ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣತಿ ಆಧಾರಿತ ಮೌಲ್ಯಮಾಪನಕ್ಕೆ ಸಜ್ಜುಗೊಳಿಸಿ

Last Updated 14 ಅಕ್ಟೋಬರ್ 2017, 8:21 IST
ಅಕ್ಷರ ಗಾತ್ರ

ಕೋಲಾರ: ಗಣತಿ ಆಧಾರಿತ ಗುಣಾಂಕ ಮೌಲ್ಯಮಾಪನಕ್ಕೆ ಮಕ್ಕಳನ್ನು ಸಜ್ಜುಗೊಳಿಸಿ, ಕ್ರಿಯಾ ಯೋಜನೆಯಡಿ ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನೋಡಲ್‌ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮುಖ್ಯ ಶಿಕ್ಷಕರಿಗೆ ಕರೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಅರ್ಧ ವಾರ್ಷಿಕ ಪರೀಕ್ಷಾ ಫಲಿತಾಂಶದ ವಿಶ್ಲೇಷಣೆ ನಡೆಸಿ ಮಾತನಾಡಿ, ಜಿಲ್ಲೆಯ 4ನೇ ತರಗತಿಯಿಂದ 9ನೇ ತರಗತಿವರೆಗಿನ ಮಕ್ಕಳಿಗೆ ನ.3 ಮತ್ತು 4ರವರೆಗೆ ಗಣತಿ ಆಧಾರಿತ ಗುಣಾಂಕ ಮೌಲ್ಯಮಾಪನ ಪರೀಕ್ಷೆ ನಡೆಯಲಿದೆ ಎಂದರು.

ಅ.31ರಂದು ಪೂರ್ವಭಾವಿಯಾಗಿ ಅಣಕು ಪರೀಕ್ಷೆ ನಡೆಯಲಿದೆ. ಇದಕ್ಕೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯೇ ಪ್ರಶ್ನೆಪತ್ರಿಕೆ ನೀಡುತ್ತದೆ. ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸಿ. ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಶೇ 60ರಷ್ಟು ಫಲಿತಾಂಶ ಬಂದಿದ್ದು, ಇದು ಸಾಲದು. ಮಕ್ಕಳ ಕಲಿಕೆ ದೃಢೀಕರಣಕ್ಕಾಗಿ ನಿರಂತರ, ವ್ಯಾಪಕ ಕಲಿಕೆ, ಮೌಲ್ಯಮಾಪನಕ್ಕೆ ಒತ್ತು ನೀಡಿ ಎಂದು ಸೂಚಿಸಿದರು.

ಕಲಿಕೆ ದೃಢೀಕರಿಸಿ: ಹಿಂದಿನ ವರ್ಷ ಎಸ್‌.ಎಸ್‌.ಎಲ್‌.ಸಿ ಫಲಿತಾಂಶದಲ್ಲಿ ಜಿಲ್ಲೆಯು 7ನೇ ಸ್ಥಾನ ಪಡೆದಿತ್ತು. ಈ ಬಾರಿ ಫಲಿತಾಂಶ ಮತ್ತಷ್ಟು ಉತ್ತಮಪಡಿಸುವ ಮೂಲಕ ಗುಣಾತ್ಮಕತೆಗೆ ಒತ್ತು ನೀಡಬೇಕು. ಅತ್ಯುನ್ನತ ಮತ್ತು ಉನ್ನತ ಶ್ರೇಣಿ ತೇರ್ಗಡೆ ಸಂಖ್ಯೆ ಹೆಚ್ಚಿಸಲು ಮಕ್ಕಳ ಕಲಿಕೆ ದೃಢಪಡಿಸಿಕೊಳ್ಳಿ. ಮಕ್ಕಳಿಗೆ ಅಧ್ಯಾಯವಾರು ಪರೀಕ್ಷೆ ನಡೆಸಿ. ಇಲಾಖೆಯ ಕ್ರಿಯಾ ಯೋಜನೆಯಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರ ಜವಾಬ್ದಾರಿ ವಿವರಿಸಲಾಗಿದೆ ಎಂದು ಹೇಳಿದರು.

ಬಾಲಕರೇ ಹೆಚ್ಚು: ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವವರ ಪೈಕಿ ಬಾಲಕರ ಸಂಖ್ಯೆಯೇ ಹೆಚ್ಚಿದೆ. ಆದ ಕಾರಣ ತರಗತಿಯಲ್ಲಿ ಬಾಲಕರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇಂಗ್ಲಿಷ್‌, ವಿಜ್ಞಾನ ವಿಷಯಗಳಲ್ಲಿ ಫಲಿತಾಂಶ ಹಿನ್ನಡೆಯಾಗುತ್ತಿದೆ. ಉರ್ದು ಮಾಧ್ಯಮದಲ್ಲಿ ದ್ವಿತೀಯ ಮತ್ತು ತೃತೀಯ ಭಾಷೆಯಲ್ಲಿ ಹಿನ್ನಡೆ ಪ್ರಮಾಣ ಹೆಚ್ಚಿದೆ. ಈ ಬಗ್ಗೆ ನಿಗಾ ವಹಿಸಿ ಫಲಿತಾಂಶ ಸುಧಾರಿಸಲು ಕ್ರಮ ಕೈಗೊಳ್ಳಿ ಎಂದು ಕಿವಿಮಾತು ಹೇಳಿದರು.

ವಿಷಯ ಪರಿವೀಕ್ಷಕರಾದ ಬಾಬು ಜನಾರ್ದನನಾಯ್ಡು, ಮಲ್ಲಿಕಾರ್ಜುನಾಚಾರಿ, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT