ಗಿಡಗಳನ್ನು ಉತ್ಪಾದಿಸುವ ಈ ಕೇಂದ್ರದಲ್ಲಿ ನೀರಿಲ್ಲದಿರುವುದು ದೊಡ್ಡ ಕೊರತೆಯಾಗಿದೆ.

3 ವರ್ಷಗಳ ಬರಗಾಲ ಈ ಸಸ್ಯಕ್ಷೇತ್ರವನ್ನು ಬಹುವಾಗಿ ಕಾಡಿದ್ದರಿಂದ ಕಡೂರು ಪಟ್ಟಣದ ತ್ಯಾಜ್ಯದ ನೀರನ್ನು ಪುನರ್‌ಬಳಕೆ ಮಾಡುವ ಚಿಂತನೆ ನಡೆದಿದೆ. ಈ ನೀರನ್ನು ಶುದ್ಧೀಕರಿಸಿ ಅದನ್ನು ಸಸ್ಯಕ್ಷೇತ್ರದಲ್ಲಿ ಬೆಳೆಸುವ ಗಿಡಗಳಿಗೆ ಪೂರೈಸಲು ಸಾಧ್ಯವೇ ಎಂಬ ಬಗ್ಗೆ ಯೋಜನೆ ರೂಪಿಸಲಾಗಿದೆ.

ಇಲಾಖೆಯ ಅನುಮೋದನೆ ದೊರೆ ತಲ್ಲಿ ಅನುಷ್ಠಾನಗೊಳ್ಳಲಿದೆ. ಈ ರೀತಿಯ ತ್ಯಾಜ್ಯ ನೀರಿನ ಪುನರ್‌ಬಳಕೆ ಬಳ್ಳಾರಿ ಬಳಿಯ ಜಿಂದಾಲ್ ಫ್ಯಾಕ್ಟರಿ ಬಳಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ ಎಂದು ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಪಾಲಾಕ್ಷಪ್ಪ ಹೇಳುತ್ತಾರೆ.

ಈ ಸಾಲಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಕೃಷಿ ಪ್ರೋತ್ಸಾಹ ಯೋಜನೆಯಡಿ ತಾಲ್ಲೂಕಿನ 60 ಗ್ರಾಮ ಪಂಚಾಯಿತಿಗಳ 270 ಫಲಾನುಭವಿಗಳಿಗೆ 1.20 ಲಕ್ಷ ಗಿಡಗಳನ್ನು ನೀಡಲಾಗಿದೆ. ಮೊದಲ ಮೂರು ವರ್ಷ ಕ್ರಮವಾಗಿ ₹ 10, 15 ಮತ್ತು 20 ಒಟ್ಟು 45ಗಳನ್ನು ಸಹಾಯಧನವಾಗಿ ಇಲಾಖೆ ನೀಡುತ್ತಿದೆ.

ಈ ವರ್ಷ 15.5 ಕಿ.ಮೀ ಗಳಲ್ಲಿ ರಸ್ತೆ ಬದಿ ಗಿಡಗಳನ್ನು ನೆಡಲಾಗಿದೆ. ಬೀರೂರು ಕಾವಲಿನ 25, ಬ್ರಹ್ಮಸಮುದ್ರದ 25 ಮತ್ತು ಹಿರೇನಲ್ಲೂರಿನ 25 ಒಟ್ಟು 75 ಹೆಕ್ಟರ್ ಪ್ರದೇಶದಲ್ಲಿ ಹೆಬ್ಬೇವು ಪ್ಲಾಂಟೇಷನ್ ಮಾಡಲಾಗಿದೆ. ಲಿಂಗ್ಲಾಪುರದಲ್ಲಿ ರೇಷ್ಮೆ ಇಲಾಖೆಯ ಜಾಗದಲ್ಲಿ ಸಸ್ಯ ಕ್ಷೇತ್ರ ಮಾಡಲಾಗಿದೆ.

ಕೃಷಿ ಪ್ರೋತ್ಸಾಹ ಯೋಜನೆಯಲ್ಲಿ ಸಿಲ್ವರ್, ನುಗ್ಗೆ, ಸಾಗುವಾನಿ ಗಿಡಗಳನ್ನು ವಿತರಿಸಲಾಗಿದೆ. ರಸ್ತೆ ಬದಿಯಲ್ಲಿ ಹೊಂಗೆ, ನೇರಳೆ, ಅತ್ತಿ ಗಿಡಗಳನ್ನು ಹೆಚ್ಚು ನೆಡಲಾಗಿದ್ದು, ಅವುಗಳಿಗೆ ಬೇಸಿಗೆಯಲ್ಲಿ ಇಲಾಖೆಯಿಂದಲೇ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆಯ ಮಾಹಿತಿ ತಿಳಿಸುತ್ತದೆ.

ಪಟ್ಟಣದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ಯೋಜನೆ ಅನುಷ್ಠಾನಗೊಂಡರೆ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದು ಪಟ್ಟಣದ ನೈರ್ಮಲ್ಯವನ್ನು ಕಾಪಾಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT